ಫಲಶ್ರೇಷ್ಠ ರೈತರು ರೈತರಿಗೆ ಮಾದರಿಯಾಗಲಿ: ಪಿ.ಸಿ. ಗದ್ದಿಗೌಡರ

| Published : Feb 13 2024, 12:49 AM IST

ಸಾರಾಂಶ

ಬಾಗಲಕೋಟೆ: ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ಮೇಳ -2024ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸದ ಪಿ.ಸಿ. ಗದ್ದಿಗೌಡರ, ಹಣ್ಣು-ಹಂಪಲುಗಳು ನೋಡಲು ಆಕರ್ಷಣೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳ ಸಹಾಯಕಾರಿಯಾಗಿವೆ. ಆದರೆ, ಇಂದು ಆಹಾರ ಸೇವನೆಯೇ ವಿಷಯುಕ್ತ ಆಗಿರುವುದರಿಂದ ರೈತರು ಎಚ್ಚೆತ್ತುಕೊಂಡು ವಿಷಮುಕ್ತ ಆಹಾರ ಜನತೆಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಿಯಾದ ಮಾಹಿತಿಯನ್ನು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಮಾಹಿತಿ ಪಡೆದು ತೋಟಗಾರಿಕೆ ಬೆಳೆ ಬೆಳೆಯಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಣ್ಣು-ಹಂಪಲುಗಳು ನೋಡಲು ಆಕರ್ಷಣೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳ ಸಹಾಯಕಾರಿಯಾಗಿವೆ. ಆದರೆ, ಇಂದು ಆಹಾರ ಸೇವನೆಯೇ ವಿಷಯುಕ್ತ ಆಗಿರುವುದರಿಂದ ರೈತರು ಎಚ್ಚೆತ್ತುಕೊಂಡು ವಿಷಮುಕ್ತ ಆಹಾರ ಜನತೆಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಿಯಾದ ಮಾಹಿತಿಯನ್ನು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಮಾಹಿತಿ ಪಡೆದು ತೋಟಗಾರಿಕೆ ಬೆಳೆ ಬೆಳೆಯಬೇಕು ಎಂದು ರೈತರಿಗೆ ಸಂಸದ ಪಿ.ಸಿ. ಗದ್ದಿಗೌಡರ ಸಲಹೆ ನೀಡಿದರು.

ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ಮೇಳ -2024ರ ಸಮಾರೋಪ ಭಾಷಣ ಮಾಡಿದ ಅವರು, ಪ್ರತಿ ವರ್ಷ ಹಮ್ಮಿಕೊಳ್ಳಲಾಗುವ ತೋಟಗಾರಿಕೆ ಮೇಳಗಳಲ್ಲಿ ಫಲ, ಪುಷ್ಪ, ಮಸಾಲೆ ಪದಾರ್ಥಗಳಂಥ ವಿವಿಧ ರೀತಿಯ ಪ್ರದರ್ಶನಗಳು ಜನಾಕರ್ಷಣೆಗೊಂಡು ಜನರಿಗೆ ತೋಟಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುತ್ತಿವೆ. ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ತೋಟಗಾರಿಕೆಯು ತುಂಬಾ ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ಈ ವಿಶ್ವವಿದ್ಯಾಲಯ ರೈತರಿಗೆ ನಿರಂತರ ಸೇವೆ ಒದಗಿಸಲು ಸದಾ ಸಿದ್ಧವಾಗಿ ನಿಂತಿದೆ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪುರಸ್ಕೃತ ಪುರಸ್ಕೃತ ಬೆಂಗಳೂರು ಗ್ರಾಮಾಂತರ ರೈತ ಲಕ್ಷ್ಮೀನಾರಾಯಣ ಆರ್. ತಮ್ಮ ಕೃಷಿಯ ಅನುಭವ ಹಂಚಿಕೊಳ್ಳುತ್ತ ಸಮಗ್ರ ಕೃಷಿ ಪದ್ಧತಿ ಮತ್ತು ಬಹುಬೆಳೆ ಪದ್ಧತಿ ಅನುಸರಿಸುವುದರಿಂದ ಆದಾಯ ವೃದ್ಧಿ ಮಾಡಿಕೊಳ್ಳಬಹುದು ಎಂದರು.

ರೈತ ಬಳ್ಳಾರಿಯ ಎಂ. ಆರ್. ಓಬಳೇಶ, ಕರೋನಾದ ಅವಧಿಯಲ್ಲಿ ನೌಕರಿಯಲ್ಲಿ ರಜೆ ಕೊಟ್ಟಾಗ ಕೃಷಿಯ ಕಡೆ ಗಮನ ಹರಿಸಿ 5 ಎಕರೆ ಪಾಳು ಬಿದ್ದ ಜಾಗವನ್ನು ಕೃಷಿ ಭೂಮಿಯನ್ನಾಗಿ ಮಾಡಿ ಚೆಂಡು ಹೂವು, ಬಾಳೆ, ಅಡಿಕೆ ಬೆಳೆಗಳನ್ನು ಅಂತರಬೆಳೆಯಾಗಿ ಬೆಳೆದು ಸಾಕಷ್ಟು ಆದಾಯ ಹೆಚ್ಚಿಸಿಕೊಂಡರು.

ಸಂಗಾನಟ್ಟಿಯ ಮಹಾಲಿಂಗಯ್ಯ ಇಟ್ನಾಳ ಅವರು ಸಾವಯವ ಬೆಲ್ಲದ ತಯಾರಿಕೆಯಲ್ಲಿ ಖ್ಯಾತಿ ಪಡೆದು ಅದನ್ನು ವಿಶ್ವಮಟ್ಟದಲ್ಲಿ ಬೆಳೆಸಬೇಕು ಎಂಬ ಆಶಯ ವ್ಯಕ್ತ ಪಡಿಸಿದರು. ಸಾನ್ನಿಧ್ಯ ವಹಿಸಿದ ಶಿರೂರಿನ ಡಾ.ಬಸವಲಿಂಗ ಸ್ವಾಮಿಗಳು ರೈತರು ನಾಡಿನ ದೊರೆಗಳಂತೆ. ಕೃಷಿ ಕಾಯಕವನ್ನು ಮಾಡಿದ ರೈತರಿಗೆ ನಮಸ್ಕರಿಸಿ ಸದಾ ಕೃತಜ್ಞರಾಗಿರಬೇಕು ಎಂದು ಆಶೀರ್ವಚನ ನೀಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಕುಲಪತಿ ಡಾ.ಎನ್.ಕೆ. ಹೆಗಡೆ, ಆಹಾರ ಭದ್ರತೆ, ಪೋಷಕಾಂಶದ ಕೊರತೆಗಳಿಗೆ ಹೋರಾಟ ಮಾಡಿದ ನಾವು ಈಗ ವಿಷಯುಕ್ತ ಆಹಾರಕ್ಕೆ ಹೋರಾಟ ಮಾಡಿ ವಿಷಮುಕ್ತವಾಗಿಸಬೇಕಾಗಿದೆ ಎಂದರು.

ಲಕ್ಷ್ಮೀನಾರಾಯಣ ಆರ್, ಬೆಂಗಳೂರು ಗ್ರಾಮಾಂತರ, ಚಿಕ್ಕಣ್ಣ. ಸಿ.ವಿ. ಬೆಂಗಳೂರು ಉತ್ತರ, ಪ್ರಸನ್ನ. ಎಂ.ಜಿ. ಕೋಂ ಗೋವಿಂದಯ್ಯ ಎಂ. ರಾಮನಗರ ಜಿಲ್ಲೆ, ಪಿ.ಸಿ. ಭರತ್ಕುಮಾರ್, ತುಮಕೂರು ಜಿಲ್ಲೆ, ಹನುಮಂತಪ್ಪ ಹುಚನೂರು, ಕೊಪ್ಪಳ, ಮಡ್ಡಿಪಾಟಿ ತುಳಸಿರತ್ನಂ, ರಾಯಚೂರು, ಓಬಳೇಶ ಎಂ.ಆರ್. ಬಳ್ಳಾರಿ, ಎ.ಜಿ. ಪನಿಶಾಯಿ, ವಿಜಯನಗರ ಜಿಲ್ಲೆ ಈ ಎಂಟು ಜನ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ. ಶಿವಮೂರ್ತಿ ತಿಮ್ಮಣ್ಣ ಎಲ್. ಅರಳಿಮಟ್ಟಿ, ರಂಗಸ್ವಾಮಿ ಚಂದ್ರಪ್ಪ, ಡಾ. ಎಚ್.ಪಿ. ಮಹೇಶ್ವರಪ್ಪ,ಡೀನ್ ಡಾ. ರವೀಂದ್ರ ಮುಲಗೆ, ಸ್ನಾತಕೋತ್ತರ ಮತ್ತು ಎಲ್ಲ ಮಹಾವಿದ್ಯಾಲಯಗಳ ಡೀನ್ ರು ಉಪಸ್ಥಿತರಿದ್ದರು.

ಡಾ. ಟಿ.ಬಿ. ಅಳ್ಳೊಳ್ಳಿ ಸ್ವಾಗತಿಸಿದರು. ಡಾ.ಲಕ್ಷ್ಮೀನಾರಾಯಣ ಹೆಗಡೆ, ವರದಿ ವಾಚಿಸಿದರು. ಡಾ. ರಾಮಚಂದ್ರ ನಾಯಕ ಡಾ.ಸಂಜೀವ ರೆಡ್ಡಿ ಮತ್ತು ಡಾ.ದೀಪಾ ತೇರದಾಳ ನಿರೂಪಿಸಿದರು.