ದಾರ್ಶನಿಕರ ಜಯಂತಿಗಳು ಒಂದೇ ವೇದಿಕೆಯಲ್ಲಾಗಲಿ

| Published : Mar 15 2025, 01:06 AM IST

ಸಾರಾಂಶ

ಸರಕಾರ ದಲಿತ, ಹಿಂದುಳಿದ ಸಮುದಾಯಗಳ ದಾರ್ಶನಿಕರ ಜಯಂತಿಗಳನ್ನು ಆಚರಿಸಲು ಅವಕಾಶ ಕಲ್ಪಿಸಿದೆ. ಆದರೆ ಈ ಎಲ್ಲರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಅವಕಾಶ ಕಲ್ಪಿಸಿದರೆ ಹಿಂದುಳಿದ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸಹ ಗಮನಹರಿಸಬೇಕಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಚಿದಾನಂದ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು ಸರಕಾರ ದಲಿತ, ಹಿಂದುಳಿದ ಸಮುದಾಯಗಳ ದಾರ್ಶನಿಕರ ಜಯಂತಿಗಳನ್ನು ಆಚರಿಸಲು ಅವಕಾಶ ಕಲ್ಪಿಸಿದೆ. ಆದರೆ ಈ ಎಲ್ಲರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಅವಕಾಶ ಕಲ್ಪಿಸಿದರೆ ಹಿಂದುಳಿದ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸಹ ಗಮನಹರಿಸಬೇಕಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಚಿದಾನಂದ ತಿಳಿಸಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬಲಿಜ ಸಂಘ ತುಮಕೂರು ಆಯೋಜಿಸಿದ್ದ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ರ 299ನೇ ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ನಾಡಿನ ಸಣ್ಣ ಸಣ್ಣ ಜನಾಂಗಗಳಿಗೆ ಆ ಸಮುದಾಯದ ದಾರ್ಶನಿಕರ ಜಯಂತಿಗಳನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಅವಕಾಶ ಕಲ್ಪಿಸಿದೆ. ಆದರೆ ಇಂತಹ ದಾರ್ಶಾನಿಕರು ಒಂದು ಸಮುದಾಯಕ್ಕೆ ಮಾತ್ರ ಸಿಮೀತವಾಗಿ, ಮೈಕ್ರೋ ಮೈನಾರಿಟಿ ಸಮುದಾಯಗಳ ನಡುವೆ ಒಗ್ಗಟ್ಟೇ ಇಲ್ಲದಂತಾಗಿದೆ. ಹಾಗಾಗಿ ಎಲ್ಲರ ಜಯಂತಿಗಳು ಒಂದೇ ವೇದಿಕೆಯಲ್ಲಿ ನಡೆದರೆ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆಯಲು ಸಹಕಾರ ಕಲ್ಪಿಸಿದಂತಾಗುತ್ತದೆ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಸಾಮಾನ್ಯರಾಗಿ ಹುಟ್ಟಿ, ಅಸಮಾನ್ಯರಾಗಿ ಬೆಳೆದ ಅನೇಕ ಸಂತರು, ಸಾಧುಗಳು, ದಾರ್ಶಾನಿಕರು, ಕಾಲಜ್ಞಾನಿಗಳನ್ನು ಸ್ಮರಿಸುವ ಕೆಲಸವನ್ನು ಸರಕಾರ ಮಾಡುತ್ತದೆ. ಅತೀಂದ್ರೀಯ ಶಕ್ತಿಗಳ ಮೂಲಕ ಇಹ, ಪರವನ್ನು ತೊರೆದು ಸಮಾಜದ,ಮನುಕುಲದ ಒಳಿತಿಗಾಗಿ ದುಡಿದ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರರ ಆದರ್ಶ ನಡೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕಾಗಿದೆ.ಸಮುದಾಯದ ಒಗ್ಗಟ್ಟಿಗೆ ಇಂತಹ ಜಯಂತಿಗಳು ಕಾರಣವಾಗಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಲಿಜ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಅಂಜನಪ್ಪ, ಸಮ ಸಮಾಜದ ಕನಸು ನನಸಾಗಬೇಕೆಂದರೆ ಅದು ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರರಂತಹ ಅನೇಕರ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ.ಸಮ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. ರಾಜ್ಯದ ಮಟ್ಟಿಗೆ ಸಮುದಾಯ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಮತ್ತು ಎಂ.ಎಸ್.ರಾಮಯ್ಯ ಕುಟುಂಬದವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಕಷ್ಟ ಕಾಲದಲ್ಲಿ ಸಮುದಾಯವನ್ನು ಕೈಹಿಡಿದು ನಡೆಸಿದ್ದಾರೆ.ಸರಕಾರ ಬಲಿಜ ಸಮಾಜವನ್ನು ೨ಎ ಜಾತಿ ಪಟ್ಟಿಗೆ ಸೇರಿಸಿ ಶಿಕ್ಷಣಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಉದ್ಯೋಗ ದಲ್ಲಿಯೂ ಇದೇ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರರ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಎಚ್.ಬಿ.ಪ್ರಕಾಶ್, 111 ವರ್ಷಗಳ ಕಾಲ ಬದುಕಿದ್ದ ನಾರೇಯಣ ಯತೀಂದ್ರರು ನುಡಿದ ಅನೇಕ ಕಾಲಜ್ಞಾನ ಭವಿಷ್ಯಗಳು ಇಂದಿಗೂ ನಿಜವಾಗಿವೆ. ನಿಜವಾಗುತ್ತಲಿವೆ. ದೈವತ್ವದ ಜೊತೆಗೆ, ಮಾನವತ್ವದ ಕಡೆಗೆ ಸದಾ ತುಡಿಯುತಿದ್ದ ಯತೀಂದ್ರರು, ಲೌಕಿಕ ಸುಖಃವನ್ನು ತೇಜಿಸಿ, ಅಧ್ಯಾತ್ಮದ ಕಡೆಗೆ ನಡೆದವರು ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾಕರಾದ ಸುರೇಶ್, ಬಲಿಜ ಸೇವಾ ಸಂಘ ಅಧ್ಯಕ್ಷ ಹೆಚ್.ಶಿವಕುಮಾರ್ ಅವರು ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿ ಕುರಿತು ಮಾತನಾಡಿದರು. ಜಿಲ್ಲಾ ಬಲಿಜ ಸಂಘದ ಜಂಟಿ ಕಾರ್ಯದರ್ಶಿ ಜಯಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ಗೀತಮ್ಮ,ಉಪಾಧ್ಯಕ್ಷರಾದ ಗಣೇಶ್, ಕಾರ್ಯದರ್ಶಿ ಟಿ.ಆರ್.ಎಚ್. ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕೋಟ್‌

ರಾಜ್ಯದಲ್ಲಿ ಓಬಿಸಿ ಜನಾಂಗ ಸುಮಾರು ಶೇ 55ರಷ್ಟಿದೆ. ಬಲಿಜ ಜನಾಂಗ ಸುಮಾರು 15-18 ಲಕ್ಷ ಜನಸಂಖ್ಯೆಯಿದೆ. ಇಷ್ಟು ಜನಸಂಖ್ಯೆ ಇರುವ ಸಮಾಜದಲ್ಲಿ ಕನಿಷ್ಠ 6 ಜನ ಶಾಸಕರು, 2 ಸಂಸದರು ಆಯ್ಕೆಯಾಗಬೇಕಿತ್ತು. ಒಗ್ಗಟ್ಟಿನ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ವೈಯುಕ್ತಿಕ ಪ್ರತಿಷ್ಠೆಗಳನ್ನು ಬಿಟ್ಟು ನಾವೆಲ್ಲರೂ ಒಗ್ಗೂಡಿದರೆ ಎಲ್ಲಾ ರಂಗದಲ್ಲಿಯೂ ಬೆಳೆಯಲು ಅವಕಾಶವಿದೆ. - ಚಿದಾನಂದ, ಬಿಜೆಪಿ ಓಬಿಸಿ ಮೋರ್ಚಾ