ಮುಂಡರಗಿ ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು.

ಮುಂಡರಗಿ: ಶಿಕ್ಷಕರು ದೇಶದ ಭವಿಷ್ಯದ ನಿಜವಾದ ಶಿಲ್ಪಿಗಳು. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಶಿಕ್ಷಕರ ನಡೆ ಮತ್ತು ನುಡಿ ಸದಾ ಶುದ್ಧವಾಗಿರಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ಕಮಹಾದೇವಿಯ ವಚನವನ್ನು ಸ್ಮರಿಸಿದ ಅವರು, ಕಾಯ ಶುಚಿ, ದ್ರವ್ಯ ಶುಚಿ, ತನ ಶುಚಿ, ಮನ ಶುಚಿ ಹಾಗೂ ಭಾವ ಶುಚಿ ಎಂಬ ಪಂಚತೀರ್ಥಗಳಂತೆ ಶಿಕ್ಷಕರ ನಡೆ-ನುಡಿಗಳು ಪರಿಶುದ್ಧವಾಗಿರಬೇಕು. ಶಿಕ್ಷಕರ ಆದರ್ಶ ಗುಣಗಳನ್ನು ನೋಡಿಯೇ ಮಕ್ಕಳು ತಮ್ಮ ಜೀವನ ರೂಪಿಸಿಕೊಳ್ಳುತ್ತಾರೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಸದಾ ಸನ್ಮಾರ್ಗದ ದಾರಿದೀಪವಾಗಬೇಕು ಎಂದರು.

ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ನಾಗೇಶ ಹುಬ್ಬಳ್ಳಿ ಮಾತನಾಡಿ, ಮನೆಯಲ್ಲಿ ತಾಯಿ ಮೊದಲು ಗುರುವಾಗಿ ಸ್ವಲ್ಪ ಕಲಿಸುತ್ತಾಳೆ. ಆನಂತರ ಶಾಲೆಯಲ್ಲಿನ ಗುರುಗಳು ಇಡೀ ಜೀವನಕ್ಕೆ ಬೇಕಾದ ಎಲ್ಲ ವಿಷಯವನ್ನೂ ಕಲಿಸುತ್ತಾನೆ. ಹೀಗಾಗಿ ನಮಗೆ ಕಲಿಸಿದ ಹಾಗೂ ನಮ್ಮೂರಿನಲ್ಲಿ ಕಾರ್ಯನರ್ವಹಿಸುವ ಶಿಕ್ಷಕರನ್ನು ಎಲ್ಲರೂ ಪೂಜ್ಯ ಭಾವನೆಯಿಂದ ನೋಡಿ, ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಪ್ರಾಚಾರ್ಯ ಶರಣ್ ಕುಮಾರ ಬುಗುಟಿ ಮಾತನಾಡಿ, ವಿದ್ಯಗೆ ವಿನಯವೇ ಭೂಷಣ. ಅಂತಹ ವಿದ್ಯೆಯನ್ನು ನೀಡುವ ಶಿಕ್ಷಕರಲ್ಲಿ ಇತ್ತೀಚೆಗೆ ನಿಧನ ಹೊಂದಿದ ಆದರ್ಶ ಶಿಕ್ಷಕ ಶಂಕರ ಕಲ್ಲಿಗನೂರ ಒಬ್ಬರು. ಅವರು ಶಿಕ್ಷಕ ವೃತ್ತಿಗೆ ಹೆಚ್ಚಿನ ಗೌರವ ತಂದು ಕೊಟ್ಟಿದ್ದರು ಎಂದರು.

ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಈಶಣ್ಣ ಬೆಟಗೇರಿ, ಕೊಟ್ರೇಶ ಅಂಗಡಿ, ಹೇಮಗಿರೀಶ ಹಾವಿನಾಳ ಉಪಸ್ಥಿತರಿದ್ದರು. ಮಧು ಹೊಸಮನಿ ಕಾರ್ಯಕ್ರಮ ನಿರೂಪಿಸಿದಳು. ಸಾನಿಕಾ ಹೆಗ್ಗಡಾಳ ಸ್ವಾಗತಿಸಿದಳು. ಸಾಕ್ಷಿ ನವಲಗುಂದ ವಂದಿಸಿದಳು.