ಸಂವಿಧಾನ ರಕ್ಷಿಸುವ ಕೆಲಸವಾಗಲಿ: ಸಚಿವ ಪ್ರಿಯಾಂಕ್ ಖರ್ಗೆ

| Published : Jan 27 2024, 01:17 AM IST

ಸಾರಾಂಶ

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ನಾವೆಲ್ಲ ಒಗ್ಗಟ್ಟಾಗಿ ನಿಂತು ದೇಶ ಕಟ್ಟಬೇಕಾಗಿದೆ ಎಂದು ಉಸ್ತುವಾರಿ ಸಚಿವರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಭಾರತದ ಸಂವಿಧಾನ ಈ ದೇಶದ‌ ನಾಗರಿಕರಿಗೆ ಸ್ವಾಭಿಮಾನ, ಸಮಾನತೆಯ ಹಾಗೂ ಗೌರವದ ಬದುಕು ಕಲ್ಪಿಸಿ ಕೊಟ್ಟಿದೆ. ಪ್ರಸ್ತುತ ಸಂದರ್ಭದಲ್ಲಿ ಅದನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ. ಕೆಲ ಸಂಘಟನೆಗಳು ಸಂವಿಧಾನದ ಕುರಿತು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಸಂಘಟನೆಗಳಿಗೆ ಸಮಾನತೆ ಯಾಕೆ ಬೇಕಾಗಿಲ್ಲ ಎಂದು ತಿಳಿಯುತ್ತಿಲ್ಲ. ಇತ್ತೀಚಿನ ವರ್ಷಗಳಿಂದ ದೇಶದಲ್ಲಿ ವಿಚಿತ್ರ ವಾತಾವರಣ‌ ನಿರ್ಮಾಣವಾಗಿದೆ. ನೀವು ನನ್ನ ತತ್ವ, ವಿಚಾರ ಒಪ್ಪಿಲ್ಲ ಎಂದರೆ ಹಾಗೂ ನಾನು‌ ನಿಮ್ಮ ವಿಚಾರ ಒಪ್ಪಿಲ್ಲ ಎಂದರೆ ದೇಶದ್ರೋಹಿ ಎನ್ನಲಾಗುತ್ತಿದೆ. ಇಂತಹ ಸನ್ನಿವೇಶ ಈಗ ನಿರ್ಮಾಣವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಚಾರಗಳಲ್ಲಿ ಭಿನ್ನತೆ ಇದ್ದರೂ ಅದು ಸಂವಿಧಾನ ವಿರೋಧವಲ್ಲ ಎಂದರು.

ನಮ್ಮ ಆಚಾರ ವಿಚಾರಗಳಲ್ಲಿ‌ ವಿಭಿನ್ನತೆ ಇದ್ದರೂ ಕೂಡಾ ನಾವೆಲ್ಲ ಒಂದೇ ವೇದಿಕೆಯ ಮೇಲೆ ಇದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ನಾವೆಲ್ಲ ಒಗ್ಗಟ್ಟಾಗಿ ನಡೆದು ದೇಶಕಟ್ಟುವ ಕೆಲಸ ಮಾಡಬೇಕು. ಯಾಕೆಂದರೆ ದೇಶ ನಡೆಯುತ್ತಿರುವುದು ಯಾವುದೇ ಧರ್ಮಗ್ರಂಥಗಳಿಂದ ಅಲ್ಲ, ಸಂವಿಧಾನದಿಂದ ಎನ್ನುವುದು ಮುಖ್ಯವೆಂದರು.

ವಿವಿಧ ಭಾಷೆ, ಧರ್ಮ, ಜಾತಿಯ ಜನರಿರುವ ಭಾರತಕ್ಕೆ‌ ಒಂದು ಸಮಗ್ರ ಸಂವಿಧಾನದ ಅವಶ್ಯಕತೆ ಇತ್ತು. ಬಾಬಾಸಾಹೇಬರು ಹಲವಾರು ದೇಶಗಳ ಸಂವಿಧಾನ ಅಧ್ಯಯನ ಮಾಡಿ ದೇಶದ‌ ನಾಗರಿಕರ ಮೂಲಭೂತ ಹಕ್ಕು, ಸಮಾನತೆ, ಭ್ರಾತೃತ್ವತೆ, ದೇಶಭಕ್ತಿ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು‌ 141 ದಿನಗಳ ಕರಡನ್ನು ರಚಿಸಿ ಕೊಟ್ಟರು. ನಂತರ 2 ವರ್ಷ 11 ತಿಂಗಳ ಸುದೀರ್ಘ ಚರ್ಚೆ ನಡೆದು‌ ವಿಶ್ವದ ಅತಿದೊಡ್ಡ ಸಂವಿಧಾನ ಜಾರಿಗೆ ಬಂದು. ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ತಿದ್ದುಪಡಿ ತರುವ ಅವಕಾಶ ನೀಡಲಾಯಿತು. ಹಾಗಾಗಿ ಭಾರತದ ಸಂವಿಧಾನವನ್ನು ‘ಲಿವಿಂಗ್ ಡಾಕುಮೆಂಟ್’ ಎಂದು ಕರೆಯಲಾಗುತ್ತದೆ ಎಂದರು.

1949 ನ.25 ರಂದು ಡಾ.ಅಂಬೇಡ್ಕರ್ ಕಾನ್ಸ್‌ಟಿಟ್ಯೂಯೆಂಟ್‌ ಅಸೆಂಬ್ಲಿಯಲ್ಲಿ ಮಾತನಾಡುತ್ತಾ, ಜಾತಿಗಳ ಮಧ್ಯೆ ಜಗಳ ಹಚ್ಚುವವರು, ದೇಶದ ಆರ್ಥಿಕತೆಗೆ, ಸಮಾಜಿಕ ಹಾಗೂ ಭ್ರಾತೃತ್ವಕ್ಕೆ ಧಕ್ಕೆ ತರುವವರೇ ನಿಜವಾದ ದೇಶದ್ರೋಹಿಗಳು ಎಂದು ಅಭಿಪ್ರಾಯಪಡುತ್ತಾರೆ. ಆ ಮಾತು ಇಂದಿಗೂ ಪ್ರಸ್ತುತ ಎಂದರು.

ಸಂವಿಧಾನದ ಪೀಠಿಕೆ‌ ಕುರಿತಂತೆ ಜಾಗೃತಿ ಮೂಡಿಸಲು ಜಿಲ್ಲೆಯ 261 ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತ ಸಮಾವೇಶ ಆಯೋಜಿಸಲಾಗಿದೆ ಎಂದರು.