ಶೀಘ್ರ ಪಾಲಿಕೆ ವಾರ್ಡ್ ಸಮಿತಿ ರಚನೆ ಮಾಡಲಿ

| Published : Feb 12 2024, 01:32 AM IST

ಸಾರಾಂಶ

ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕವಾಗಿದ್ದು, ಹೀಗಾಗಿ ವಾರ್ಡ್ ಸಮಿತಿ ರಚನೆ ಅತ್ಯಗತ್ಯವಾಗಿದೆ. ಕೂಡಲೇ ಪಾಲಿಕೆ ವಾರ್ಡ್ ಸಮಿತಿ ರಚನೆ ಮಾಡಬೇಕು ಎಂದು ನ್ಯಾಯವಾದಿ ದಾನೇಶ ಅವಟಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕವಾಗಿದ್ದು, ಹೀಗಾಗಿ ವಾರ್ಡ್ ಸಮಿತಿ ರಚನೆ ಅತ್ಯಗತ್ಯವಾಗಿದೆ. ಕೂಡಲೇ ಪಾಲಿಕೆ ವಾರ್ಡ್‌ ಸಮಿತಿ ರಚನೆ ಮಾಡಬೇಕು ಎಂದು ನ್ಯಾಯವಾದಿ ದಾನೇಶ ಅವಟಿ ಒತ್ತಾಯಿಸಿದರು.

ನಗರದಲ್ಲಿ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಆಡಳಿತದಲ್ಲಿ ಸಮುದಾಯದ ಜನರು, ಸಂಘ ಸಂಸ್ಥೆಗಳಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವ ಅಗತ್ಯವಿದೆ. ಆಡಳಿತದಲ್ಲಿ ಗುಣಾತ್ಮಕ ಬದಲಾವಣೆ, ಪಾರದರ್ಶಕತೆ, ಕಾಲಮಿತಿಯಲ್ಲಿ ಯೋಜನೆಗಳು ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಾರ್ಡ್ ಸಮಿತಿ ರಚನೆ ಅತ್ಯವಶ್ಯವಾಗಿದೆ ಎಂದರು.

ಈ ಕುರಿತು 74ನೇ ಸಂವಿಧಾನಿಕ ತಿದ್ದುಪಡಿ ಕಾಯ್ದೆ ಸಿಎಎ 1994 ಅಧಿಕಾರಗಳು ಮತ್ತು ಅಧಿಕಾರಗಳ ವಿಕೇಂದ್ರಿಕರಣಕ್ಕೆ ಮೂಲಭೂತ ಚೌಕಟ್ಟನ್ನು ಒದಗಿಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ. ಕಲಂ 24, 35ರ ಪ್ರಕಾರ 3 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪುರಸಭೆ, ಮಹಾನಗರ ಸಭೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಖಚಿತ ಪಡಿಸುತ್ತದೆ. ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್ 1964 ಮತ್ತು ಕೆಎಮ್ ಸಿ ಆಕ್ಟ್ 1976ರ ಸೆಕ್ಷನ್ 13ವಾರ್ಡ್ ಸಮಿತಿಗಳ ರಚನೆಯನ್ನು ಕಡ್ಡಾಯಗೊಳಿಸುತ್ತದೆ. ಆದ್ದರಿಂದ ವಿಜಯಪುರದ ಮಹಾನಗರದ ಪ್ರತಿಯೊಂದು ವಾರ್ಡಿನಲ್ಲಿ ವಾರ್ಡ್ ಸಮಿತಿಯ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಸಕ್ತ ನಾಗರಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಉತ್ತಮ ಕಾರ್ಯಕ್ಕೆ ಕೈ ಜೋಡಿಸಿ ಬಡಾವಣೆಯ ಅಭಿವೃದ್ಧಿಗಾಗಿ ಮಹಾನಗರದ ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಈರಕಲ್ ಮಾತನಾಡಿ, ವಾರ್ಡ್ ಸಮಿತಿ ಬಳಗ ಕಾನೂನು ಬದ್ಧ ಹೊಸ ಪರಿಕಲ್ಪನೆಯಾಗಿದೆ. ಇದರ ಅರಿವು ಮೂಡಿಸುವ ಕಾರ್ಯ ಮತ್ತು ಸದುಪಯೋಗದ ಕುರಿತು ತಿಳಿವಳಿಕೆ ಅತ್ಯಗತ್ಯ. ಜನ ಪ್ರತನಿಧಿಗಳ ಹಾಗೂ ಅಧಿಕಾರಿಗಳ ಜೊತೆ ಜನತೆ ಕೈ ಜೋಡಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಯುವ ಮುಖಂಡ ವಿಜಯಕುಮಾರ್ ಕಲ್ಲೂರ, ಹಿರಿಯ ನಾಗರಿಕರಾದ ನಾರಾಯಣ ಸಂಸ್ಥಾನಿಕ, ನ್ಯಾಯವಾದಿ ಶಿವಕುಮಾರ ಪೂಜಾರಿ, ಯುವ ಧುರೀಣ ಸಿದ್ದು ಅವಟಿ, ಪರಿಸರ ಪ್ರೇಮಿ ಮಾಳಪ್ಪ ಹಾಲಕ್ಕನವರ, ಡಾ.ಬಸವರಾಜ್ ಜಂಬಗಿ, ಕಲ್ಲಪ್ಪ ಶಿವಶರಣ ಭಾಗವಹಿಸಿದ್ದರು.