ಸಾರಾಂಶ
ಹೂವಿನಹಡಗಲಿ: ಹಣ, ಹೆಂಡ, ತೋಳ್ಬಲ ಬಳಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಪಕ್ಷ ಮೊದಲು ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಮತಯಾಚನೆ ಮಾಡಿದ ಅವರು, ದೇಶದಲ್ಲಿ 10 ವರ್ಷ ಪ್ರಧಾನಿಯಗಿರುವ ನರೇಂದ್ರ ಮೋದಿ ಒಂದು ದಿನವೂ ರಜೆ ಇಲ್ಲದಂತೆ ದೇಶದ ಜನರ ಕೆಲಸ ಮಾಡುತ್ತಿದ್ದಾರೆ. ಇಂತಹ ಧೀಮಂತ ನಾಯಕನ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಮಾಡುತ್ತಿದ್ದೇವೆ. ದೇಶದಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಲೋಕಸಭೆಗೆ ಶ್ರೀರಾಮುಲು ಗೆದ್ದರೆ ಸಂಸತ್ತಿನ ಗುಡುಗಿ ನಿಮ್ಮ ಪರ ಕೆಲಸ ಮಾಡುತ್ತಾರೆ. ರಾಮುಲು ಹೋರಾಟಗಾರ. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಒತ್ತಾಯ ಮಾಡಿ ಬಿಜೆಪಿ ಟಿಕೆಟ್ ನೀಡಿದ್ದೇವೆ. ಅವರಿಗೆ ಹೆಚ್ಚಿನ ಮತಗಳನ್ನು ನೀಡಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ಮಟ್ಟ ಹಾಕಲು ತೆಗೆದುಕೊಂಡ ನಿರ್ಧಾರದಿಂದ, ಎಲ್ಲ ಭಯೋತ್ಪಾದಕರು ಬಿಲ ಸೇರಿದ್ದಾರೆ. ಕೆಲ ಸಮುದಾಯಗಳನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಮಾಡಿಕೊಂಡು ಅವರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಹಿಂದೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ ಅದಕ್ಕೆ ₹5 ಕೋಟಿ ನೀಡಿದ್ದರು. ಜತೆಗೆ ಬಸವಣ್ಣನವರ ಜನ್ಮ ಸ್ಥಳವಾಗಿರುವ ಬಸವನ ಬಾಗೇವಾಡಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ₹5 ಕೋಟಿ ನೀಡಿರುವ ಧೀಮಂತ ಮುಖ್ಯಮಂತ್ರಿಯಾಗಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಶಾಸಕರಿಗೆ ಅನುದಾನ ನೀಡದೇ, ಪ.ಜಾ, ಪ.ಪಂದ ಸಮುದಾಯಗಳ ಅಭಿವೃದ್ಧಿಗೆ ಇದ್ದ ₹11 ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಮಾಡದೇ ನುಂಗಿ ಹಾಕಿದ್ದಾರೆಂದು ಆರೋಪಿಸಿದರು.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹೂವಿನಹಡಗಲಿಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಒಂಟೆತ್ತು ಆಗಿದ್ದಾರೆ. ನಮ್ಮನ್ನು ಗೆಲ್ಲಿಸಿ ಅವರ ಜೊತೆಗೆ ಜೋಡೆತ್ತು ಆಗಿ ನಿಮ್ಮ ಸೇವೆ ಮಾಡುತ್ತೇವೆಂದು ಹೇಳಿದರು.ಶಾಸಕ ಕೃಷ್ಣನಾಯ್ಕ ಮಾತನಾಡಿದರು. ಎಂಎಲ್ಸಿ ರವಿಕುಮಾರ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಚೆನ್ನಬಸನಗೌಡ, ಹಣ್ಣಿ ಶಶಿಧರ, ಓದೋ ಗಂಗಪ್ಪ, ಎಚ್.ಪೂಜೆಪ್ಪ, ಆರುಂಡಿ ನಾಗರಾಜ, ಎಂ.ಪರಮೇಶ್ವರಪ್ಪ, ಈಟಿ ಲಿಂಗರಾಜ, ಬೀರಬ್ಬಿ ಬಸವರಾಜ, ಎಸ್.ಸಂಜೀವರೆಡ್ಡಿ, ಮೇಟಿ ಹುಲುಗೇಶ, ಹಂಪಸಾಗರ ಕೋಟೆಪ್ಪ, ಎಸ್.ಗುರುಸಿದ್ದಪ್ಪ, ತೋಟನಾಯ್ಕ, ಸಿದ್ಧಾರ್ಥ ಸಿಂಗ್, ತಳಕಲ್ಲು ಕರಿಬಸಪ್ಪ, ಸೊನ್ನದ ಕೊಟ್ರೇಶ, ಪುತ್ರೇಶ, ಗಡ್ಡಿ ಬಸವರಾಜ, ಕೆ.ಬಿ.ವೀರಭದ್ರಪ್ಪ ಸೇರಿದಂತೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಎಂಎಲ್‌ಸಿ ರವಿಕುಮಾರ ಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಿದರು. ಅಭ್ಯರ್ಥಿ ಬಿ.ಶ್ರೀರಾಮುಲು ಇವರು, ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮುಸ್ಕಾರ ಮಾಡಿದರು.