ಸಂವಿಧಾನ ನಮಗೆ ಮಾರ್ಗದರ್ಶನ ನೀಡುವ ಒಂದು ಕೈಪಿಡಿ ಆಗಲಿ: ಪುರುಷೋತ್ತಮ ಬಿಳಿಮಲೆ

| Published : Apr 21 2025, 12:55 AM IST

ಸಂವಿಧಾನ ನಮಗೆ ಮಾರ್ಗದರ್ಶನ ನೀಡುವ ಒಂದು ಕೈಪಿಡಿ ಆಗಲಿ: ಪುರುಷೋತ್ತಮ ಬಿಳಿಮಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನವನ್ನು ನಾವು ರಕ್ಷಿಸಿದರೆ ನಮ್ಮನ್ನು ರಕ್ಷಿಸುವ ಜವಾಬ್ದಾರಿಯನ್ನು ಸಂವಿಧಾನ ಹೊತ್ತುಕೊಳ್ಳುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನವನ್ನು ನಾವು ರಕ್ಷಿಸಿದರೆ ನಮ್ಮನ್ನು ರಕ್ಷಿಸುವ ಜವಾಬ್ದಾರಿಯನ್ನು ಸಂವಿಧಾನ ಹೊತ್ತುಕೊಳ್ಳುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ಭವನದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ವತಿಯಿಂದ ಡಾ.ಎಚ್.ಸಿ.ಮಹದೇವಪ್ಪ ಅವರ ಜನ್ಮದಿನದ ಪ್ರಯುಕ್ತ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಸಂವಿಧಾನ ಎಂಬುವುದು ಅದು ಆರಾಧಿಸುವ, ಗೌರವಿಸುವ ಒಂದು ಗ್ರಂಥವಾಗದೆ ಅದು ನಮ್ಮ ಬದುಕಿನ ಭಾಗವಾಗಬೇಕಾದರೆ ನಾವು ಅದರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕಾಗುತ್ತದೆ. ನಮಗೆ ಪಠ್ಯಪುಸ್ತಕದಲ್ಲಿ ಸಂವಿಧಾನ ಬಗ್ಗೆ ಒಂದು ಮಾಹಿತಿ ಇತ್ತು. ಅದನ್ನು ಬರೆದವರು ಅಂಬೇಡ್ಕರ್ ಎಂಬ ವಿವರಣೆ ಇತ್ತು. ಅದರ ಆಚೆಗೆ ನಾವು ಸಂವಿಧಾನದ ಬಗ್ಗೆ ಚರ್ಚೆ ಮಾಡುವುದಾಗಲಿ, ಅಥವಾ ಒಂದು ಕಾರ್ಯಕ್ರಮ ಆರಂಭವಾದಾಗ ಸಂವಿಧಾನದ ಪ್ರಸ್ತಾವನೆಯನ್ನು ಓದಿದ್ದಾಗಲಿ, ಸಂವಿಧಾನ ಬಗ್ಗೆ ಅತ್ಯಂತ ಸರಳವಾದ ನಿರೂಪಣೆ, ಪುಸ್ತಕ ಪ್ರಕಟಿಸಿದ್ದಾಗಲಿ ನಡೆದಿಲ್ಲ ಎಂದರು.

ದೇಶದ ಪ್ರಧಾನಮಂತ್ರಿ ಮೋದಿ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಅಧಿಕಾರದ ಬೇರೆ ಬೇರೆ ಸ್ಥಾನಗಳನ್ನು ಆಕ್ರಮಿಸಿಕೊಂಡಂಥ ಹಿಂದುತ್ವವಾದಿಗಳು ಸಂವಿಧಾನವನ್ನು ಅವರ ಕಾರಣಗಳಿಗೋಸ್ಕರ ಗೌಣಗೊಳಿಸಿ, ಎಷ್ಟು ಬಾರಿ ಸಂವಿಧಾನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕಿದೆ. ಹಾಗಾಗಿ ಸಂವಿಧಾನ ಒಂದು ಆರಾಧನಾ ಗ್ರಂಥವಾಗುವುದು ಬೇಡ. ಆರಾಧನಾ ಗ್ರಂಥವಾಗಿ ಭಗವದ್ಗೀತೆ, ವೇದೋಪನಿಷತ್ತುಗಳಿವೆ. ನಮಗೆ ಭಾರತೀಯ ಸಂವಿಧಾನ ಎಂಬುವುದು ಆರಾಧನಾ ಗ್ರಂಥವಲ್ಲ, ಒಂದು ಪಠಣ ಮಾಡುವ ಗ್ರಂಥವಲ್ಲ. ಅದು ನಮ್ಮ ಬದುಕಿನ ಭಾಗವಾಗಿ ಕ್ಷಣಕ್ಷಣಕ್ಕೂ ನಮಗೆ ಮಾರ್ಗದರ್ಶನ ನೀಡುವಂಥ ಒಂದು ಕೈಪಿಡಿ ಆಗಬೇಕು ಎಂದರು.

ಸಂವಿಧಾನಕ್ಕೆ ಕೆಡಕಾದರೆ ದೇಶ ವಿನಾಶ:ಅಧ್ಯಕ್ಷತೆ ವಹಿಸಿದ್ದ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆ‌ರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನಕ್ಕೆ ಕೆಡಕು ಉಂಟು ಆದರೆ ದೇಶ ವಿನಾಶ ಆಗುತ್ತದೆ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅಂಬೇಡ್ಕ‌ರ್ ವಿಚಾರಧಾರೆಗಳನ್ನು ಆಳವಾಗಿ ತಿಳಿದುಕೊಂಡು ಅವರ ಆಶಯಗಳಿಗೆ ಬದ್ಧರಾಗಿದ್ದಾರೆ. ಅವರಿಗೆ ಭಗವಂತ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ, ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಉನ್ನತ ಹುದ್ದೆ ಅಲಂಕರಿಸಲಿ ಎಂದು ಶುಭ ಕೋರಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧವಿಹಾರ ಬಂತೆ ಡಾ. ಕಲ್ಯಾಣಸಿರಿ, ಜೇತವನ ಬುದ್ಧ ವಿಹಾರದ ಬಂತೆ ಮನೋರಖಿತ ದಿವ್ಯಸಾನಿಧ್ಯ ವಹಿಸಿದ್ದರು.

ಲೇಖಕಿ ಡಾ.ದು.ಸರಸ್ವತಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತು ವಿಷಯ ಮಂಡಿಸಿದರು. ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ದೇಶ ಬಿಕ್ಕುಟ್ಟುಗಳ ಹಿಂದೆ ಮಾಧ್ಯಮಗಳ ಪಾತ್ರ ಕುರಿತು ವಿಚಾರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಬಿ.ಕೆ.ರವಿಕುಮಾರ್, ಆಯೋಜಕ ವಡಗೆರೆ ಡಾ.ಮಹದೇವು, ಪಿ.ಸಂಘಸೇನ, ಕೆ.ಎಂ.ನಾಗರಾಜು, ಶಂಕರ್, ಎಂ.ಶಿವನಾಗಣ್ಣ, ದೊಡ್ಡರಾಯಪೇಟೆ ಸಿದ್ದರಾಜು, ಇತರರು ಹಾಜರಿದ್ದರು.