ಹಿಂದೆ ಶಿಕ್ಷಕರು ಕೇವಲ ಬೋಧನೆಗೆ ಸೀಮಿತರಾಗಿದ್ದರು, ಈಗ ಶಿಕ್ಷಕರು ಬೋಧನೆ ಬಿಟ್ಟು ಬೇರೆ ಕೆಲಸಗಳಿಗೆ ಸೀಮಿತರನ್ನಾಗಿಸುವ ಕಾಲ ಬಂದಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಹಿಂದೆ ಶಿಕ್ಷಕರು ಕೇವಲ ಬೋಧನೆಗೆ ಸೀಮಿತರಾಗಿದ್ದರು, ಈಗ ಶಿಕ್ಷಕರು ಬೋಧನೆ ಬಿಟ್ಟು ಬೇರೆ ಕೆಲಸಗಳಿಗೆ ಸೀಮಿತರನ್ನಾಗಿಸುವ ಕಾಲ ಬಂದಿದೆ. ಹೀಗಾದರೇ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ. ಅದಕ್ಕಾಗಿ ಸರ್ಕಾರ ಶಿಕ್ಷಕರಿಗೆ ಕೇವಲ ಬೋಧನೆ ಮಾಡಲಿಕ್ಕೆ ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ಬೇರೆ ಕೆಲಸಗಳ ಜವಾಬ್ದಾರಿ ನೀಡಬಾರದು ಎಂದು ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ ಆಗ್ರಹಿಸಿದರು.

ಇತ್ತೀಚೆಗೆ ತಾಲೂಕಿನ ತತ್ವಣಗಿ ಗ್ರಾಮಸ್ಥರು ಆಯೋಜಿಸಿದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕಿ ವಿದ್ಯಾ ತಿಮ್ಮಣ್ಣ ನಾಯಕರ ಬೀಳ್ಕೂಡುಗೆ ಸಮಾರಂಭದಲ್ಲಿ ಮಾತನಾಡಿದರು.

ಗುಣಮಟ್ಟದ ಶಿಕ್ಷಣವನ್ನು ಬಯಸುವ ಸರ್ಕಾರ ಇನ್ನೊಂದೆಡೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಅವಕಾಶ ಒದಗಿಸಬೇಕು. ಶಿಕ್ಷಣ ಇಲಾಖೆಯ ಸೇವೆ ಜೊತೆಯಲ್ಲಿ ನೀಡಲಾಗುತ್ತಿರುವ ಹೆಚ್ಚುವರಿ ಕೆಲಸಗಳ ಒತ್ತಡದಿಂದ ಸಮಸ್ತ ಶಿಕ್ಷಕ ವೃಂದವು ಬೇಸತ್ತು ಹೋಗಿದೆ. ಹೀಗಿರುವಾಗ ಕೇವಲ ಶಿಕ್ಷಣ ಬೋಧನೆ ನೀಡಲು ಅವಕಾಶ ಮಾಡಿಕೊಟ್ಟರೇ ಗುಣಮಟ್ಟದ ಶಿಕ್ಷಣ ಸಾಧ್ಯ ಎಂದರು.

ಶಿಕ್ಷಕರ ಸಂಘದ ಪ್ರಮುಖ ಪ್ರಶಾಂತ ನಾಯಕ, ಬಿಆರ್‌ಸಿ ಕೇಂದ್ರದ ಸಮನ್ವಯಾಧಿಕಾರಿ ಮಹಾದೇವಿ ಚೌಗಲೆ ಹಾಗೂ ತಾಲೂಕು ದೈಹಿಕ ಪರಿವೀಕ್ಷಕರಾದ ಜ್ಯೋತಿ ಪ್ರಭಾ ಹಾಗೂ ಮಠಪತಿ, ಪ್ರಭಾರಿ ಮುಖ್ಯ ಶಿಕ್ಷಕಿ ಡೇಸಿ ಮಸ್ಕರೆನ್ಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋನು ದೊಡ್ಮಣಿ, ಗ್ರಾಮದ ಹಿರಿಯರಾದ ಬೇಗೂರ ಹಾಗೂ ಶಾಲೆಯ ಹಿರಿಯ ಶಿಕ್ಷಕ ಆರ್.ಸಿದ್ದಲಿಂಗಪ್ಪ, ಸಹನಾ ನಾಯಕ್ ಮಾತನಾಡಿದರು.

ನಿವೃತ್ತ ಮುಖ್ಯೋಧ್ಯಾಪಕಿ ವಿದ್ಯಾ ತಿಮ್ಮಣ್ಣ ನಾಯಕ ಸರ್ವರಿಗೂ ವಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಳೆಯ ವಿದ್ಯಾರ್ಥಿನಿ, ತತ್ವಣಗಿ ಗ್ರಾಪಂ ಅಧ್ಯಕ್ಷೆ ನಾಗಮ್ಮಾ ಬೇಗೂರ ವಹಿಸಿದ್ದರು.

ಶಿಕ್ಷಕಿ ರಾಧಾ ಬೂದಪ್ಪನವರ, ಯುವ ಉದ್ಯಮಿ ವಿವೇಕ ನಾಯಕ, ತಾಲೂಕಿನೆಲ್ಲೆಡೆಯಿದ ಆಗಮಿಸಿದ ಶಿಕ್ಷಕ ವೃಂದದವರು ಹಾಗೂ ಅವರ ಕುಟುಂಬದವರು ಇದ್ದರು. ಶಿಕ್ಷಕಿ ನಂದಾ ನರಗುಂದ ಕಾರ್ಯಕ್ರಮ ನಿರ್ವಹಿಸಿದರು.