ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಸೋಲಾರ್ ಅಳವಡಿಕೆ ಕಾಮಗಾರಿಯನ್ನು ಕಂಪನಿಯವರೆ ನಿರ್ವಹಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರೈತರ ಕೃಷಿ ಪಂಪ್‍ಸೆಟ್‍ಗೆ ಸೋಲಾರ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಕಂಪನಿಯವರಿಂದಲೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಕೃಷಿ ಪಂಪ್‍ಸೆಟ್‍ಗಳಿಗೆ ಸೋಲಾರ್ ಮೋಟಾರ್ ಹಾಗೂ ಪೆನಾಲ್ ಬೋರ್ಡ್ ಅಳವಡಿಕೆ ಕಾಮಗಾರಿಯನ್ನು ಟೆಂಡರ್ ಮೂಲಕ ಅನೇಕ ಕಂಪನಿಗಳಿಗೆ ನೀಡಲಾಗಿದೆ. ರೈತರ ವಂತಿಕೆ ಶೇ.20, ಸರ್ಕಾರದ್ದು ಶೇ.80 ಪರ್ಸೆಂಟ್ ಹಣ ಬಳಸಬೇಕೆಂಬ ನಿಯಮವಿದೆ. ಶಕ್ತಿ, ಸಿಆರ್‌ಐ, ಆಸ್ಟ್ರೇಲಿಯನ್, ಮೆಗಾ, ಸ್ವಸ್ತಿಕ್ ಹಾಗೂ ಮತ್ತಿತರೆ ಕಂಪನಿಗಳು ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಕೆಲ ಕಂಪನಿಯವರು ಸಿವಿಲ್ ಕಾಮಗಾರಿಯನ್ನು ರೈತರಿಂದಲೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರೈತರಿಗೆ ನಷ್ಟ ಉಂಟಾಗುತ್ತಿದೆ. ಒಬ್ಬ ರೈತ ಸುಮಾರು 15 ರಿಂದ 20 ಸಾವಿರ ರು. ಖರ್ಚು ಮಾಡಿಕೊಳ್ಳುವಂತಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬೆಸ್ಕಾಂ ಎಂಜಿನಿಯರ್ ಗಳು ಹಾಗೂ ಕಂಪನಿಯವರ ಸಭೆ ನಡೆಸಿ ರೈತರಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಂಡು ಇಲ್ಲಿಯವರೆಗೂ ರೈತರು ಕೈಯಿಂದ ಖರ್ಚು ಮಾಡಿರುವ ಹಣವನ್ನು ಹಿಂದಿರುಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನ ಮಾಳಿಗೆ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಎಂ.ಕಾಂತರಾಜು, ಮಾರುತಿ, ಜಿ.ಬಿ.ಪಾಪಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.