ಸಾರಾಂಶ
- ಹಣದ ಸಮೇತ ಸಿಕ್ಕು ಬಿದ್ದ ಕುಟುಂಬದ ವ್ಯಕ್ತಿ ಸಿದ್ದೇಶ್ವರ್ ಸಾವು ಬಯಸುತ್ತಾನೆ! - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜಿಲ್ಲೆಯಲ್ಲಿ ಬಿಜೆಪಿಯ ಯಾವ ಮುಖಂಡರ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಬಹಿರಂಗಪಡಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಒತ್ತಾಯಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಜಿಲ್ಲಾ ಸಚಿವ ಮಲ್ಲಿಕಾರ್ಜುನ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡ ಬಗ್ಗೆ ಪತ್ರ ಬರೆದು, ಸಚಿವರ ಬದಲಾವಣೆಗೆ ಒತ್ತಾಯಿಸಿದ್ದಾರೆ. ಅದೇ ರೀತಿ ಬಿಜೆಪಿಯ ಯಾರೊಂದಿಗೆ ನಿಮ್ಮ ಸಚಿವರು ಒಳಒಪ್ಪಂದ ಮಾಡಿಕೊಂಡಿದ್ದಾರೆಂಬ ಸಂಗತಿ ಸಹ ಬಹಿರಂಗಪಡಿಸಿ ಎಂದರು.
ನಿಮ್ಮ ಸಚಿವರ ಒಳಒಪ್ಪಂದ ಖಂಡಿಸಿ, ಧೈರ್ಯವಾಗಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಅಭಿನಂದಿಸುತ್ತೇವೆ. ನಿಮ್ಮ ಪಕ್ಷ ನಿಷ್ಟೆ, ಪ್ರಾಮಾಣಿಕತೆ ರೀತಿಯಲ್ಲೇ ಬಿಜೆಪಿ ಕಾರ್ಯಕರ್ತರೂ ಇದ್ದಾರೆ. ಹಾಗಾಗಿ ಜಿಲ್ಲೆ ಜನತೆ ನಮ್ಮ ಕಾರ್ಯಕರ್ತರನ್ನು ಅನುಮಾನದಿಂದ ನೋಡುವಂತಾಗಬಾರದು. ನಿಮ್ಮ ಸಚಿವರ ಜೊತೆ ಬಿಜೆಪಿಯ ಯಾರೆಲ್ಲಾ ಒಪ್ಪಂದ ಮಾಡಿಕೊಂಡಿದ್ದಾರೆಂದು ಸ್ಪಷ್ಟ ಅರಿವಿರುವ ನೀವೇ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ₹1000 ಕೋಟಿ ಆಸ್ತಿ ಮಾಡಿಕೊಂಡಿದ್ದಾರೆಂಬ ಆರೋಪ ಮಾಡಿದ್ದರು. ನರೇಂದ್ರ ಮೋದಿ, ಯಡಿಯೂರಪ್ಪ ತನಿಖೆ ಮಾಡಲಿ ಅಂತಾ ಒತ್ತಾಯಿಸಿದಾಗ ಬಿಜೆಪಿಯ ನಿಷ್ಟಾವಂತ ಮುಖಂಡರೆನಿಸಿಕೊಂಡವರು ಯಾಕೆ ಮೌನವಾಗಿದ್ದರು? ಈಚೆಗೆ ವಕ್ಫ್ ಭೂ ಕಬಳಿಕೆ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿಎಂ, ಡಿಸಿಎಂ, ವಕ್ಫ್ ಸಚಿವರ ವಿರುದ್ಧ ಮಾತನಾಡಿದ ಇಲ್ಲಿನ ಬಿಜೆಪಿ ಮುಖಂಡರ ಪೈಕಿ ಒಬ್ಬರೇ ಒಬ್ಬರು ಯಾಕೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಚಕಾರ ಎತ್ತಲಿಲ್ಲ? ಏನಿದು ಹೊಂದಾಣಿಕೆ ಎಂದು ಯಶವಂತ ರಾವ್ ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಗೆಲ್ಲಲೆಂದು ಹೇಳುವ ಕಾಂಗ್ರೆಸ್ಸಿನ ನಾಯಕರು ಇಲ್ಲಿ ಬಿಜೆಪಿ ಕೋಮುವಾದಿ ಅಂತಾರೆ. ಜಿ.ಎಂ.ಸಿದ್ದೇಶ್ವರ, ಯಶವಂತ ರಾವ್ ಕೋಮುವಾದಿಗಳು. ಇದೇ ಬಿಜೆಪಿಯ ಮಾಜಿ ಸಚಿವರು, ಮಾಜಿ ಶಾಸಕರು ಕೋಮುವಾದಿಗಳಲ್ಲ, ಕಾಂಗ್ರೆಸ್ಸಿನವರಿಗೆ ತುಂಬಾ ಒಳ್ಳೆಯವರು ಯಾಕೆ? ಸಿದ್ದೇಶ್ವರ ನೀಚ, ಲುಚ್ಚ ಅಂತೆಲ್ಲಾ ಸಾವು ಬಯಸಿದ ಪುಣ್ಯಾತ್ಮ ನಿಮ್ಮ ಕುಟುಂಬದವರು ಹಗರಣ ಮಾಡಿ, ಹಣದ ಸಮೇತ ಸಿಕ್ಕಿ ಬಿದ್ದರೆ ಸಿದ್ದೇಶ್ ಏನು ಮಾಡುತ್ತಾರೆ? ನೀವು ಹಗರಣ ಮಾಡಿ, ಸಿದ್ದೇಶಪ್ಪನ ಮೇಲೆ ಹಾಕುತ್ತೀರಾ? 11 ವರ್ಷದಿಂದ ನಿಮ್ಮ ಕುಟುಂಬದ ಮೂವರು ಸದಸ್ಯರು ಸಹ ನನ್ನಂತೆ ತಿಂಗಳಿಗೆ 4 ಸಲ ಯಾಕೆ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ? ಯಾರ ಕೇಸ್ ಇದು, ಯಾರು ಸಿಗಿಸಿದ್ದು ಎಂದು ಮಾಡಾಳ್ ಮಲ್ಲಿಕಾರ್ಜುನ ಹೆಸರನ್ನು ಹೇಳದೇ ಅವರು ವಾಗ್ದಾಳಿ ನಡೆಸಿದರು.ಪಕ್ಷದ ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ, ವಕೀಲ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ, ನೀಲಗುಂದ ರಾಜು, ಗೋವಿಂದರಾಜ, ಟಿಂಕರ್ ಮಂಜಣ್ಣ, ಶಿವನಗೌಡ ಟಿ.ಪಾಟೀಲ, ಸೋಗಿ ಗುರು ಇತರರು ಇದ್ದರು.
- - --24ಕೆಡಿವಿಜಿ6: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಹಿರಿಯ ಮುಖಂಡ ಯಶವಂತರಾವ್ ಜಾಧವ್ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದರು.