ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕಪ್ಪು ಚಿಕ್ಕೆ ಇಲ್ಲದ ರಾಜಕೀಯ ಜೀವನ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಆರೋಪಿಯಾಗಿದ್ದು, ತಕ್ಷಣವೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಪ್ರಾಮಾಣಿಕತೆ ಸಾಬೀತುಪಡಿಸಲಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಒಂದು ವೇಳೆ ಪ್ರಾಮಾಣಿಕರಾಗಿದ್ದಲ್ಲಿ ಮುಂದೆ ಮತ್ತೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿ ಅಲ್ಲಿಯವರೆಗೆ ತನಿಖೆಗೆ ಸಹಕರಿಸಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮೂಡಾ ಹಗರಣ ನಾಚಿಕೆ ತರಿಸುವಂಥದ್ದು, ಪತ್ನಿಯ ಹೆಸರಲ್ಲಿ ದಲಿತ ಸಮುದಾಯದವರ ಜಾಗವನ್ನು ಒತ್ತುವರಿ ಮಾಡಿಕೊಂಡು, ಕುಟುಂಬಸ್ಥರಿಂದ ದೇಣಿಗೆ ಬಂದಿದ್ದು ಎಂದು ಹೇಳಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬದಲಿ ನಿವೇಶನಕ್ಕೆ ಅರ್ಜಿ ಹಾಕಿದ್ದಾರೆ. ಇದು ಅತ್ಯಂತ ಮೋಸದ ಕ್ರಮ ಇದರಿಂದ ಇ.ಡಿ ತನಿಖೆ ಎದುರಾಗುತ್ತದೆ ಎಂದು ಹೆದರಿ ನಿವೇಶನಗಳನ್ನು ವಾಪಸ್ ಕೊಡುವ ನಿರ್ಧಾರ ಮಾಡಿದ್ದಾರೆ. ಅದೇನಿದ್ದರೂ ತನಿಖೆಯಾಗಲೇಬೇಕು, ಸಿದ್ದರಾಮಯ್ಯ ಅವರು ನಿಷ್ಪಕ್ಷಪಾತ ತನಿಖೆಗೆ ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ ಎಂದರು.2008 ರಿಂದ 2013ರ ಅವದಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಲೋಕಾಯುಕ್ತಕ್ಕೆ ಬಲ ತುಂಬಿದರು. ನಂತರ ಬಂದ ಸಿದ್ದರಾಮಯ್ಯ ಅವರು ಎಸ್‌ಐಟಿ ಸ್ಥಾಪಿಸಿ ಲೋಕಾಯುಕ್ತವನ್ನು ಬಲಹೀನವಾಗಿಸಿದರು. ಸಿದ್ದರಾಮಯ್ಯ ಅವರ ಅಕ್ರಮವನ್ನು ಬಯಲಿಗೆಳೆಯುವ ಭಯದಿಂದ ಸಿಬಿಐ ತನಿಖೆ ದೂರವಿಡಲು ರಾಜ್ಯಕ್ಕೆ ಪ್ರವೇಶ ನಿಷೇಧ ಮಾಡಲಾಗಿದೆ. ಕೋರ್ಟ್ ಸೂಚನೆಯ ನಂತರವೂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲು ಒಂದು ದಿನ ಅನಗತ್ಯ ತಡ ಮಾಡಲಾಗಿದೆ. ಬಿಜೆಪಿ ನಡೆಸಿದ ಪಾದಯಾತ್ರೆ ಹೋರಾಟ ತನಿಖೆ ಚುರುಕಾಗಲು ಕಾರಣವಾಯಿತು ಎಂದು ತಿಳಿಸಿದರು.
ಮೂಡಾ ನಿವೇಶನ ಬದಲಾವಣೆ ಕೋರಿ ಒಂದು ಲಕ್ಷ ಜನ ಅರ್ಜಿ ಹಾಕಿದ್ದಾರೆ, ಅದರಲ್ಲಿ ಇವರದ್ದೇ ಅರ್ಜಿಯನ್ನು ಪರಿಗಣಿಸಿದ್ದ ಸಿಎಂ ಅವರಿಗೆ ಅನುಕೂಲ ಮಾಡಿಕೊಡಲು ಎಂಬುವದರಲ್ಲಿ ಸಂದೇಹವೇ ಇಲ್ಲ. ಮೂಡಾದಲ್ಲಿ 4ರಿಂದ 5ಸಾವಿರ ಕೋಟಿ ರು. ಅಕ್ರಮ ನಡೆದಿದೆ. ಈ ಕುರಿತು ಜಾರಿ ನಿರ್ದೇಶನಾಲಯ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದರು.ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಕೆಂಪಣ್ಣ ಆಯೋಗದ ವರದಿ ಮೂಲೆ ಗುಂಪಾಯಿತು. ವಾಲ್ಮೀಕಿ ಹಗರಣ ಬಳ್ಳಾರಿಯ ಚುನಾವಣೆಗೆ ದೇಶವನ್ನೇ ಬೆಚ್ಚಿ ಬೀಳಿಸುವಂತಿತ್ತು. ಇದೆಲ್ಲ ಆದ ಮೇಲೆ ಇದೀಗ ಮೂಡಾ ಹಗರಣ ಕಾಂಗ್ರೆಸ್ ಆಡಳಿತದ ಕಾರ್ಯ ವೈಖರಿಯನ್ನು ರಾಜ್ಯದ ಜನರ ಮುಂದೆ ಬಟಾಬಯಲು ಮಾಡಿದೆ, ಮೂಡಾ ಹಗರಣ ಸಿಬಿಐ ತನಿಖೆಯಾದಲ್ಲಿ ಎಲ್ಲವೂ ಎಳೆ ಎಳೆಯಾಗಿ ಹೊರಬರಲಿದೆ ಎಂದು ಹೇಳಿದರು.
ಎಸ್‌ಐಟಿ ಅಂದರೆ ಸ್ಪೆಷಲ್ ಟಾಸ್ಕ್ ಫೋರ್ಸ್ ಅಲ್ಲ. ಅದು ಸಿದ್ದರಾಮಯ್ಯ, ಶಿವಕುಮಾರ ಹಾಗೂ ಸುರ್ಜೇವಾಲಾ ಟಾಸ್ಕ್ ಫೋರ್ಸ್ ಎಂದು ಶಾಸಕ ಡಾ.ಬೆಲ್ದಾಳೆ ಲೇವಡಿ ಮಾಡಿದರು.ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ತಹಸೀಲ್ ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ರೇಷನ್ ಕಾರ್ಡ್ ಪಡೆಯಲು 5ರಿಂದ 6ಸಾವಿರ ರು. ವರೆಗೆ ಲಂಚ ಕೊಡಬೇಕು.
ಕಾಂಗ್ರೆಸ್ ದಲಿತ ಸಮುದಾಯದ ಬೆನ್ನಿಗೆ ಚೂರಿ ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾನೂನು ಸುವ್ಯವಸ್ಥೆಯಂತೂ ಹತೋಟಿ ತಪ್ಪಿದೆ. ಒಬ್ಬ ಶಾಸಕನಿಗೆ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸಲೂ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜೀನಾಮೆ ನೀಡುವವರೆಗೆ ನಾವು ಸುಮ್ಮನಿರಲ್ಲ ಪಕ್ಷ ಹೋರಾಟಗಳನ್ನು ಹೂಡಿಕೊಳ್ಳುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಕಿರಣ ಪಾಟೀಲ್, ಪೀರಪ್ಪ, ಸುಧೀರ, ಬಸವರಾಜ ಪವಾರ ಹಾಗೂ ಗುರುನಾಥ ರಾಜಗೀರಾ ಇದ್ದರು.ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ರಾಜ್ಯದ ಜನತೆಯ ಘನತೆಯನ್ನು ಕಾಪಾಡಲಾಗಿತ್ತು. ಇದೀಗ ಸಿದ್ದರಾಮಯ್ಯ ಅವರ ಹಠಮಾರಿತನ ವಾಕರಿಕೆ ತರಿಸುವಂತಿದೆ.
-ಶರಣು ಸಲಗರ, ಬಸವಕಲ್ಯಾಣ ಶಾಸಕ