ಶಿಕ್ಷಕರು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಲಿ: ಶಾಸಕ ಡಿ.ರವಿಶಂಕರ್

| Published : Sep 19 2024, 01:55 AM IST

ಶಿಕ್ಷಕರು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಲಿ: ಶಾಸಕ ಡಿ.ರವಿಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕ್ಷೇತ್ರ ಪವಿತ್ರವಾದುದಾಗಿದ್ದು ಇದನ್ನು ಅರಿತು ಬಲಿಷ್ಠ ಮತ್ತು ಶಕ್ತಿಯುತ ಸಮಾಜ ನಿರ್ಮಾಣಕ್ಕೆ ಕಂಕಣಬದ್ದರಾಗಿ ಕೆಲಸ ಮಾಡಿ ವಿದ್ಯಾರ್ಥಿಗಳು ಎಂತಹ ಸಂಕಷ್ಟ ಬಂದರು ಜಗ್ಗದೆ ಕುಗ್ಗದೆ ಶಕ್ತಿಯುತವಾಗಿ ರೂಪುಗೊಳ್ಳುವಂತೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಶಿಕ್ಷಕರು ವಿದ್ಯಾರ್ಥಿಗಳನ್ನು ಅನರ್ಘ್ಯ ರತ್ನಗಳನ್ನಾಗಿ ರೂಪಿಸಿ ಸಮಾಜಕ್ಕೆ ಅಮೂಲ್ಯ ಕೊಡುಗೆಯನ್ನಾಗಿ ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಮತ್ತು ಶಿಕ್ಷಕರ ದಿನಾಚರಣಾ ಸಮಿತಿಯ ವತಿಯಿಂದ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಶಿಕ್ಷಕರು ದಿವಂಗತ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ರೂಢಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ತಿಳಿಸಿದರು.

ಶಿಕ್ಷಣ ಕ್ಷೇತ್ರ ಪವಿತ್ರವಾದುದಾಗಿದ್ದು ಇದನ್ನು ಅರಿತು ಬಲಿಷ್ಠ ಮತ್ತು ಶಕ್ತಿಯುತ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿ ಕೆಲಸ ಮಾಡಿ ವಿದ್ಯಾರ್ಥಿಗಳು ಎಂತಹ ಸಂಕಷ್ಟ ಬಂದರು ಜಗ್ಗದೆ ಕುಗ್ಗದೆ ಶಕ್ತಿಯುತವಾಗಿ ರೂಪುಗೊಳ್ಳುವಂತೆ ಮಾಡಬೇಕೆಂದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ಮಾಜಿ ಅಧ್ಯಕ್ಷ ಬಿ.ವಿ. ಪ್ರಸನ್ನಕುಮಾರ್, ತಾ. ಸಾಮರಸ್ಯ ಪ್ರಾಥಮಿಕ ಶಾಲಾ ಶಿಕ್ಷಕರ. ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಪುರುಷೋತ್ತಮ, ಕಾರ್ಯದರ್ಶಿ ಸಿ.ಎನ್.ಸ್ವಾಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸೈಯದ್ ರಿಜ್ವಾನ್, ಖಜಾಂಚಿ ನಾಗರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ಡಿ.ವಿ. ಗುಡಿಪ್ರಸನ್ನ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಪುರಸಭಾ ಸದಸ್ಯರಾದ ನಟರಾಜು, ಶಂಕರ್ ಸ್ವಾಮಿ, ಮಾಜಿ ಸದಸ್ಯ ಕೆ.ವಿನಯ್, ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾಂಭ, ಉಪ ನಿರ್ದೇಶಕ ಟಿ. ಜವರೇಗೌಡ, ಬಿಇಓ ಆರ್. ಕೃಷ್ಣಪ್ಪ, ಬಿ.ಆರ್.ಸಿ ವೆಂಕಟೇಶ್, ತಹಸೀಲ್ದಾರ್ ಜೆ. ಸುರೇಂದ್ರ ಮೂರ್ತಿ, ತಾಪಂ ಇಒ ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ಶಿಕ್ಷಕರಾದ ರುಕ್ಮಿಣಿ, ಭಾರತಿ, ರಶ್ಮಿಮಂಜುನಾಥ್, ಕಾವ್ಯಚೇತನ್, ಕೃಷ್ಣನಾಯಕ, ಲಕ್ಷ್ಮಿಕಾಂತ್, ಕುಮಾರಸ್ವಾಮಿ, ದಾಸಪ್ಪ ಇದ್ದರು.

ಮಹಾನ್ ಪುರುಷ ಡಾ.ಸರ್ವಪಲ್ಲಿ ರಾಧಾಕೃಷ್ಣನ್: ಎಚ್.ವಿಶ್ವನಾಥ್

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಜನತಂತ್ರ ವ್ಯವಸ್ಥೆಯಲ್ಲಿ ಉತ್ತುಂಗದ ಸ್ಥಾನವಾಗಿರುವ ರಾಷ್ಟ್ರಪತಿ ಹುದ್ದೆಯನ್ನು ಶಿಕ್ಷಕನು ಅಲಂಕರಿಸಬಹುದು ಎಂಬುದನ್ನು ತಮ್ಮ ಶಿಕ್ಷಣ, ನಡತೆ ಮತ್ತು ವಿದ್ವತ್ತಿನಿಂದ ತೋರಿಸಿಕೊಟ್ಟ ಮಹಾನ್ ಪುರುಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಪಟ್ಟಣದ ಪುರಸಭೆಯ ಬಯಲು ರಂಗ ಮಂದಿರದ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಮೂಲವೇ ಅಕ್ಷರ ಹಾಗಾಗಿ ಅದನ್ನು ಕಲಿಸುವವರಿಗೆ ಬೆಲೆ ಇದ್ದು ಶಿಕ್ಷಕರು ಇದನ್ನು ಅರಿತು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದರು.

ಮಹಿಳೆಯರಿಗೂ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ತಮ್ಮ ಜೀವನವಿಡಿ ನಿರಂತರ ಹೋರಾಟ ಮಾಡಿ ಅದರಲ್ಲಿ ಯಶ ಕಂಡ ಅಕ್ಷರದವ್ವ ಸಾವಿತ್ರಿ ಭಾಪುಲೆ ಜಗತ್ತಿಗೆ ಮಾದರಿ ಎಂದು ಪ್ರಶಂಸಿಸಿದರು.

ಪುಸ್ತಕದಲ್ಲಿ ಇರುವುದನ್ನು ಮಕ್ಕಳಿಗ ಹೇಳುವುದಲ್ಲ ಅದರ ಜತೆಗೆ ಸಾಮಾನ್ಯ ಜ್ಞಾನವನ್ನು ಅವರ ಮಸ್ತಕದಲ್ಲಿ ತುಂಬಿ ಅಕ್ಷರದ ದಾಹ ಅರಿತು ವಿದ್ಯಾರ್ಥಿಗಳನ್ನು ಸಮಾಜಮುಖಿಗಳನ್ನಾಗಿ ಮಾಡಬೇಕಾದುದು ಶಿಕ್ಷಕರ ಕರ್ತವ್ಯ ಎಂದು ತಿಳಿಸಿದರು.

ನಾಡು ಹಾಗೂ ದೇಶ ಕಟ್ಟುವ ಕೆಲಸ ಮಾಡುವ ಶಿಕ್ಷಕ ಬಾಂಧವರು ತಮ್ಮಲ್ಲಿಯೂ ತಪ್ಪಿದ್ದರೆ ಅದನ್ನು ಒಪ್ಪಿಕೊಂಡು ಇತರಿಗೆ ಮಾದರಿಯಾಗಬೇಕೆಂದ ವಿಧಾನ ಪರಿಷತ್ ಸದಸ್ಯರು ಇತ್ತೀಚಿನ ದಿನಗಳಲ್ಲಿ ಪದವೀಧರ ಶಿಕ್ಷರ ಕ್ಷೇತ್ರ ಮತ್ತು ಇತರ ಸಂಘಗಳ ಚುನಾವಣೆಗಳ ಸಮಯದಲ್ಲಿ ಕೆಲವರು ಹಣ ಹಾಗೂ ಹೆಂಡದ ಆಮಿಷಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಎಂದರು.