ಕನ್ನಡಪ್ರಭ ವಾರ್ತೆ ಯಮಕನಮರಡಿ

ರೈತರ ಹಾಗೂ ಜನಸಾಮಾನ್ಯರ ಏಳಿಗೆಗಾಗಿ ಹುಟ್ಟುಹಾಕಿರುವ ಹುಕ್ಕೇರಿ ತಾಲೂಕಿನ ಸಹಕಾರ ಸಂಘ ಸಂಸ್ಥೆಗಳಲ್ಲಿ ಇತ್ತೀಚೆಗೆ ಕೆಲವರು ಸಹಕಾರ ರಂಗಕ್ಕೆ ರಾಜಕೀಯ ಬಣ್ಣ ಬಳಿಯುತ್ತಿರುವುದು ಸರಿಯಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಸಮೀಪದ ಪರಕನಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ಮುಂಬರುವ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಗ್ರಾಮದ ಹಿರಿಯರು ಒಮ್ಮತದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದರೆ ಹೊರಗಿನವರು ಬಂದು ರಾಜಕಾರಣ ಮಾಡಲು ಸಾಧ್ಯವಿಲ್ಲ. ನಮ್ಮ ನಮ್ಮಲ್ಲಿ ದ್ವೇಷ ಭಾವನೆ ಬಿತ್ತಿ ಒಡೆದಾಳುವ ನೀತಿ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಯಮಕನಮರಡಿ ಮತಕ್ಷೇತ್ರದಲ್ಲಿ ಬದಲಾವಣೆ ತರಬೇಕಾಗಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕನಾಗಬೇಕು ಎಂದು ಕರೆ ನೀಡಿದರು.

ಹುಕ್ಕೇರಿ ತಾಲೂಕಿನ ಜನರು ಸ್ವಾಭಿಮಾನಿಗಳು, ನಮ್ಮ ಸಹಕಾರ ಸಂಸ್ಥೆಗಳು ಉಳಿದು ಬೆಳೆಯಬೇಕು ಎಂಬ ಆಶಯ ಹೊಂದಿದ್ದವರು. ಸಹಕಾರ ಸಂಘ ಸಂಸ್ಥೆಗಳಲ್ಲಿ ರಾಜಕಾರಣ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಪರಕನಹಟ್ಟಿ ಪ್ರಾಥಮಿಕ ಸಹಕಾರಿ ಸಂಘದ 1397 ಸದಸ್ಯರು ₹ 3.37 ಕೋಟಿ ಸಾಲ ಮನ್ನಾ ಸೌಲಭ್ಯ ಪಡೆದಿದ್ದಾರೆ. ಸಂಘವನ್ನು ಉತ್ತರೋತ್ತರವಾಗಿ ಬೆಳೆಸಿದ ರೈತರ ಸಹಕಾರ ಅಮೂಲ್ಯವೆಂದು ರಮೇಶ ಕತ್ತಿ ಹೇಳಿದರು.

ಶಾಸಕ ನಿಖಿಲ ಕತ್ತಿ ಮಾತನಾಡಿ, ಪರಕನಹಟ್ಟಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಹೆಮ್ಮರವಾಗಿ ಬೆಳೆಯಲು ಜನರ ವಿಶ್ವಾಸ ಸಹಕಾರ ಮುಖ್ಯ. ಕತ್ತಿ ಕುಟುಂಬದವರು ಸಹಕಾರಿ ಸಂಘಗಳ ಅಭಿವೃದ್ಧಿಗೆ ಬದ್ದರಾಗಿದ್ದೇವೆ. ತೋಟಪಟ್ಟಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.


ಸಂಘದ ಅಧ್ಯಕ್ಷ ಬಸವರಾಜ ಸುಲ್ತಾನಪುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಿದರು.

ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸರಾಜ ಹುಂದ್ರಿ, ಮಾರುತಿ ಅಷ್ಟಗಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಕಲಗೌಡ ಪಾಟೀಲ, ಸತ್ಯಪ್ಪ ನಾಯಿಕ, ಶ್ರೀಶೈಲ ಯಮಕನಮರಡಿ, ಪ್ರಕಾಶ ಪೈರಾಸಿ, ಕಾಡಪ್ಪ ಪೈರಾಶಿ, ನ್ಯಾಯವಾದಿ ಗಂಗಾಧರ ಗವತಿ, ದುಂಡಪ್ಪ ದೇವರಮನಿ, ದುರದುಂಡಿ ಪಾಟೀಲ, ಮಹಾದೇವ ಜಿಂಡ್ರಾಳ, ಬಿಡಿಸಿಸಿ ಬ್ಯಾಂಕ್‌ ಹುಕ್ಕೇರಿ ತಾಲೂಕ ನಿಯಂತ್ರಣ ಅಧಿಕಾರಿ ರಾಮನಿಂಗ ಸನದಿ, ಸಂಘದ ನಿರ್ದೇಶಕರಾದ ನಿಂಗಪ್ಪ ಪೈರಾಸಿ, ಮಲ್ಲಪ್ಪ ಶಿರೂರ, ಜಂಪಣ್ಣ ಪಾಟೀಲ, ಬಸವರಾಜ ಮಾಸ್ತಿಹೋಳಿ, ಬಾಳಪ್ಪ ಹುಕ್ಕೇರಿ, ಶಿವಾನಂದ ಮಗದ್ದುಮ್, ಗಂಗಪ್ಪ ಹರಿಜನ, ಬಸವ್ವ ಕಬಾಡಗಿ, ಗೀತಾ ಹೂಲಿಕಟ್ಟಿ, ಬ್ಯಾಂಕ್‌ ಪ್ರತಿನಿಧಿ ಮಹೇಶ ನಾಯಿಕ ಇದ್ದರು. ಉಪಾಧ್ಯಕ್ಷ ಈರಣ್ಣ ಹೂಲಿಕಟ್ಟಿ, ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಗುಡಸ್ ವಂದಿಸಿದರು. ಸಂಘದ ಸದಸ್ಯರು ಗ್ರಾಮಸ್ಥರು ಇದ್ದರು.