ಛಲವಾದಿ ಸಮಾಜ ಒಗ್ಗಟ್ಟಿನಿಂದ ಸರ್ಕಾರದ ಸೌಲಭ್ಯ ಪಡೆಯಲಿ: ಶಾಸಕ ಅಬ್ಬಯ್ಯ

| Published : Sep 08 2025, 01:01 AM IST

ಛಲವಾದಿ ಸಮಾಜ ಒಗ್ಗಟ್ಟಿನಿಂದ ಸರ್ಕಾರದ ಸೌಲಭ್ಯ ಪಡೆಯಲಿ: ಶಾಸಕ ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಛಲವಾದಿ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕು. ಸರ್ಕಾರದ ಸೌಲಭ್ಯ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಛಲವಾದಿ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕು. ಸರ್ಕಾರದ ಸೌಲಭ್ಯ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮಾಜ ಇನ್ನೂ ಆರ್ಥಿಕ, ಸಾಮಾಜಿಕ ಸುಧಾರಣೆಯೊಂದಿಗೆ ರಾಜಕೀಯವಾಗಿ ಬೆಳೆಯಬೇಕಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಛಲವಾದಿ ಸಮಾಜದ ರಾಜ್ಯ ಮಟ್ಟದ ಚಿಂತನ-ಮಂಥನ ಸಭೆ ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ರತ್ನ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯವನ್ನು ನಾವೆಲ್ಲರೂ ಪರಿಪಾಲಿಸಬೇಕು. ಸಮಾನತೆಯನ್ನು ನಾವೆಲ್ಲರೂ ಸಾರಬೇಕು. ಹಾಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಹೋದರ ಸಮುದಾಯಗಳ ಜೊತೆಗೆ ನಾವು ಸಾಮರಸ್ಯದಿಂದ ಬಾಳಬೇಕು. ಜೊತೆಗೆ ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ಕೈಜೋಡಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಪರಿಶಿಷ್ಟ ಜಾತಿಗಳಿಗೆ ಸರ್ಕಾರ ಸೌಲಭ್ಯ ನೀಡಿದೆ. ಶಿಕ್ಷಣ ಪಡೆದುಕೊಂಡು ಛಲವಾದಿ ಸಮಾಜದವರು ತಮ್ಮ ಹಕ್ಕು ಪಡೆದುಕೊಳ್ಳಬೇಕು. ಇದಕ್ಕಾಗಿ ಸಮಾಜದಲ್ಲಿ ಜಾಗ್ರತೆ ಮೂಡಿಸಬೇಕು. ಇದಕ್ಕಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ, ಕುಡುಚಿ ಶಾಸಕ ಮಹೇಂದ್ರ ತಮ್ಮಣ್ಣನವರ, ಮಾಜಿ ಶಾಸಕ ನೆಹರು ಓಲೆಕಾರ್, ಚಿತ್ರದುರ್ಗದ ಛಲವಾದಿ ಗುರುಪೀಠದ ನಾಗಾರ್ಜುನ ಸ್ವಾಮೀಜಿ, ಗೋ ಗಾಡು ಬಂತೇಜಿ, ಬಳ್ಳಾರಿಯ ಬಂತೇಜಿ, ನಿವೃತ್ತ ಎಸ್ಪಿ ಅರವಿಂದರ ಗಟ್ಟಿ, ನಿವೃತ್ತ ಜಿಲ್ಲಾಧಿಕಾರಿ ಸಾವಕ್ಕನವರ, ಉಪನ್ಯಾಸಕಿ ಮಲ್ಲಮ್ಮ ಹೆಟ್ಕಲ್, ಮುಖಂಡರಾದ ಬಣ್ಣದ ಮನೆ ಸೋಮಶೇಖರ, ಚಿನ್ನಸ್ವಾಮಿ ಸೋಸಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಛಲವಾದಿ ಸಂಘದ ಪದಾಧಿಕಾರಿಗಳು ಚಿಂತನ-ಮಂಥನ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಚರ್ಚಿತ ಪ್ರಮುಖ ವಿಷಯಗಳು:

ಇಡೀ ಸಭೆ ಆಂತರಿಕವಾಗಿ ನಡೆದಿದ್ದು, ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು ಕನ್ನಡಪ್ರಭಕ್ಕೆ ಲಭ್ಯವಾಗಿವೆ.

ಒಳಮೀಸಲಾತಿ ಜಾರಿಯಾದ ನಂತರ ಕೂಡ ಮೀಸಲಾತಿಯ ರೋಸ್ಟರ್ ಬಿಂದುವಿನಲ್ಲಿ ಛಲವಾದಿ ಸಮುದಾಯಕ್ಕೆ ಅನ್ಯಾಯವಾಗಿದೆ. ಎ ಪ್ರವರ್ಗದಲ್ಲಿ ಇರಬೇಕಾದವರು ಬಿಯಲ್ಲಿ ಪ್ರವರ್ಗದಲ್ಲಿ ಇದ್ದೇವೆ. ಅದರ ವಿರುದ್ಧ ಹೋರಾಟ ಕೈಗೊಳ್ಳಬೇಕು ಎಂದು ಚರ್ಚಿಸಲಾಯಿತು.

ಭೂಮಿ ಸಮೀಕ್ಷೆಯನ್ನು ನಡೆಸಿ, ಸರ್ಕಾರಿ ಗೋಮಾಳ ಭೂಮಿ ಯಾವ ಯಾವ ಹಳ್ಳಿಗಳಲ್ಲಿದೆಯೋ ಅದನ್ನು ಭೂ ವಂಚಿತ ಸಮುದಾಯಗಳಿಗೆ ವಿತರಿಸಬೇಕು. ಛಲವಾದಿಗಳಿಗೆ ಒಂದು ಕಡೆ ಮೀಸಲಾತಿ ಕೊಟ್ಟು, ಮತ್ತೊಂದು ಕಡೆ ಕಿತ್ತುಕೊಳ್ಳಲಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಅಂಬೇಡ್ಕರ್ ನಿಗಮದಲ್ಲಿ ಉದ್ಯಮ ಸೌಲ್ಯಭಗಳನ್ನು ಪೂರ್ಣಪ್ರಮಾಣದಲ್ಲಿ ದೊರೆಯುವಂತೆ ನಿರ್ಣಯ ಕೈಗೊಳ್ಳಲಾಯಿತು.