ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಈ ಭಾಗದ ಏಳು ಜಿಲ್ಲೆಗಳ ಸುಮಾರು 6.20 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿರುವ ಆಲಮಟ್ಟಿ ಜಲಾಶಯ ನೀರಾವರಿಯ ದೇಗುಲ ಎಂದು ಕೆಬಿಜೆಎಲ್‌ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಐಎಎಸ್ ಅಧಿಕಾರಿ ಕೆ.ಪಿ.ಮೋಹನರಾಜ್ ಅಭಿಪ್ರಾಯಪಟ್ಟರು.ಕೆಬಿಜೆಎಲ್‌ಎಲ್ ವತಿಯಿಂದ ಇಲ್ಲಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ವಿವಿಧ ಶಾಲೆಯ ಮಕ್ಕಳಿಂದ ಪಥಸಂಚಲನದ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಈ ಜಲಾಶಯ ಬರಪ್ರದೇಶದ ಸುಮಾರು ಏಳು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಶೈಲಿಯನ್ನೇ ಬದಲಿಸಿದೆ ಎಂದರು.
ಮುಳವಾಡ ಏತ ನೀರಾವರಿ ಯೋಜನೆಯ ಮೂಲಕ ಸುಮಾರು 55 ಟಿಎಂಸಿ ಅಡಿಯಷ್ಟು ನೀರನ್ನು ಕಾಲುವೆಗೆ ಪಂಪ್‌ಸೆಟ್ ಮೂಲಕ ಹರಿಸಲಾಗುತ್ತದೆ. ಇದರಿಂದ ಇಡೀ ಒಂದು ನದಿಯನ್ನೇ ಪಂಪ್‌ಸೆಟ್ ಮೂಲಕ ಎತ್ತಿ ಹರಿಸಿದಂತಾಗುತ್ತದೆ. ಇದರಿಂದ 2.27 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಲಿದೆ ಎಂದ ಅವರು, ಹನಿ ನೀರಾವರಿ ಯೋಜನೆಗಳನ್ನು ಹೆಚ್ಚೆಚ್ಚು ಜಾರಿಗೆ ಬಂದರೆ ನೀರಿನ ಹಿತಮಿತ ಉಳಿತಾಯದ ಜತೆಗೆ ಸವಳು-ಜವಳಿನ ಸಮಸ್ಯೆಯೂ ಬಗೆಹರಿದು, ಹೆಚ್ಚು ಪ್ರದೇಶಕ್ಕೆ ನೀರಾವರಿ ಕಲ್ಪಿಸಬಹುದು ಎಂದು ಹೇಳಿದರು.ನೌಕರರ ಸಂಘದ ಅಧ್ಯಕ್ಷ ಎಸ್.ಬಿ.ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಕೆಬಿಜೆಎಲ್‌ಎಲ್ ಹಿರಿಯ ಅಧಿಕಾರಿಗಳಾದ ಎಚ್.ಎನ್. ಶ್ರೀನಿವಾಸ, ಡಿ.ಬಸವರಾಜು, ಗೋವಿಂದ ರಾಠೋಡ, ವಿ.ಜಿ.ಕುಲಕರ್ಣಿ, ರವೀಂದ್ರನಾಥ ಹಜೇರಿ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರ.ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಶರಣಪ್ಪ ಚಲವಾದಿ, ರವಿ ಚಂದ್ರಗಿರಿಯವರ, ಸೇವಾಲಾಲ ಚವ್ಹಾಣ, ಸಹಾಯಕ ಕಮಾಂಡೆಂಟ್ ಅರುಣ ಡಿ.ವಿ, ಪಿಎಸ್ಐ ದಿಲೀಪಕುಮಾರ, ಡಿಎಫ್ಒ ರಾಜಣ್ಣ ನಾಗಶೆಟ್ಟಿ, ಪ್ರಾಚಾರ್ಯ ವಿ.ಶಾಂತಿ, ಪಿ.ಎ.ಹೇಮಗಿರಿಮಠ, ಎಸ್.ಐ.ಗಿಡ್ಡಪ್ಪಗೋಳ, ಜಿ.ಎಂ. ಕೊಟ್ಯಾಳ, ಮಹೇಶ ಗಾಳಪ್ಪಗೋಳ, ಬಿ.ಎಸ್. ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಜಿ.ಸಿ.ದ್ಯಾವಣ್ಣವರ, ಕೆ.ಎನ್. ಹಿರೇಮಠ, ತನುಜಾ ಪೂಜಾರಿ ಮತ್ತೀತರರು ಇದ್ದರು.
ಯಾತ್ರಿ ನಿವಾಸ ನಿರ್ಮಿಸಿ: ಆಲಮಟ್ಟಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಬೇಕು, ಆಲಮಟ್ಟಿಯ ವಿವಿಧ ಶಾಲೆಗಳಿಗೆ ಕೆಬಿಜೆಎನ್ಎಲ್ ವತಿಯಿಂದ ಸ್ಮಾರ್ಟ್‌ಕ್ಲಾಸ್ ಅಳವಡಿಸಬೇಕು, ಶಾಲೆಗಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಬೇಕು, ಶಾಲಾ ಆಟದ ಮೈದಾನವನ್ನು ಸ್ಟೇಡಿಯಂ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಎಂಡಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಅವರು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಆಧೀನದ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಎಂಡಿ ಮೋಹನರಾಜ ಸೂಚಿಸಿದರು.