ಸಾರಾಂಶ
ವೈದ್ಯರು ತಮ್ಮ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಯುರ್ವೇದವನ್ನು ನವೀಕರಿಸುವ ಕಾರ್ಯವಾಗಬೇಕಿದೆ ಎಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅಭಿಪ್ರಾಯ ಪಟ್ಟರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವೈದ್ಯರು ತಮ್ಮ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಯುರ್ವೇದವನ್ನು ನವೀಕರಿಸುವ ಕಾರ್ಯವಾಗಬೇಕಿದೆ ಎಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅಭಿಪ್ರಾಯ ಪಟ್ಟರು.ಶುಕ್ರವಾರ ನಗರದ ಗೋಕುಲ ರಸ್ತೆಯಲ್ಲಿರುವ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದಕ್ಕೆ ಪ್ರಪಂಚದ ಅನೇಕ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಲ್ಲಿಯೂ ಪ್ರಾಮುಖ್ಯತೆ ಹಾಗೂ ಮಾನ್ಯತೆ ದೊರಕುತ್ತಿದೆ. ಈ ಸಂದರ್ಭದಲ್ಲಿ ವೈದ್ಯರು ಹೊಸ ಹೊಸ ಆವಿಷ್ಕಾರ ಕೈಗೊಳ್ಳುವ ಮೂಲಕ ಆಯುರ್ವೇದಕ್ಕೆ ಹೊಸ ರೂಪ ಕೊಡಲು ಶ್ರಮಿಸುವಂತೆ ಕರೆ ನೀಡಿದರು.ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಮಾತನಾಡಿ, ಆಯುರ್ವೇದದ ವಿಶೇಷ ಚಿಕಿತ್ಸಾ ಕ್ರಮಗಳಾದ ಪಂಚಕರ್ಮ, ಕ್ಷಾರ ಸೂತ್ರ ಚಿಕಿತ್ಸೆ, ರಸಾಯನ ಮುಂತಾದವುಗಳನ್ನು ಅತಿಹೆಚ್ಚು ಜನರಿಗೆ ತಲಪುವಂತೆ ಮಾಡಿ, ಕ್ಷೀಣಿಸುತ್ತಿದ್ದ ಆಯುರ್ವೇದದ ಗತ ವೈಭವವನ್ನು ಪುನರ್ ಸ್ಥಾಪಿಸುವುದು ಆಯುರ್ವೇದ ದಿನಾಚರಣೆಯ ಪ್ರಮುಖ ಉದ್ದೇಶ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಶಾರದಾ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಹನುಮಂತಾಚಾರ್ಯ ಜೋಶಿ ಮಾತನಾಡಿ, ಆಯುರ್ವೇದ ಒಂದು ವಿಶಾಲವಾದ ಸಾಗರವಿದ್ದಂತೆ, ಅದನ್ನು ಅರ್ಥೈಸಿಕೊಳ್ಳಲು ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿರ್ಗಳು ಮೊಬೈಲ್ ರ್ದುಬಳಕೆಯಿಂದ ದೂರವಿದ್ದು, ಆಯುರ್ವೇದದ ಗ್ರಂಥ ಹಾಗೂ ಸಂಹಿತೆಗಳ ಕೂಲಂಕಷವಾದ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಡಾ. ಚರಂತಯ್ಯ ಹಿರೇಮಠ ಮಾತನಾಡಿ, ಆಯುರ್ವೇದದಲ್ಲಿರುವ ಅನೇಕ ತತ್ವ ಸಿದ್ಧಾಂತಗಳ ಮೇಲೆ ಸಂಶೋಧನೆಗಳನ್ನು ನಡೆಸುವುದು ಒಂದು ದೊಡ್ಡ ಸವಾಲಿದ್ದಂತೆ. ಆದರೆ, ಆ ಸವಾಲನ್ನೇ ಒಂದು ಅವಕಾಶವನ್ನಾಗಿಸಿಕೊಂಡು ನಮ್ಮ ಸಂಸ್ಥೆಯು ಅನೇಕ ಸಂಶೋಧನೆಗಳನ್ನು ಕೈಗೆತ್ತಿಕೊಂಡಿದೆ ಎಂದರು.
ಸೃಷ್ಟಿ ರೇವಡಿಗರ ಹಾಗೂ ಅನಿತಾ ಧನ್ವಂತರಿ ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಪವಿತ್ರಾ, ಧಾತ್ರಿ, ಸೌಮ್ಯಾ ಧನ್ವಂತರಿ ಗೀತೆ ಹಾಡಿದರು. ಪಟವರ್ಧನ್ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಗೌರೀಶ ಅಸೂಟಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ವಂದಿಸಿದರು.