ಮುಡಾ ಹಗರಣ - ರಾಜೀನಾಮೆ ಕೊಟ್ಟು ಸಿಎಂ ಕಾಂಗ್ರೆಸ್‌ ಗೌರವ ಉಳಿಸಲಿ : ಗೋವಿಂದ ಕಾರಜೋಳ

| Published : Oct 05 2024, 01:30 AM IST / Updated: Oct 05 2024, 12:31 PM IST

Govinda Karjola
ಮುಡಾ ಹಗರಣ - ರಾಜೀನಾಮೆ ಕೊಟ್ಟು ಸಿಎಂ ಕಾಂಗ್ರೆಸ್‌ ಗೌರವ ಉಳಿಸಲಿ : ಗೋವಿಂದ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಹಗರಣ ಕುಟುಂಬ ಸದಸ್ಯರ ಲಾಭಕ್ಕಾಗಿ ಒಬ್ಬ ಮುಖ್ಯಮಂತ್ರಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದು ರಾಜಕೀಯ ಇತಿಹಾಸದಲ್ಲೇ ಮೊಟ್ಟ ಮೊದಲು ಎಂದು ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

 ಲೋಕಾಪುರ : ಮುಡಾ ಹಗರಣ ಕುಟುಂಬ ಸದಸ್ಯರ ಲಾಭಕ್ಕಾಗಿ ಒಬ್ಬ ಮುಖ್ಯಮಂತ್ರಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದು ರಾಜಕೀಯ ಇತಿಹಾಸದಲ್ಲೇ ಮೊಟ್ಟ ಮೊದಲು ಎಂದು ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಆ ಭೂಮಿ ಅವರದಲ್ಲಾ, ಬೇರೆದವರ ಕಡೆಯಿಂದ ಭೂಮಿಯನ್ನು ಡಿನೋಟಿಫೀಕೇಶನ್ ಮಾಡಿಸಿ ಇವರು ಖರೀದಿ ಮಾಡಿರುವುದು ದೊಡ್ಡ ಹಗರಣವಾಗಿದೆ. ವಿಶೇಷವಾಗಿ ೧೪ ಸೈಟ್‌ಗಳನ್ನು ಮುಖ್ಯಮಂತ್ರಿಗಳ ಧರ್ಮಪತ್ನಿ ತೆಗೆದುಕೊಂಡಿರುವುದು ಅಪರಾಧವಾಗಿದೆ. 4 ಕಡೆ ಕೇಸ್ ದಾಖಲಾಗಿದೆ. 

ಸಿದ್ದರಾಮಯ್ಯನವರು ಆತ್ಮಸಾಕ್ಷಿಯಾಗಿ ಅನುಗುಣವಾಗಿ ನಡೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ಹಾಗಾದರೇ ಆತ್ಮಸಾಕ್ಷಿ ಯಾವುದು ಎಂದು ಪ್ರಶ್ನಿಸಿದರು.ಆ ಭೂಮಿ ನಿಮ್ಮ ಜಮೀನಲ್ಲಾ, ನಿಮಗೆ ಮಾರಾಟ ಮಾಡಿರುವ ವ್ಯಕ್ತಿಯದೂ ಅಲ್ಲ. ಬೇನಾಮಿ ಕಾಗದ ಪತ್ರಗಳನ್ನು ತಯಾರಿ ಮಾಡಿ, ಡಿನೋಟಿಫಿಕೇಷನ್ ಮಾಡಿಸಿ, ನಿಮ್ಮ ಕುಟುಂಬ ವರ್ಗದವರು ಖರೀದಿ ಮಾಡಿ ನಿಮ್ಮ ಧರ್ಮ ಪತ್ನಿ ಹೆಸರಿನಲ್ಲಿ ಬಿಡಿಸಿಕೊಂಡಿರುವುದು. ಇದು ದೊಡ್ಡ ಹಗರಣ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರ ಮೇಲೆ 4 ಕಡೆ ಎಫ್‌ಐಆರ್ ದಾಖಲಾದ ನಂತರ ೧೨೦ ವರ್ಷದ ಕಾಂಗ್ರೆಸ್ ಪಕ್ಷದ ಮಾನ ಹರಾಜಾಗುತ್ತಿದೆ. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಸ್ವಂತ ಗೌರವ ಮತ್ತು ಕಾಂಗ್ರೆಸ್ ಪಕ್ಷದ ಗೌರವ ಉಳಿಸಿಕೊಳ್ಳಬೇಕು ಎಂದರು. ತನಿಖೆ ಎದುರಿಸಿ ಕ್ಲೀನ್ ಚೀಟ್ ಪಡೆದ ನಂತರ ಮತ್ತೇ ಮುಖ್ಯಮಂತ್ರಿಯಾದರೇ ಅವರು ಶ್ರೇಷ್ಠ ರಾಜಕೀಯ ನಾಯಕರಾಗಿ ಇತಿಹಾಸ ಪುಟಗಳಲ್ಲಿ ಸೇರುತ್ತಿದ್ದರು. ಕುಟುಂಬದ ಸ್ವಾರ್ಥಕ್ಕಾಗಿ, ಕುಟುಂಬದ ಲಾಭಕ್ಕಾಗಿ ಮುಖ್ಯಮಂತ್ರಿಗಳು ಒದ್ದಾಡುತ್ತಿದ್ದಾರೆ. 

ರಾಜೀನಾಮೆ ಕೊಡುವ ಪ್ರಸಂಗ ಇಂದೆಲ್ಲ ನಾಳೆ ಬಂದೇ ಬರುತ್ತದೆ. ಸಿದ್ದರಾಮಯ್ಯನವರು ಒಬ್ಬ ದುರಂತ ನಾಯಕರಾಗುತ್ತಾರೆ ಎಂದು ಭವಿಷ್ಯ ನುಡಿದರು. ಸಿದ್ದರಾಮಯ್ಯನವರು ತಮ್ಮ ೪೦ ವರ್ಷಗಳ ಕಳಂಕ ರಹಿತ ರಾಜಕಾರಣ ಮಾಡುತ್ತ ಬಂದಿದ್ದೇನೆಂದು ಹೇಳುತ್ತಿದ್ದಾರೆ. ಅವರು ಹಗರಣದ ಸರ ಮಾಲೆಯಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ದುರುಪಯೋಗ ಹಗರಣ, ಬೆಂಗಳೂರಿನ ಬಿಡಿಎನಲ್ಲಿ ೪೦೦ ಎಕರೆ ಡಿನೋಟಿಫೀಕೇಶನ್ ಮಾಡಿರುವುದು ಮತ್ತು ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ₹೨೫ ಸಾವಿರ ಕೋಟಿ ಬೇರೆ ಉದ್ದೇಶಕ್ಕೆ ಉಪಯೋಗಿಸಿಕೊಂಡಿದ್ದು ಒಂದು ದುರಂತವಾಗಿದೆ ಎಂದರು.ಜೆಡಿಎಸ್ ಶಾಸಕ ಜಿ.ಟಿ.ದೇವೆಗೌಡರೇ ಹೇಳಲಿ, ಬೇರೆ ಯಾರೇ ಹೇಳಿ ದೇಶದ ಕಾನೂನು ಎಲ್ಲರಿಗೂ ಒಂದೇ ಕಾನೂನು ಪ್ರಕಾರ ನಡೆಯಬೇಕಾದ ಪ್ರಕ್ರಿಯೆ ನಡೆಯಲಿ.

 ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಗರಣದಿಂದ ಮುಕ್ತರಾಗಿ ಹೊರಬರಲು ಸಾಧ್ಯವಿಲ್ಲ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಗೌರವ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮುಧೋಳ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ೨೨ ಸಾವಿರ ಸದಸ್ಯರನ್ನು ನೋಂದಾಯಿಸಿದ್ದಾರೆ. ಅ.೧೫ ವರೆಗೆ ೫೦ ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಈ ವೇಳೆ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ಅರುಣ ಕಾರಜೋಳ, ಕೆಎಂಎಫ್ ನಿರ್ದೇಶಕ ರಾಜುಗೌಡ ಪಾಟೀಲ, ರಾಜು(ನಾರಾಯಣ) ಯಡಹಳ್ಳಿ, ಕೆ.ಆರ್.ಮಾಚಪ್ಪನವರ, ನಾಗಪ್ಪ ಅಂಬಿ, ಕಲ್ಲಪ್ಪ ಸಬರದ, ಗಡ್ಡೆಪ್ಪ ಬಾರಕೇರ, ಎಚ್.ಎನ್.ವಜ್ಜರಮಟ್ಟಿ, ಇತರರು ಇದ್ದರು.

ಈ ಸರ್ಕಾರ ಬಂದ ಮೇಲೆ ಮುಧೋಳ ಮತಕ್ಷೇತ್ರಕ್ಕೆ ಯಾವುದೇ ಹೊಸ ಕಾಮಗಾರಿ ಮಂಜೂರು ಆಗಿಲ್ಲ. ನನ್ನ ಕಾಲಾವಧಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೆ ತಿರುಗಿ ಪೂಜೆ ಮಾಡುವುದು, ಉದ್ಘಾಟಿಸುವುದು ಹಾಸ್ಯಾಸ್ಪವಾಗಿದೆ.

-ಗೋವಿಂದ ಕಾರಜೋಳ, ಚಿತ್ರದುರ್ಗ ಸಂಸದರು.