ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗಜಿಲ್ಲೆಯಲ್ಲಿ ಪ್ರವಾಸೋದ್ಯಮ ಆಭಿವೃದ್ಧಿ ವಿಫುಲ ಅವಕಾಶಗಳಿದ್ದು, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಭರವಸೆ ನೀಡಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಕಾಣದಿರುವುದು ಬೇಸರ ತಂದಿದೆ. ಜೋಗ, ಗುಡವಿ, ಸಕ್ರೆಬೈಲು, ಸಿಂಹಧಾಮ ಸೇರಿದಂತೆ ಅನೇಕ ಪ್ರೇಕ್ಷಣೀಯ ಮತ್ತು ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಜೊತೆಗೆ ವೈದ್ಯಕೀಯ ಪ್ರವಾಸೋದ್ಯಮ, ಕೈಗಾರಿಕಾ ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ದೊರೆಯಬಹುದಾದ ಅವಕಾಶಗಳನ್ನು ಗುರುತಿಸಿ ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮೂರ್ನಾಲ್ಕು ಸಭೆಗಳನ್ನು ಆಯೋಜಿಸಿ ಚರ್ಚಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಉತ್ಸುಕರಾಗಿರುವ ಉದ್ಯಮಿಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಈಗಾಗಲೇ ಕೈಗಾರಿಕಾ ಇಲಾಖಾ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಸ್ಥಳೀಯವಾಗಿರುವ ಜನಪದ ಹಾಗೂ ಪಾರಂಪರಿಕ ವೈದ್ಯಕೀಯ ವ್ಯವಸ್ಥೆಯನ್ನು ಪರಿಚಯಿಸುವುದರ ಜೊತೆಗೆ ಮಲೆನಾಡಿನ ತಾಣಗಳಲ್ಲಿ ನೈಸರ್ಗಿಕ ಚಿಕಿತ್ಸಾ ವಿಧಾನಗಳ ಮೂಲಕ ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿನ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಅದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.
ಬಳ್ಳಿಗಾವಿ ಅಭಿವೃದ್ಧಿಗೆ ನೆರವು:ನಮ್ಮ ಕೋರಿಕೆಯಂತೆ ಮುಖ್ಯಮಂತ್ರಿ ಅವರು 12ನೇ ಶತಮಾನದ ಶರಣ ಅಲ್ಲಮ ಪ್ರಭುಗಳ ಹೆಸರನ್ನು ನಗರದ ಹಳೇ ಜೈಲಿನ ಆವರಣಕ್ಕೆ ನಾಮಕರಣಗೊಳಿಸಿ ಆದೇಶಿಸಿರುವುದು ಹಾಗೂ ಅಲ್ಲಮರ ಜನ್ಮಸ್ಥಳ ಬಳ್ಳಿಗಾವಿಯನ್ನು ಅಭಿವೃದ್ಧಿಪಡಿಸಲು ಅಗತ್ಯ ನೆರವನ್ನು ಒದಗಿಸುವುದಾಗಿ ತಿಳಿಸಿರುವುದು ಹರ್ಷವೆನಿಸಿದೆ. ಅಲ್ಲದೇ, ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವುದು ನಾಡಿನ ಜನರಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.
ವಿಮಾನ ನಿಲ್ದಾಣ ಮತ್ತು ಸ್ಮಾರ್ಟ್‍ಸಿಟಿ ಯೋಜನೆಗಳಲ್ಲಿ ಅನೇಕ ನ್ಯೂನತೆಗಳಿವೆ. ಇದನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವುಗಳ ತನಿಖೆಗೆ ಸೂಚಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ತುಮಕೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಂತೆಯೇ, ಜಿಲ್ಲೆಗೆ ಸಂಪರ್ಕ ವ್ಯವಸ್ಥೆ ಇನ್ನಷ್ಟು ಜನರನ್ನು ತಲುಪಿಸಲು, ಸಕಾಲದಲ್ಲಿ ಜನರು ನಿರೀಕ್ಷಿಸಿದ ಸ್ಥಳಗಳಿಗೆ ತಲುಪಲು ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಉದ್ದೇಶಿಸಿದೆ. ಈಗಾಗಲೇ ಸಂಬಂಧಿಸಿದ ಇಲಾಖಾ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಮತ್ತಿತರರು ಇದ್ದರು.
- - - -26ಎಸ್‌ಎಂಜಿಕೆಪಿ07: ಮಧು ಬಂಗಾರಪ್ಪ