ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ಕುರಿ ಮೇಯ್ದಷ್ಟು ಕಟುಕನಿಗೆ ಲಾಭ ಎನ್ನುವಂತೆ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದಷ್ಟು ಆಂಧ್ರಕ್ಕೆ ಲಾಭ. ಈ ಕಾರಣಕ್ಕಾಗಿಯೇ ಪರ್ಯಾಯ ಯೋಜನೆಗಳಿಗೆ ಆಂಧ್ರ ಅಸಹಕಾರ ನೀಡುತ್ತಾ, ಅಡ್ಡಿ ಮಾಡುತ್ತಿದೆ. ಪರಿಣಾಮ ಕಳೆದ 50 ವರ್ಷಗಳಿಂದ ರಾಜ್ಯದ ಹಕ್ಕಿನ ನೀರು ಬಳಕೆಯಾಗದೆ ಆಂಧ್ರ ಸೇರುತ್ತಿದೆ.ಹೌದು, ತುಂಗಭದ್ರಾ ಜಲಾಶಯ ಹೂಳು ತುಂಬುತ್ತದೆ ಎನ್ನುವ ಕಾರಣಕ್ಕಾಗಿಯೇ ಕಳೆದ 50 ವರ್ಷಗಳಿಂದಲೂ ಆಂಧ್ರಪ್ರದೇಶ ತುಂಗಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಒಂದಿಲ್ಲೊಂದು ಕಾರಣ ಮುಂದೆ ಮಾಡಿ, ಅಡ್ಡಿ ಮಾಡುತ್ತಲೇ ಬಂದಿದೆ. ಹೀಗಾಗಿ, ರಾಜ್ಯದ ಸಮಾನಾಂತರ ಜಲಾಶಯಗಳು ಮೇಲೇಳುತ್ತಲೇ ಇಲ್ಲ.
ಈಗ ತುಂಗಭದ್ರಾ ಜಲಾಶಯದಲ್ಲಿ ಬರೋಬ್ಬರಿ 28 ಟಿಎಂಸಿ ಹೂಳು ತುಂಬಿದ್ದು, ಇದರಿಂದ ರಾಜ್ಯದ ರೈತರಿಗೆ ನೀರಿನ ಅಭಾವ ಎದುರಾಗುತ್ತದೆ. ಇದನ್ನು ತಪ್ಪಿಸಲು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಡಿಪಿಆರ್ ಸಹ ಮಾಡಿ ಬಜೆಟ್‌ನಲ್ಲಿ ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದೆ. ಆದರೆ, ಇದನ್ನು ಕಾರ್ಯಗತ ಮಾಡಲು ಆಂಧ್ರ ಸರ್ಕಾರದ ಸಹಕಾರವೂ ಅಗತ್ಯ. ಆ ಸರ್ಕಾರ ಆರಾಂಭದಿಂದಲೂ ಇದಕ್ಕೆ ಅಡ್ಡಿ ಮಾಡುತ್ತಲೇ ಇದೆ.ರಾಜ್ಯ ಸರ್ಕಾರ ಕಳೆದ ಏಳೆಂಟು ವರ್ಷಗಳಿಂದ ಆಂಧ್ರ ಸಿಎಂಗೆ ಈ ಕುರಿತು ಚರ್ಚೆ ಮಾಡಲು ಹಲವಾರು ಬಾರಿ ಪತ್ರದ ಮೂಲಕ ಸಮಯ ಕೇಳಿದರೂ ಸಹ ನೀಡುತ್ತಿಲ್ಲ. ಕನಿಷ್ಠ ಇದಕ್ಕೆ ಪ್ರತಿಯಾಗಿ ಪತ್ರವನ್ನಾದರೂ ಬರೆದು ತನ್ನ ನಿಲುವು ಸ್ಪಷ್ಟಪಡಿಸುತ್ತಿಲ್ಲ. ಪರಿಣಾಮ ರಾಜ್ಯದ ಪಾಲಿನ ತುಂಗಭದ್ರಾ ನದಿಯಲ್ಲಿ ಹರಿಯುವ ನೀರು ಬಳಕೆ ಮಾಡಿಕೊಳ್ಳುವ ರಾಜ್ಯದ ಕನಸು ನನಸಾಗುತ್ತಿಲ್ಲ.
ಪ್ರತಿ ವರ್ಷ ನೂರು ಟಿಎಂಸಿ ಪೋಲು:ತುಂಗಭದ್ರಾ ಜಲಾಶಯ ಭರ್ತಿಯಾಗಿ ಪ್ರತಿ ವರ್ಷ 100-150 ಟಿಎಂಸಿ ನೀರು ನದಿಯ ಮೂಲಕ ಹರಿದು ಹೋಗುತ್ತದೆ. ಇದರಲ್ಲಿ ಒಂದಷ್ಟು ನೀರನ್ನು ಆಂಧ್ರ ಸರ್ಕಾರ ತಾನು ನಿರ್ಮಿಸಿಕೊಂಡಿರುವ 16 ಸಮಾನಾಂತರ ಜಲಾಶಯಗಳ ಮೂಲಕ ಬಳಕೆ ಮಾಡಿಕೊಳ್ಳುತ್ತದೆ.ತುಂಗಭದ್ರಾ ಜಲಾಶಯ ಭರ್ತಿಯಾಗಿ ಹರಿದು ಹೋಗುವ ನೀರು ನೇರವಾಗಿ ಆಂಧ್ರ ಮೂಲಕ ಸಮುದ್ರಕ್ಕೆ ಹೋಗುತ್ತದೆ. ಹೀಗೆ ಹೋಗುವ ಮುನ್ನ ಅದನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಆಂಧ್ರ ಸರ್ಕಾರ ಕಳೆದ 50 ವರ್ಷಗಳ ಹಿಂದೆಯೇ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿಕೊಂಡಿದೆ. ಹೀಗಾಗಿ ಆಂಧ್ರ ಸರ್ಕಾರ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದಷ್ಟು ನಮಗೆ ಲಾಭವಾಗುತ್ತದೆ ಎಂದು ನವಲಿ ಬಳಿ ಸಮಾನಾಂತರ ಜಲಾಶಯ ಸೇರಿದಂತೆ ತುಂಗಭದ್ರಾ ನದಿಗೆ ಅಲ್ಲಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಯೋಜನೆಗಳಿಗೆ ಸದಾ ವಿರೋಧ ಮಾಡುತ್ತಲೇ ಬಂದಿದೆ ಎನ್ನುವುದು ಸ್ಪಷ್ಟ.
ತುಂಗಭದ್ರಾ ನದಿ ನೀರಿನ ಹಂಚಿಕೆಯಲ್ಲಿ ಬಚಾವತ್ ತೀರ್ಪಿನ ಬಿ ಸ್ಕೀಮ್ ಯೋಜನೆಯಲ್ಲಿ ಘೋಷಣೆಯಾಗಿದ್ದ ನೀರಿನ ಪಾಲನ್ನೇ ರಾಜ್ಯ ಬಳಕೆ ಮಾಡಿಕೊಳ್ಳಲು ಆಗಿಲ್ಲ. ಅಂತಿಮ ತೀರ್ಪಿನಲ್ಲಿ 40 ಟಿಎಂಸಿ ಮತ್ತೆ ಹಂಚಿಕೆಯಾಗಿದ್ದು, ಅದನ್ನು ಬಳಕೆ ಮಾಡಿಕೊಳ್ಳವುದಕ್ಕೂ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಇದಕ್ಕೆಲ್ಲ ಆಂಧ್ರ ಮತ್ತು ತೆಲಂಗಾಣ ಅಡ್ಡಿಯಾಗಿವೆ.ಈ ಕುರಿತು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ದೇಶನ ನೀಡುವಂತೆ ಆಗಬೇಕು. ಆದರೆ ಈ ದಿಸೆಯಲ್ಲಿ ಪ್ರಯತ್ನ ನಡೆಯುತ್ತಿಲ್ಲ ಎನ್ನುವುದು ಮಾತ್ರ ದುರದೃಷ್ಠಕರ.
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದಕ್ಕೆ ಪರ್ಯಾಯವಾಗಿ ಆ ನೀರು ಬಳಕೆ ಮಾಡಿಕೊಳ್ಳುವ ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಚರ್ಚೆಗೂ ಆಂಧ್ರ ಸರ್ಕಾರ ಸಮಯ ನೀಡುತ್ತಿಲ್ಲ. ಅನೇಕ ಬಾರಿ ಪತ್ರ ವ್ಯವಹಾರ ಮಾಡಿದರೂ ಸಕಾರಾತ್ಮಕವಾಗಿ ಪ್ರತಿಕ್ರಿಯೇ ಬಂದಿಲ್ಲ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.