ಕೊಪ್ಪಳದ ಗವಿಸಿದ್ಧೇಶ್ವರನ ಮಹಾರಥೋತ್ಸವಕ್ಕೆ ಕ್ಷಣಗಣನೆ

| Published : Jan 27 2024, 01:16 AM IST

ಸಾರಾಂಶ

ಗವಿಮಠದಲ್ಲಿ ಅಭಿವೃದ್ಧಿಯ ಕ್ರಾಂತಿಯೇ ಆಗಿದ್ದು, ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಗಿಡ ಮರಗಳಿಂದ ಪರಿಸರ ಹಸಿರಾಗಿದ್ದು, ಹಸಿರು ಹುಲ್ಲನ್ನೇ ಮಠದ ಆವರಣದಲ್ಲಿ ಹಾಸಿದಂತಾಗಿದೆ. ನೋಡುವುದೇ ಒಂದು ಸಂಭ್ರಮವಾಗಿದೆ. ಇನ್ನು ರಾತ್ರಿ ವೇಳೆಯಲ್ಲಿ ಝಗಮಗಿಸುವ ವಿದ್ಯುತ್ ದೀಪಗಳು ಅಂದ ಹೆಚ್ಚಿಸಿವೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಮಹಾರಥೋತ್ಸವ ಜ.27ರಂದು ಸಂಜೆ 5.30ಕ್ಕೆ ಜರುಗಲಿದೆ. ಇಡೀ ಕೊಪ್ಪಳದಲ್ಲಿ ಸಡಗರ ಮನೆ ಮಾಡಿದ್ದು, ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಬೀದಿ- ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಕಂಗೊಳಿಸುವಂತಿದೆ. ಜನರೇ ಸ್ವಯಂ ಪ್ರೇರಣೆಯಿಂದ ತಮ್ಮ ಮನೆ ಮುಂದೆ ರಂಗೋಲಿಯ ಚಿತ್ತಾರ ಬಿಡಿಸಿದ್ದಾರೆ. ತಳಿರು-ತೋರಣ ಕಟ್ಟಿದ್ದಾರೆ.ಝಗಮಗ: ಜಾತ್ರಾ ಮಹೋತ್ಸವ ಅಂಗವಾಗಿ ಮಠ ಝಗಮಗಿಸುತ್ತಿದೆ. ವಿದ್ಯುತ್ ದೀಪಗಳ ಅಲಂಕಾರ, ರಂಗೋಲಿಯ ಚಿತ್ತಾರ ಸೇರಿದಂತೆ ಇಡೀ ಮಠ ಕಂಗೊಳಿಸುತ್ತಿದ್ದು, ನೋಡಲು ಎರಡು ಕಣ್ಣು ಸಾಲದಂತಾಗಿದೆ.ಗವಿಮಠದಲ್ಲಿ ಅಭಿವೃದ್ಧಿಯ ಕ್ರಾಂತಿಯೇ ಆಗಿದ್ದು, ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಗಿಡ ಮರಗಳಿಂದ ಪರಿಸರ ಹಸಿರಾಗಿದ್ದು, ಹಸಿರು ಹುಲ್ಲನ್ನೇ ಮಠದ ಆವರಣದಲ್ಲಿ ಹಾಸಿದಂತಾಗಿದೆ. ನೋಡುವುದೇ ಒಂದು ಸಂಭ್ರಮವಾಗಿದೆ. ಇನ್ನು ರಾತ್ರಿ ವೇಳೆಯಲ್ಲಿ ಝಗಮಗಿಸುವ ವಿದ್ಯುತ್ ದೀಪಗಳು ಅಂದ ಹೆಚ್ಚಿಸಿವೆ.207ನೇ ಜಾತ್ರೆ: ಗವಿಸಿದ್ಧೇಶ್ವರ ಜಾತ್ರೆ ಆರಂಭವಾಗಿ 207 ವರ್ಷ ಕಳೆಯಿತು. ಆರಂಭದಲ್ಲಿ ಪುಟ್ಟದಾಗಿ ಪ್ರಾರಂಭವಾದ ಜಾತ್ರೆ ಮತ್ತು ರಥೋತ್ಸವ ಇಂದು ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯಾಗುವಂತೆ ಬೆಳೆದು ನಿಂತಿದೆ. 1816ರಲ್ಲಿ 11ನೇ ಪೀಠಾಧಿಪತಿ ಗವಿಸಿದ್ಧೇಶ್ವರ ಶ್ರೀ ಜೀವಂತ ಸಮಾಧಿಯಾಗುತ್ತಾರೆ. ಇವರ ಪುಣ್ಯಸ್ಮರಣೆಯನ್ನೇ ಜಾತ್ರೆಯನ್ನಾಗಿ ಆಚರಣೆ ಮಾಡುತ್ತಾ ಬರಲಾಗುತ್ತದೆ. ಇದರ ಲೆಕ್ಕಚಾರದಲ್ಲಿ 2024ನೇ ವರ್ಷದ ರಥೋತ್ಸವ 207ನೇ ಜಾತ್ರಾ ಮಹೋತ್ಸವವಾಗಿದೆ.ಬೃಹತ್ ವೇದಿಕೆ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆಯುವ ಸಂಗೀತ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಕ್ಕೆ ನೈಸರ್ಗಿಕವಾಗಿಯೇ ಗುಡ್ಡದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.ಇನ್ನು ಗುಡ್ಡದ ಮೇಲೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡುವುದಿಲ್ಲ, ಬದಲಾಗಿ ಇಡೀ ಗುಡ್ಡದ ತುಂಬ ಲಕ್ಷ ಲಕ್ಷ ಜನರು ಕುಳಿತುಕೊಂಡೇ ಕಾರ್ಯಕ್ರಮ ನೋಡತ್ತಾರೆ.ಸುತ್ತೂರು ಶ್ರೀಗಳಿಂದ ಚಾಲನೆ: ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಶ್ರೀಗಳು ಗವಿಮಠಕ್ಕೆ ಆಗಮಿಸುತ್ತಿರುವುದು ವಿಶೇಷ.ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಡಾ.ಅಭಿನವ ಚನ್ನಬಸವ ಮಹಾಸ್ವಾಮಿಗಳು, ಚಿದಾನಂದ ಮಹಾಸ್ವಾಮಿಗಳು, ಪ್ಯಾರಿಸ್ ದೇಶದ ಭಾರತದ ಮಾಜಿ ರಾಯಭಾರಿ ಚಿರಂಜೀವಿ ಸಿಂಘ್, ಖ್ಯಾತ ಖಗೋಳ ವಿಜ್ಞಾನಿ ವೀರಮುತ್ತುವೇಲ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿ ಅನಂತಕುಮಾರ ಭಾಗವಹಿಸಲಿದ್ದಾರೆ.ಪಂ.ಬಸವಕುಮಾರ ಮರಡೂರ್, ಪಂ.ಕೃಷ್ಣೇಂದ್ರ ವಾಡೇಕರ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ರಾತ್ರಿ 9.30ಕ್ಕೆ ಲೇಸರ್ ಶೋ ನಡೆಯಲಿದೆ.ಬೆಳಗ್ಗೆ 11 ಪೊಲೀಸ್ ಶ್ವಾನದಳದ ಸಾಹಸ ಪ್ರದರ್ಶನ, ಭೂಮಿ ಕರಾಟೆ ಫೌಂಡೇಶನ್ ವತಿಯಿಂದ ಕರಾಟೆ ಪ್ರದರ್ಶನ ನಡೆಯಲಿದೆ.21 ದಿನ ಮಹಾದಾಸೋಹ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ವರ್ಷ ವಾರ ಮೊದಲೇ ಮಹಾದಾಸೋಹ ಆರಂಭಿಸಲಾಗಿದೆ. ಪ್ರತಿ ವರ್ಷ 15 ದಿನಗಳ ಕಾಲ ಇರುತ್ತಿತ್ತು. ಈ ವರ್ಷ 21 ದಿನಗಳ ಕಾಲ ನಡೆಯಲಿದೆ. ಮಹಾದಾಸೋಹದಲ್ಲಿ ಮೊದಲ ದಿನ ರೊಟ್ಟಿ, ಮಾದಲಿ, ಅನ್ನ ಸಾಂಬರ್, ಫಲ್ಯ, ಕೆಂಪುಚಟ್ನಿ, ಪುಡಿಚಟ್ನಿ ಇರಲಿದೆ.ರಥಬೀದಿಯುದ್ದಕ್ಕೂ ರಂಗೋಲಿ: ಗವಿಸಿದ್ಧೇಶ್ವರ ಮಹಾರಥೋತ್ಸವ ಸಾಗಿ ಬರುವ ರಥಬೀದಿಯುದ್ದಕ್ಕೂ ರಂಗೋಲಿ ಬಿಡಿಸಲಾಗಿದೆ. ಶ್ರೀಮಠದ ಭಕ್ತರು ಬೆಳಗ್ಗೆಯಿಂದ ಸಂಜೆಯವರೆಗೂ ರಥಬೀದಿಯುದ್ದಕ್ಕೂ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ರಥಬೀದಿಯ ಕಳೆಯನ್ನು ಹೆಚ್ಚಳ ಮಾಡಿದ್ದಾರೆ.