ಪ್ರತಿಭೆಗೆ ಪ್ರೋತ್ಸಾಹ ಸಿಗಲಿ: ಸುಭಾಸ ನರೇಂದ್ರ

| Published : Oct 25 2024, 12:48 AM IST

ಸಾರಾಂಶ

ಸರ್ಕಾರಿ ಶಾಲೆಯ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಭಿನಯ ತರಬೇತಿ ನೀಡಿ ಅವರಲ್ಲಿನ ಕಲಾ ಪ್ರತಿಭೆಯನ್ನು ನೀರೆರೆದು ಪ್ರೋತ್ಸಾಹಿಸುತ್ತಿದೆ.

ಹುಬ್ಬಳ್ಳಿ:

ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆ ಚಿಗುರೊಡೆದು ಮರವಾಗಿ ಫಲ ಕೊಡಬೇಕು, ಪ್ರೋತ್ಸಾಹದ ಕೊರತೆಯಿಂದ ಕಮರಿಹೋಗಬಾರದು ಎಂದು ಸುನಿಧಿ ಕಲಾ ಸೌರಭದ ಅಧ್ಯಕ್ಷ ಹಾಗೂ ಧಾರವಾಡ ರಂಗಾಯಣದ ಮಾಜಿ ಅಧ್ಯಕ್ಷ ಸುಭಾಸ ನರೇಂದ್ರ ಹೇಳಿದರು.

ಇಲ್ಲಿನ ದೇವಾಂಗಪೇಟೆ ರಾಜಾಜಿನಗರದ ಚೈತನ್ಯ ಧಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಸಹಯೋಗದಲ್ಲಿ ಏರ್ಪಡಿಸಿದ್ದ ಅಭಿನಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸಂಸ್ಥೆ ಸರ್ಕಾರಿ ಶಾಲೆಯ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಭಿನಯ ತರಬೇತಿ ನೀಡಿ ಅವರಲ್ಲಿನ ಕಲಾ ಪ್ರತಿಭೆಯನ್ನು ನೀರೆರೆದು ಪ್ರೋತ್ಸಾಹಿಸುತ್ತಿದೆ. ಈ ಉದ್ದೇಶದಿಂದ ಕಳೆದ 20 ವರ್ಷಗಳಿಂದ ತರಬೇತಿ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಶಿಬಿರಕ್ಕೆ ಚಾಲನೆ ನೀಡಿದ ಕಾಮಾಕ್ಷಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಮಂಗಲಾ ನಾಡಕರ್ಣಿ ಮಾತನಾಡಿ, ಸುನಿಧಿ ಕಲಾ ಸೌರಭವು ಅಭಿನಯ ತರಬೇತಿ ಶಿಬಿರದ ಮೂಲಕ ಮಕ್ಕಳಲ್ಲಿ ಕಲಾಸಕ್ತಿ ಬೆಳೆಸುವ ಜತೆಗೆ ಪ್ರತಿಭಾವಂತರನ್ನಾಗಿ ರೂಪಿಸುತ್ತಿದೆ. ಮಕ್ಕಳು ಆಸಕ್ತಿಯಿಂದ ಕಲಿತು ಕಲಾವಿದರಾಗಿ ಹೊರ ಹೊಮ್ಮಲಿ ಎಂದು ಹೇಳಿದರು.

ಯೋಗ ಶಿಕ್ಷಕ ಎಂ.ಜಿ. ನೀಲಕಂಠನವರ, ಶ್ರೀರಂಗ ತಿಳವಳ್ಳಿ ಮಾತನಾಡಿದರು. ಶುಭಾಂಗಿ ನರೇಂದ್ರ, ಕಲಾವತಿ ಶಿಂಧೆ, ಸುಧಾ ಕೇಸರಕರ, ಸಂಧ್ಯಾ ದೀಕ್ಷಿತ, ಪದ್ಮಜಾ ಉಮರ್ಜಿ, ಪದ್ಮಜಾ ಕಟ್ಟಿಮನಿ, ಕವಿತಾ ನೀಲಗುಂದ, ಆಶಾಬೇಗಂ ಮುನವಳ್ಳಿ, ಬಸವರಾಜ ಗಾಯದ, ಎಸ್.ವಿ. ನೀಲಗುಂದ, ಬಸವರಾಜ ನರಸಾಪುರ, ದೇವರಾಜ ಲಾಳಿ, ಗಣಪತಿ ಪ್ರಭು, ಲಕ್ಷ್ಮಣ ಸುಣಗಾರ ಸೇರಿದಂತೆ ಹಲವು ಮಕ್ಕಳು ಭಾಗವಹಿಸಿದ್ದರು. ಸುನಿಧಿ ಕಲಾ ಸೌರಭದ ಕಾರ್ಯದರ್ಶಿ ವೀಣಾ ಅಠವಲೆ ಸ್ವಾಗತಿಸಿ, ವಂದಿಸಿದರು.