ಮಕ್ಕ‍ಳು ನಮ್ಮ ನೆಲದ ಕಲೆ, ಸಾಹಿತ್ಯ, ಸಂಸ್ಕೃತಿ ಮೈಗೂಡಿಸಿಕೊಳ್ಳಲಿ: ಶಂಕ್ರಣ್ಣ ಸಂಕಣ್ಣವರ

| Published : Apr 09 2024, 12:48 AM IST

ಮಕ್ಕ‍ಳು ನಮ್ಮ ನೆಲದ ಕಲೆ, ಸಾಹಿತ್ಯ, ಸಂಸ್ಕೃತಿ ಮೈಗೂಡಿಸಿಕೊಳ್ಳಲಿ: ಶಂಕ್ರಣ್ಣ ಸಂಕಣ್ಣವರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಮಕ್ಕಳಿಗೆ ಸಂಬಂಧಗಳ ಬಗ್ಗೆ ಹೆಚ್ಚಿನ ಅನುಭವ ಇಲ್ಲದಂತಾಗಿದೆ. ರಜಾ ಅವಧಿಯಲ್ಲಾದರೂ ಮಕ್ಕಳು ಅಜ್ಜ ಅಜ್ಜಿರೊಡಗೂಡಿ ನಮ್ಮ ಕೌಟುಂಬಿಕ ಸಂಬಂಧಗಳ ಸವಿಯನ್ನು ಅನುಭವಿಸುವಂತಾಗಬೇಕು ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಹೇಳಿದರು.

ಮುಂಡರಗಿ: ಮಕ್ಕಳು ನಮ್ಮ ಪರಂಪರೆಯ ವಾರಸುದಾರರಾಗಿದ್ದು, ಅವರಿಗೆ ನಮ್ಮ ನೆಲದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆಯುವಂತೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಹೇಳಿದರು.

ಭಾನುವಾರ ಪಟ್ಟಣದ ಅನ್ಮೋಲ್ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದಿಂದ ಪ್ರಾರಂಭಗೊಂಡಿರುವ 2024ರ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಜನಪದದಲ್ಲಿ ಮಕ್ಕಳು ಸ್ವತಃ ಸೃಜನಶೀಲರಾಗಿ ಕಟ್ಟಿದ ಕಿಲಾಡಿತನದ ಹಾಡುಗಳಿವೆ. ಅರ್ಥವಿಲ್ಲದ ಪ್ರಾಸ ಪದ್ಯಗಳಿವೆ. ದೇಶಾಭಿಮಾನದ ಲಾವಣಿ, ಗೀಗೀಪದಗಳಿವೆ. ಅಂಥ ಗೀತೆಗಳು ಮಕ್ಕಳಿಗೆ ಇಂಥ ಶಿಬಿರಗಳ ಮೂಲಕ ಪರಿಚಯವಾಗಬೇಕು. ಇಂದಿನ ಮಕ್ಕಳಿಗೆ ಸಂಬಂಧಗಳ ಬಗ್ಗೆ ಹೆಚ್ಚಿನ ಅನುಭವ ಇಲ್ಲದಂತಾಗಿದೆ. ರಜಾ ಅವಧಿಯಲ್ಲಾದರೂ ಮಕ್ಕಳು ಅಜ್ಜ ಅಜ್ಜಿರೊಡಗೂಡಿ ನಮ್ಮ ಕೌಟುಂಬಿಕ ಸಂಬಂಧಗಳ ಸವಿಯನ್ನು ಅನುಭವಿಸುವಂತಾಗಬೇಕು ಎಂದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್.ಆರ್. ಬಸಾಪುರ ಮಾತನಾಡಿ, ಮಕ್ಕಳ ಸೃಜನಶೀಲತೆಗೆ ಇಂಬು ನೀಡುವಂತೆ ಹಮ್ಮಿಕೊಂಡಿರುವ ಅನ್ಮೋಲ್ ಯೋಗ ಕೇಂದ್ರದ ಶಿಬಿರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೆಳಕು ನೀಡಲಿ. ಈ ಶಿಬಿರ ಯೋಗ ಮತ್ತು ಆಹಾರ ಸಂಸ್ಕೃತಿಯನ್ನೂ ಒಳಗೊಂಡಿರುವುದು ಇವತ್ತಿನ ಕಾಲಕ್ಕೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದರು.

ಮಕ್ಕಳ ಸಾಹಿತಿ, ರಂಗಕರ್ಮಿ ಡಾ. ನಿಂಗು ಸೊಲಗಿ ಮಾತನಾಡಿ, ಮಕ್ಕಳು ಅವರಿಷ್ಟದಂತೆ ಬೆಳೆಯಬೇಕು. ಅವರಲ್ಲಿರುವ ಪ್ರತಿಭೆಗೆ ನೀರು-ಗೊಬ್ಬರ ಹಾಕಿ ಪೋಷಿಸುವ ಜವಾಬ್ದಾರಿ ಪೋಷಕರದ್ದಾಗಬೇಕು. ಮಕ್ಕಳ ಜೀವನವನ್ನು ಕೇವಲ ಪಠ್ಯ ಮತ್ತು ಪರೀಕ್ಷೆಯ ಓದಿಗೆ ಸೀಮಿತಗೊಳಿಸದೇ ಅವರು ಆತ್ಮವಿಶ್ವಾಸದಿಂದ, ಉತ್ಸಾಹದಿಂದ ಬಾಲ್ಯ ಕಳೆಯುವ ಮೂಲಕ ಸಮಾಜಮುಖಿಯಾಗಿ ಕ್ರಿಯಾಶೀಲವಾಗಿ ಬೆಳೆಯುವಂತೆ ಅವಕಾಶ ನೀಡಬೇಕು. ಇಂಥ ಅವಕಾಶ ನೀಡಿ ಕಲಿಕೆಯ ವಿಭಿನ್ನ ಆಯಾಮಗಳನ್ನು ತೆರೆದು ತೋರುವಲ್ಲಿ ಈ ಶಿಬಿರ ಮಾರ್ಗದರ್ಶಿಯಾಗಲಿ ಎಂದರು.

ಡಾ. ಚಂದ್ರಕಾಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ನಿರ್ದೇಶಕಿ ಡಾ. ಮಂಗಳಾ ಚಂದ್ರಕಾಂತ ಇಟಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಅನ್ನದಾನಿ ಮೇಟಿ, ಮಹಾಲಿಂಗಯ್ಯ ಹಿರೇಮಠ, ಸಹನಾ ಶಿದ್ಲಿಂಗ, ಸತ್ಯಪ್ಪ ಸತ್ಯಮ್ಮನಗುಡಿ, ಜಯಶ್ರೀ ಅಳವಂಡಿ, ನಯನಾ ಅಳವಂಡಿ, ಬಸವರಾಜ ಅಬ್ಬಿಗೇರಿ, ಹಸಿನ ಬೇಗಮ್, ವಾಸಂತಿ ಯಾಳಗಿ, ರಮೇಶ ಗೌಡ ಪಾಟೀಲ್, ಅಂಜಲಿ ಹೊಸಮನಿ, ರೂಪ ಕಂಚಿಗಾರ, ವಿಜಯಲಕ್ಷ್ಮಿ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.