ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಂದಿನ ಯುವ ಜನತೆ ಕೈಯಲ್ಲಿ ದೇಶದ ಮುಂದಿನ ಭವಿಷ್ಯ ಅಡಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಉರ್ದು ಮತ್ತು ಇತರ ಭಾಷಾ ಶಾಲೆಗಳ ನಿರ್ದೇಶನಾಲಯ, ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ, ಸಂಸದೀಯ ವ್ಯವಹಾರಗಳ ಇಲಾಖೆ, ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ದೇಶದ ಸಂವಿಧಾನದ ಅಡಿಯಲ್ಲಿ ಬರುವ ಸಂಸತ್ತು, ವಿಧಾನಸಭೆ, ಹಾಗೂ ಕಾರ್ಯಾಂಗ ವ್ಯವಸ್ಥೆಗಳ ಕುರಿತು ಅರಿವು ಮೂಡಿಸುವ ಕಾರ್ಯ ಯುವ ಸಂಸತ್ ಮೂಲಕ ನಡೆಯುತ್ತಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ನಮ್ಮ ದೇಶದ ಸಂವಿಧಾನ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಬಗ್ಗೆ ತಿಳಿಯಲು ಈ ಕಾರ್ಯಕ್ರಮ ಪೂರಕವಾಗಿದ್ದು, ವಿಧಾನಸಭೆಯಲ್ಲಿ, ಸಂಸತ್ತಿನಲ್ಲಿ ಯಾವ ರೀತಿಯಲ್ಲಿ ಕಾರ್ಯಕಲಾಪಗಳು, ಚರ್ಚೆಗಳು ನಡೆಯುತ್ತವೆ ಎಂಬ ಬಗ್ಗೆ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳು ಓದಿಗೆ ಮಾತ್ರ ಸೀಮಿತ ಆಗಿರದೆ ದೇಶದ ರಾಜಕೀಯ ವ್ಯವಸ್ಥೆ ಹಾಗೂ ಪ್ರಚಲಿತ ದೇಶದಲ್ಲಿ ನಡೆಯುವ ಘಟನೆಗಳ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.
ಜಿಲ್ಲೆಯ ಒಟ್ಟು 34 ಸರ್ಕಾರಿ ಪ್ರೌಢಶಾಲೆಗಳ ಮಕ್ಕಳು ಯುವ ಸಂಸತ್ತಿನಲ್ಲಿ ಪಾಲ್ಗೊಂಡಿದ್ದರು. ಸಭಾಪತಿಯಾಗಿ ವಿದ್ಯಾರ್ಥಿನಿ ಪೂರ್ಣಿಮಾ ವಿಧಾನಸಭಾ ಅಧಿವೇಶನವನ್ನು ಆರಂಭಿಸಿದರು. ಮುಖ್ಯಮಂತ್ರಿಯಾಗಿ ಭೂಮಿಕ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಂಪಿಎಂ ಕಾರ್ಖಾನೆ ಮುಚ್ಚಿ ರುವುದು, ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯ ನೆರವು, ಶರಾವತಿ ಕಣಿವೆ ಯೋಜನೆಗಳು, ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ, ರಾಜ್ಯದ ಪ್ರಚಲಿತ ವಿಷಯಗಳ ಕುರಿತು ಚೆರ್ಚೆಯನ್ನು ನಡೆಸಲಾಯಿತು.ಯುವ ಸಂಸತ್ ಫಲಿತಾಂಶ: ಜಿಲ್ಲಾ ಯುವ ಸಂಸತ್ ಸ್ಪರ್ಧೆಯಲ್ಲಿ 6 ಜನ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡರು. ಹೊಸನಗರ ತಾಲ್ಲೂಕಿನ ಮಸಗಲ್ಲಿನ ಸ.ಪ್ರೌ.ಶಾಲೆಯ ಸ್ಫೂರ್ತಿ ಎಸ್.ಎನ್. ಪ್ರಥಮ ಬಹುಮಾನ, ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸ.ಪ್ರೌ.ಶಾಲೆಯ ಸಾತ್ವಿಕ್ ಎನ್ ಎಸ್ ದ್ವಿತೀಯ ಹಾಗೂ ಸಾಗರ ತಾಲ್ಲೂಕಿನ ಸುಭಾಷ್‌ನಗರ ಸ.ಪ್ರೌ.ಶಾಲೆಯ ಭೂಮಿಕ ಬಿ.ಜಿ. ತೃತೀಯ ಬಹುಮಾನ ಪಡೆದುಕೊಂಡರು.
ತೀರ್ಥಹಳ್ಳಿಯ ಹೊಸೂರು ಗುಡ್ಡೇಕೇರಿಯ ಎಚ್.ಯು.ಅಕ್ಷತಾ, ಸಾಗರದ ಎಂ.ಎಲ್.ಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಪಿ.ಸಂಜನಾ ಮತ್ತು ಆನಂದಪುರ ಸರ್ಕಾರಿ ಪ್ರೌಢ ಶಾಲೆಯ ಲಕ್ಷ್ಮೀ ಜಿ.ಬಿ.ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಕವಿತಾ ಯೋಗಪ್ಪನವರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಕೆ.ಆರ್. ಬಿಂಬ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.