ಧಾರ್ಮಿಕ ಸೇವೆ ಅವಕಾಶ ಭಕ್ತರು ಬಳಸಿಕೊಳ್ಳಲಿ

| Published : Dec 24 2023, 01:45 AM IST

ಸಾರಾಂಶ

ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಫೆ.2ರಿಂದ ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ. ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುವ ಅವಕಾಶ ಭಕ್ತರಿಗೆ ಒದಗಿದ್ದು, ತಪ್ಪದೇ ಸದುಪಯೋಗ ಮಾಡಿಕೊಳ್ಳಲು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ತಾಲೂಕಿನ ಕಡೆನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಕ್ರಿಯಾ ಕರ್ತೃತ್ವ ಶಕ್ತಿಯಿಂದಾಗಿ ಶೂನ್ಯವಾಗಿದ್ದ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮ ಸತತ ಧಾರ್ಮಿಕ ಕ್ರಿಯೆಗಳಿಂದಾಗಿ ಇದೀಗ ಜಾಗೃತ ಸ್ಥಳವಾಗಿ ಬೆಳೆದು ಎಲ್ಲರ ಗಮನ ಸೆಳೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.

ತಾಲೂಕಿನ ಕಡೆನಂದಿಹಳ್ಳಿ ಶ್ರೀ ಮಳೆಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ಫೆ.2ರಿಂದ 13 ರವರೆಗೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಥಮ ಪ್ರಕಟಣೆ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅವರ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಶಿವಾನುಷ್ಠಾನ ಧ್ಯಾನ ಮಂದಿರ ಶಿಲಾ ಮಂಟಪ, ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ, ಮಹಾಮಸ್ತಕಾಭಿಷೇಕ, ಶ್ರೀ ಜಗದ್ಗುರು ರೇಣುಕಾಚಾರ್ಯ ಪುರಾಣ ಪ್ರವಚನ, ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಧಾರ್ಮಿಕ ಸಮಾರಂಭಗಳನ್ನು ಫೆಬ್ರವರಿ 2ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ. ಇದು ಹೆಮ್ಮೆಯ ಸಂಗತಿ. ವಿವಿಧ ಸೇವೆಗಳ ಅವಕಾಶ ಕಲ್ಪಿಸಲಾಗಿದ್ದು, ಸರ್ವ ಭಕ್ತರೂ ತನು ಮನ ಧನ ಸಹಾಯ ಮೂಲಕ ಕಾರ್ಯಕ್ರಮ ಯಶಸ್ವಿಗೆ ಮನವಿ ಮಾಡಿದರು.

ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಅವರು ವಾಲ್ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಜನಸಾಮಾನ್ಯರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವಲ್ಲಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನಿರಂತರ ಶ್ರಮಿಸುತ್ತಿರುವುದು ಭಕ್ತರ ಸೌಭಾಗ್ಯ ಎಂದರು.

ದುಗ್ಲಿ ಕಡೆನಂದಿಹಳ್ಳಿ ಕ್ಷೇತ್ರದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ಮಠ ಹಮ್ಮಿಕೊಳ್ಳುವ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೂ ಭಕ್ತರ ಸಹಕಾರ ನಿರಂತರವಾಗಿರಬೇಕು ಎಂದರು.

ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಸಿಂಧನೂರು- ಕನ್ನೂರು ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಚನ್ನೇಶ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಗಣ್ಯರು ಇದ್ದರು.

- - - -22ಕೆಎಸ್‌ಕೆಪಿ2:

ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಧಾರ್ಮಿಕ ಕಾರ್ಯಕ್ರಮದ ಪ್ರಥಮ ಪ್ರಕಟಣೆ ಪತ್ರಿಕೆಯನ್ನು ಶುಕ್ರವಾರ ಸಂಸದ ರಾಘವೇಂದ್ರ ಬಿಡುಗಡೆಗೊಳಿಸಿದರು.