ಮಕ್ಕಳಿಗೆ ಹಿಂದಿನ ಕೃಷಿ ಪದ್ಧತಿಯನ್ನು ತಿಳಿಸುವ ಕೆಲಸವಾಗಲಿ: ಡಾ. ತಾಳ್ತಜೆ

| Published : Feb 08 2024, 01:38 AM IST

ಮಕ್ಕಳಿಗೆ ಹಿಂದಿನ ಕೃಷಿ ಪದ್ಧತಿಯನ್ನು ತಿಳಿಸುವ ಕೆಲಸವಾಗಲಿ: ಡಾ. ತಾಳ್ತಜೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಮತ್ತು ಪದಾಧಿಕಾರಿಗಳಿಗೆ ಕನ್ನಡ ಭುವನೇಶ್ವರಿಯ ಧ್ವಜ ಹಸ್ತಾಂತರಿಸುವ ಮೂಲಕ ಪದಸ್ವೀಕಾರ ನಡೆಯಿತು. ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಧ್ವಜ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕೃಷಿ ಪದ್ಧತಿಯು ವ್ಯಾಪಕವಾಗಿ ಹರಡುವುದರ ಜೊತೆಗೆ ಮಕ್ಕಳಿಗೆ ಕೃಷಿ ಪದ್ಧತಿಯನ್ನು ತಿಳಿಸುವ ಕೆಲಸವಾಗಬೇಕು. ಕೃಷಿ ಕ್ಷೇತ್ರದ ಬೆಳವಣಿಗೆಯು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೂ ಸಹಕಾರಿಯಾಗಬೇಕು ಎಂದು ಮುಂಬೈ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ಡಾ. ವಸಂತ ಕುಮಾರ್ ತಾಳ್ತಜೆ ಹೇಳಿದರು. ಅವರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರಿನ ಕಡಮಜಲು ಕೃಷಿ ಕ್ಷೇತ್ರದಲ್ಲಿ ಬುಧವಾರ ನಡೆದ ಪುತ್ತೂರು ಹೋಬಳಿ ಕಸಾಪ ಘಟಕದ ಪದ ಸ್ವೀಕಾರ, ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ, ಕೃಷಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಡಮಜಲು ಕೃಷಿ ಕ್ಷೇತ್ರದಂತಹ ಮಾದರಿ ಕೃಷಿ ಕ್ಷೇತ್ರ ಇಂದು ಕೃಷಿ ಮತ್ತು ಸಾಹಿತ್ಯ ಕ್ಷೇತ್ರಗಳರೆಡರ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದರು.

ದತ್ತಿನಿಧಿ ಉಪನ್ಯಾಸದಲ್ಲಿ ಕೃಷಿ ಸಾಹಿತ್ಯ ವೈವಿಧ್ಯ ವಿಷಯದ ಕುರಿತು ಮಾತನಾಡಿದ ಪ್ರಕೃತಿಪರ ಕೃಷಿಕರಾದ ಮಿತ್ತಬಾಗಿಲಿನ ಬಿ. ಕೆ. ಪರಮೇಶ್ವರ್ ರಾವ್ ಅವರು ಕೃಷಿಕನಾದವನು ಆರ್ಥಿಕವಾಗಿ ಬಡವನಾದರೂ, ಉಳಿದೆಲ್ಲಾ ಕ್ಷೇತ್ರಗಳಲ್ಲಿ ಆತ ಬಡವನಲ್ಲ. ಕೃಷಿಯಷ್ಟು ಉತ್ತಮವಾದ ಉದ್ಯೋಗ ಇನ್ನೊಂದಿಲ್ಲ. ಭೂಮಿಯ ರಕ್ತದ ನೀರನ್ನು ಪಡೆಯುವ ಬದಲು ಬೆವರು ನೀರನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ನಾವು ಮನಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ ಸಾಹಿತ್ಯ ಪರಿಷತ್ ಮೂಲಕ ೪೦೦ಕ್ಕೂ ಅಧಿಕ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆದಿವೆ. ಅತಿ ಹೆಚ್ಚು ಕಾರ್ಯಕ್ರಮ ಆಗಿರುವುದು ಪುತ್ತೂರಿನಲ್ಲಿ. ಸಾಹಿತ್ಯ ಪರಿಷತ್ತಿನ ನ ಯಾವುದೇ ಕಾರ್ಯಕ್ರಮದಲ್ಲಿ ಪುತ್ತೂರು ಮೊದಲ ಸ್ಥಾನದಲ್ಲಿದೆ ಎಂದರು.

ಪುತ್ತೂರು ಭಾರತೀಯ ಗೇರು ಸಂಶೋಧನಾ ನಿರ್ದೇಶನಾಲಯದ ಡಾ. ದಿನಕರ ಅಡಿಗ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ ರೈ ಕೋರಂಗ, ಕ.ಸಾ.ಪ. ಜಿಲ್ಲಾ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್, ಕ.ಸಾ.ಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿದರು. ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಮತ್ತು ಪದಾಧಿಕಾರಿಗಳಿಗೆ ಕನ್ನಡ ಭುವನೇಶ್ವರಿಯ ಧ್ವಜ ಹಸ್ತಾಂತರಿಸುವ ಮೂಲಕ ಪದಸ್ವೀಕಾರ ನಡೆಯಿತು. ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಧ್ವಜ ಹಸ್ತಾಂತರಿಸಿದರು.

ಪುತ್ತೂರು ಹೋಬಳಿ ಘಟಕದ ಗೌರವ ಕೋಶಾಧ್ಯಕ್ಷ ಎ.ಕೆ. ಜಯರಾಮ ರೈ, ಗೌರವ ಕಾರ್ಯದರ್ಶಿ ಸಿ.ಶೇ. ಕಜೆಮಾರ್, ಸಂಘಟನಾ ಕಾರ್ಯದರ್ಶಿ ವಿನೋದ್ ಕುಮಾರ್ ಕೆ.ಎಸ್., ಮಹಿಳಾ ಪ್ರತಿನಿಧಿ ಪೂರ್ಣಿಮಾ ಪೆರ್ಲಂಪಾಡಿ, ಸದಸ್ಯರಾದ ಬಾಬು ಟಿ., ವಿಶ್ವನಾಥ ಪೂಜಾರಿ, ಎಸ್.ಡಿ. ವಸಂತ ಸರ್ವೆದೋಳ, ಎಸ್.ಪಿ. ಬಶೀರ್, ಸಾಹಿತಿ ವಿ.ಬಿ. ಅರ್ತಿಕಜೆ, ಉಪ್ಪಿನಂಗಡಿ ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷ ಕರುಣಾಕರ ಸುವರ್ಣ, ಮಾರಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಸ್ವಾಗತಿಸಿದರು. ಹೋಬಳಿ ಘಟಕದ ಪ್ರತಿನಿಧಿ ಕೆಪಿಎಸ್ ಕುಂಬ್ರ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್. ವಂದಿಸಿದರು. ಕೆಪಿಎಸ್ ಪ್ರಾಥಮಿಕ ಶಾಲಾ ಮುಖ್ಯಗುರು ಬಾಬು ಎಂ. ಕಾರ್ಯಕ್ರಮ ನಿರೂಪಿಸಿದರು.