ಸಾರಾಂಶ
ಯಾವುದೇ ಸಮ್ಮೇಳನಗಳು ನಡೆಯಲಿ ಅವು ಜಾತ್ಯತೀತವಾಗಿ, ಪಕ್ಷಾತೀತವಾಗಿ, ಧರ್ಮತೀತವಾಗಿ ನಡೆದಾಗ ಅಂತಹ ಸಮ್ಮೇಳನಗಳು ಅರ್ಥಪೂರ್ಣವಾಗಿರುತ್ತವೆ ಎಂದು ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಸಿದ್ದಲಿಂಗಪ್ಪ ಹೇಳಿದರು. ಚನ್ನಗಿರಿಯಲ್ಲಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಜ ಕೆಂಗಪ್ಪ ನಾಯಕ ಮಹಾದ್ವಾರದ, ದಿವಂಗತ ಜಿ.ಸಿದ್ದಲಿಂಗಪ್ಪ ಗೌಡ್ರು ಮಹಾ ವೇದಿಕೆಯಿಂದ ಅಧ್ಯಕ್ಷರ ಭಾಷಣದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಯಾವುದೇ ಸಮ್ಮೇಳನಗಳು ನಡೆಯಲಿ ಅವು ಜಾತ್ಯತೀತವಾಗಿ, ಪಕ್ಷಾತೀತವಾಗಿ, ಧರ್ಮತೀತವಾಗಿ ನಡೆದಾಗ ಅಂತಹ ಸಮ್ಮೇಳನಗಳು ಅರ್ಥಪೂರ್ಣವಾಗಿರುತ್ತವೆ ಎಂದು ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಸಿದ್ದಲಿಂಗಪ್ಪ ಹೇಳಿದರು.ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಬುಧವಾರ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಜ ಕೆಂಗಪ್ಪ ನಾಯಕ ಮಹಾದ್ವಾರದ, ದಿವಂಗತ ಜಿ.ಸಿದ್ದಲಿಂಗಪ್ಪ ಗೌಡ್ರು ಮಹಾ ವೇದಿಕೆಯಿಂದ ಅಧ್ಯಕ್ಷರ ಭಾಷಣದಲ್ಲಿ ಮಾತನಾಡಿ, ಈ ನೆಲದ ಜಲದ ಫಲವನ್ನು ಸ್ವೀಕರಿಸುವ ಯಾರೇ ಆಗಲಿ ಗೊಂದಲಗಳನ್ನು ಸೃಷ್ಠಿಸುವ ಪ್ರಯತ್ನ ಮಾಡಿದರೆ ಅದು ಆತ್ಮದ್ರೋಹ ವಾಗುತ್ತದೆ. ನನ್ನ ಭಾಲ್ಯದ ತುಂಬ ಏರಿಳಿತಗಳಿಂದ ಕೂಡಿತ್ತು ಎಂದು ಸ್ಮರಿಸಿಕೊಂಡರು.
ಕೇವಲ ಬಾಯಿಂದ ಬಾಯಿಗೆ ಬರುತ್ತಿರುವ ಅನೇಕ ಜನಪದ ಕಥೆಗಳು, ಬೀಸುವ ಕಲ್ಲಿನ ಪದಗಳು, ಸೋಬಾನೆ ಪದಗಳು, ಲಾಲಿ ಹಾಡುಗಳು, ಭಜನೆ, ಕೋಲಾಟ ಇಂತಹ ಕಲೆಗಳು ಕನ್ನಡದ ಸಮಾರಂಭಗಳಲ್ಲಿ ಪ್ರಚಾರಕ್ಕೆ ಬರಬೇಕು. ಈಗಿನ ಮಕ್ಕಳಲ್ಲಿ ಯುವಪೀಳಿಗೆಯಲ್ಲಿ ಪ್ರಭಾವ ಬೀರುವಂತೆ ಶಾಲಾ ಪಠ್ಯದಲ್ಲಿ ಇಂತಹ ವಿಚಾರಧಾರೆಗಳು ಸೇರಬೇಕು. ಕನ್ನಡ ತಾಯಿಯ ಮಕ್ಕಳು ಸ್ವಾಭಿಮಾನ ಉಳಿಸಿಕೊಂಡು ಕನ್ನಡ ಉಳಿಸಿ ಬೆಳಸಬೇಕು. ಇಲ್ಲಿನ ನೆಲದ, ಜಲದ ಫಲವನ್ನು ಸವಿಯುವ ಜನತೆಗೆ ಕನ್ನಡ ಭಾಷೆಯನ್ನು ಕಲಿಸಬೇಕು. ಕನ್ನಡ ಎಂದರೆ ಕೇವಲ ಊಟ, ವಸತಿ, ಆಚಾರ ವಿಚಾರ, ಆಟ, ಪಾಠ ಎಂದು ಆರ್ಥ ಮಾಡಿಕೊಂಡು ಆರೋಗ್ಯಕರವಲ್ಲದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗದೆ ಪರಕೀಯತೆಯನ್ನು ಅನುಕರಣೆ ಮಾಡಬಾರದು ಎಂದು ಭಾಷಣದಲ್ಲಿ ಹೇಳಿದರು.