ಸಿಎಂ ಸಿದ್ದು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಲಿ: ಸಂಸದ ಗೋವಿಂದ ಕಾರಜೋಳ

| Published : Nov 15 2024, 12:37 AM IST

ಸಾರಾಂಶ

ಸಿದ್ದರಾಮಯ್ಯನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಬಿಜೆಪಿ ಮೇಲೆ ಇಲ್ಲದ ಸಲ್ಲದ ಆಪಾದನೆ ಮಾಡುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ಲೋಕಾಪುರ

ಮೂರು ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಅದರ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಅವರ ಪಕ್ಷದ ಶಾಸಕರು ಮತ್ತು ಮಂತ್ರಿಗಳು ಒತ್ತಾಯ ಮಾಡುತ್ತಾರೆ. ಕೆಲವೇ ದಿನಗಳಲ್ಲಿ ಈ ಸರ್ಕಾರ ಪತನವಾಗುತ್ತದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ತಲಾ ₹೫೦ ಕೋಟಿ ಆಮಿಷ ಆರೋಪಕ್ಕೆ ತಿರುಗೇಟು ನೀಡಿದ ಅವರು, ಇದು ಸತ್ಯಕ್ಕೆ ದೂರವಾದ ಮಾತು. ₹೫೦ ಕೋಟಿ ಯಾರು ಕೊಡಲು ಬಂದಿದ್ದು? ಅವರ ಹೆಸರು ಹೇಳಿ. ಸರ್ಕಾರ ನಿಮ್ಮದೇ ಇದೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ. ಸಿದ್ದರಾಮಯ್ಯನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಬಿಜೆಪಿ ಮೇಲೆ ಇಲ್ಲದ ಸಲ್ಲದ ಆಪಾದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಅಬಕಾರಿ ಇಲಾಖೆಯಲ್ಲಿ ನಡೆದ ₹೭೦೦ ಕೋಟಿ ಭ್ರಷ್ಟಾಚಾರದ ಬಗ್ಗೆ ಮದ್ಯದ ಅಂಗಡಿ ಅಸೋಸಿಯಶನ್ ಮಾಲೀಕರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ನೀವೇ ಲೈಸೆನ್ಸ್‌ ಕೊಟ್ಟ ಮದ್ಯದ ಅಂಗಡಿ ಮಾಲೀಕರು ನಿಮ್ಮ ಮೇಲೆ ಅಪಾದನೆ ಮಾಡುತ್ತಿದ್ದರೆ, ನೀವೇ ಅದರಲ್ಲಿ ಭಾಗಿಯಾಗಿಲ್ಲಾ ಎಂದರೆ ಸಾಬೀತುಪಡಿಸಿ. ಬಿಜೆಪಿ ಸರ್ಕಾರ ಇದ್ದಾಗ ಗುತ್ತಿಗೆದಾರ ಸಂಘದ ಅಧ್ಯಕ್ಷ ದಿ.ಕೆಂಪಣ್ಣ ನಮ್ಮ ಮೇಲೆ ಶೇ.೪೦ ಆಪಾದನೆ ಮಾಡಿದ್ದರು. ನೀವು ಇದನ್ನು ರಾಜ್ಯಾದ್ಯಂತ ಸುಳ್ಳು ಹೇಳುತ್ತಾ ತಿರುಗಾಡಿದ್ದೀರಿ. ಇಲ್ಲಿಯವರೆಗೂ ನಿಮ್ಮ ಸರ್ಕಾರ ಅದನ್ನು ಸಾಬೀತುಪಡಿಸಲು ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಸರ್ಕಾರ ಬಂದು ಒಂದೂವರೆ ವರ್ಷ ಗತಿಸಿದೆ. ಒಂದೇ ಒಂದು ಹೊಸ ಅಭಿವೃದ್ಧಿ ಕೆಲಸ ಮಾಡಿಲ್ಲಾ. ಒಂದೇ ಒಂದು ರುಪಾಯಿ ಅನುದಾನ ಬಂದಿಲ್ಲಾ. ಅವರ ಪಕ್ಷದ ಶಾಸಕರೇ ಕಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರೇ ವಿಷ ಕುಡಿತಿನಿ ಅಂತಾ ಹೇಳುತ್ತಿದ್ದಾರೆ. ಈ ಪರಿಸ್ಥಿತಿ ಸಿದ್ದರಾಮಯ್ಯ ಸರ್ಕಾರಕ್ಕೆ ಬಂದಿದೆ ಎಂದು ವ್ಯಂಗ್ಯವಾಡಿದರು.

ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿ ಹೋಗಿದೆ. ಹಗರಣಗಳ ಮೇಲೆ, ಹಗರಣ ಆಗುತ್ತಿವೆ. ವಾಲ್ಮೀಕಿ ನಿಗಮದ ಹಗರಣ, ದಲಿತರಿಗೆ ಬ್ಯಾಂಕಿನಲ್ಲಿ ಮೀಸಲಿಟ್ಟ ₹೧೮೭ ಕೋಟಿ ಹಗಲು ದರೋಡೆ ಮಾಡಿ ಲೋಕಸಭೆ ಚುನಾವಣೆ ಮಾಡಿದ್ದೀರಿ. ಅದರ ಬಗ್ಗೆ ಉತ್ತರ ಕೊಡಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಸರಣಿಯವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾಡಿದಂತಹ ಕೆಲಸಗಳಿಗೆ ಗುತ್ತಿಗೆದಾರರಿಗೆ ಸರಿಯಾಗಿ ಬಿಲ್‌ಗಳು ಪಾವತಿ ಆಗುತ್ತಿಲ್ಲ. ನಿಮ್ಮ ಸರ್ಕಾರ ಬಂದ ಮೇಲೆ ಎಷ್ಟು ಅಭಿವೃದ್ಧಿಗೆ ಹಣ ಇಟ್ಟಿದ್ದೀರಿ? ಎಷ್ಟು ಕಾಮಗಾರಿ ಮಂಜೂರಿ ಮಾಡಿದ್ದೀರಿ? ಹೊಸ ಕಾಮಗಾರಿ ಮಾಡಿದ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.

ನಮ್ಮ ಸರ್ಕಾರದಲ್ಲಿ ಮಾಡಿದ, ಮಂಜೂರಾದಂತಹ ಕಾಮಗಾರಿಗಳನ್ನೇ ಪದೇ ಪದೇ ಉದ್ಘಾಟನೆ, ಶಂಕುಸ್ಥಾಪನೆ ಮಾಡುವುದು ಬಿಟ್ಟು ಬೇರೇನೂ ಮಾಡುತ್ತಿಲ್ಲ. ನಮ್ಮ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳನ್ನೇ ಮುಂದುವರಿಸಿಕೊಂಡು ಹೋಗುವುದೇ ನಿಮ್ಮ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.ಈ ವೇಳೆ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ಬಿಜೆಪಿ ಮುಖಂಡರಾದ ಅರುಣ ಕಾರಜೋಳ, ರಾಜು ನಾರಾಯಣ ಯಡಹಳ್ಳಿ, ಲೋಕಣ್ಣ ಕತ್ತಿ, ಪ್ರಕಾಶ ಚಿತ್ತರಗಿ, ವಿರೇಶ ಪಂಚಕಟ್ಟಿಮಠ, ಸಿದ್ರಾಮಪ್ಪ ದೇಸಾಯಿ, ಆನಂದ ಹವಳಖೋಡ, ಸುರೇಶ ಹುಗ್ಗಿ, ಶ್ರೀಶೈಲ ಚಿನ್ನಣ್ಣವರ, ಗೋಪಾಲಗೌಡ ಪಾಟೀಲ, ಕಾಶಲಿಂಗ ಮಾಳಿ, ಸುರೇಶ ಬೆಳಗಲಿ, ಪ್ರಕಾಶ ಬೆಳಗಲಿ, ಚಿದಾನಂದ ಬೆಳಗಲಿ ಇತರರು ಇದ್ದರು.

ಲೋಕಾಪುರ ಪಟ್ಟಣಕ್ಕೆ ಡಿಗ್ರಿ ಕಾಲೇಜ ನಿರ್ಮಾಣ, ಆದರ್ಶ ವಿದ್ಯಾಲಯ, ಮೊರಾರ್ಜಿ ವಸತಿ ಶಾಲೆ, ಎರಡು ಹಾಸ್ಟೇಲ್‌ಗಳು, ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣ, ರಸ್ತೆಗಳು, ಕುಡಿಯುವ ನೀರಿನ ಯೋಜನೆ, ಎಲ್ಲ ಸಮುದಾಯ ಭವನಗಳಿಗೆ ಹಣ ಬಿಡುಗಡೆ, ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸಲು ಎರಡು ಬೃಹತ್ ವಾಣಿಜ್ಯ ಮಳಿಗೆ ನಿರ್ಮಿಸಿದ್ದೇನೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಕಾಂಗ್ರೆಸ್‌ನವರು ಲೋಕಾಪುರಕ್ಕೆ ಏನು ಮಾಡಿದ್ದೀರಿ?

ಗೋವಿಂದ ಎಂ.ಕಾರಜೋಳ, ಸಂಸದರು