ಉತ್ತರ ಕನ್ನಡ ಅಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಉನ್ನತ ಶಿಕ್ಷಣ, ಆಧುನಿಕ ಸಂಪರ್ಕ ಕ್ಷೇತ್ರದಲ್ಲಿ ಹಿಂದುಳಿದಿದೆ. ಉನ್ನತ ಚಿಕಿತ್ಸೆ ಬೇಕೆಂದರೆ ಬೇರೆ ಜಿಲ್ಲೆಗೆ ಹೋಗಬೇಕು.

ಉನ್ನತ ಶಿಕ್ಷಣ ಬೇಕೆಂದರೆ ಹೊರ ಜಿಲ್ಲೆಗಳೇ ಗತಿ । ಡೋಲಾಯಮಾನ ಸ್ಥಿತಿಯಲ್ಲಿರುವ ಅರಣ್ಯ ಭೂಮಿ ಅತಿಕ್ರಮಣದಾರರು

(ಮುನ್ನೋಟ 2026)ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡ ಅಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಉನ್ನತ ಶಿಕ್ಷಣ, ಆಧುನಿಕ ಸಂಪರ್ಕ ಕ್ಷೇತ್ರದಲ್ಲಿ ಹಿಂದುಳಿದಿದೆ. ಉನ್ನತ ಚಿಕಿತ್ಸೆ ಬೇಕೆಂದರೆ ಬೇರೆ ಜಿಲ್ಲೆಗೆ ಹೋಗಬೇಕು. ಉನ್ನತ ಶಿಕ್ಷಣ ಬೇಕೆಂದರೆ ಹೊರ ಜಿಲ್ಲೆಗಳೇ ಗತಿ. ದುಡಿಯುವ ಕೈಗಳಿಗೆ ಕೊರತೆ ಇಲ್ಲದಿದ್ದರೂ ಉದ್ಯೋಗ ಜಿಲ್ಲೆಯಲ್ಲಿ ಸಿಗುತ್ತಿಲ್ಲ. ಅರಣ್ಯ ಭೂಮಿ ಅತಿಕ್ರಮಣದಾರರು ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಇಂತಹ ಸಮಸ್ಯೆಗಳಿಗೆಲ್ಲ 2026 ಪರಿಹಾರ ಒದಗಿಸಲಿ ಎಂಬ ಆಶಯ ಜಿಲ್ಲೆಯ ಜನತೆಯದ್ದಾಗಿದೆ.

ಜಿಲ್ಲೆಯ ಜನರ ಆರೋಗ್ಯ ರಕ್ಷಣೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದು ಜನತೆಯ ಬಹುಕಾಲದ ಕನಸು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಅಪಘಾತ, ಹೃದಯಾಘಾತ ಅಥವಾ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಜನತೆ ದೂರದ ಗೋವಾ, ಮಂಗಳೂರು, ಮಣಿಪಾಲ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಆಸ್ಪತ್ರೆಗಳಿಗೆ ರೋಗಿ, ಗಾಯಾಳುಗಳನ್ನು ಕರೆದೊಯ್ಯಬೇಕು. ಆದರೆ ಅಷ್ಟು ದೂರ ಕ್ರಮಿಸುವುದರೊಳಗೆ ರೋಗಿಗಳ ಪ್ರಾಣಪಕ್ಷಿ ಹಾರಿಹೋದ ಉದಾಹರಣೆಗಳು ಸಾಕಷ್ಟಿವೆ. ಬಿಜೆಪಿ ಸರ್ಕಾರ ಇದ್ದಾಗ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿತ್ತು. ಬಜೆಟ್ ನಲ್ಲೂ ಘೋಷಣೆಯಾಗಿತ್ತು. ನಂತರ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಎಲ್ಲ ನನೆಗುದಿಗೆ ಬಿತ್ತು. 2025ರಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ನಡೆಯದೆ ಜನತೆ ನಿರಾಶರಾಗುವಂತಾಗಿದೆ. ಕಾಂಗ್ರೆಸ್ ಸರ್ಕಾರ 3 ವರ್ಷಗಳ ಕಾಲ ವಿಳಂಬ ಮಾಡಿದ್ದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. 2026ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮಂಜೂರಾಗಿ ನಿರ್ಮಾಣ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಬೇಕು ಎನ್ನುವುದು ಜಿಲ್ಲೆಯ ಜನತೆಯ ಹಕ್ಕೊತ್ತಾಯವಾಗಿದೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಜನತೆಯ ಬಹುಕಾಲದ ಬೇಡಿಕೆಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಈ ಮಾರ್ಗಕ್ಕೆ ಚಾಲನೆ ದೊರೆಯಿತು. ನಂತರ ಪರಿಸರದ ಕಾರಣಗಳಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಶುರುವಾಯಿತು. ಈಗ ಬಹುತೇಕ ಅಡೆತಡೆಗಳು ಬಗೆಹರಿದಿದ್ದು ಈ ರೈಲ್ವೆ ಮಾರ್ಗಕ್ಕೆ 2026ರಲ್ಲಿ ಹಸಿರು ನಿಶಾನೆ ದೊರೆಯಲಿದೆ ಎಂಬ ನಿರೀಕ್ಷೆ ಉಂಟಾಗಿದೆ. ಹೊಸ ವರ್ಷದಲ್ಲಿ ಎಲ್ಲ ಕಾನೂನು ತೊಡಕುನಿವಾರಣೆಯಾಗಿ ಈ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಚಾಲನೆ ದೊರೆಯಲಿ ಎನ್ನುವುದು ಜನತೆಯ ಆಶಯವಾಗಿದೆ.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಬರ ಇಲ್ಲ. ಧಾರ್ಮಿಕ, ನೈಸರ್ಗಿಕ, ಮಾನವ ನಿರ್ಮಿತ ಹೀಗೆ ವಿವಿಧ ಪ್ರವಾಸಿ ತಾಣಗಳಿವೆ. ಆದರೆ ಈ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಕಾರ್ಯ ಇದುವರೆಗೂ ಆಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದಲ್ಲಿ ಉದ್ಯೋಗಾವಕಾಶ, ಆರ್ಥಿಕ ಚಟುವಟಿಕೆಗಳು ಹೆಚ್ಚಲಿವೆ. ಆದರೆ ಇದಾವುದಕ್ಕೂ ಗಂಭೀರ ಪ್ರಯತ್ನ ನಡೆದಿಲ್ಲ. ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ಸಮಗ್ರ ಯೋಜನೆ ರೂಪುಗೊಳ್ಳಬೇಕಾಗಿದೆ. ಹೊಸ ಪ್ರವಾಸೋದ್ಯಮ ನೀತಿಗಾಗಿ ಮಂಗಳೂರಿನಲ್ಲಿ ಜ.10 ರಂದು ಸಭೆ ನಡೆಸುವುದಾಗಿ ಸರ್ಕಾರ ಪ್ರಕಟಿಸಿದೆ. ಇದು ಹೊಸ ಭರವಸೆ ಮೂಡಿಸಿದೆ.

ಜಿಲ್ಲೆಯ ಯುವ ಜನತೆ ಉದ್ಯೋಗಕ್ಕಾಗಿ ಮುಂಬಯಿ, ಬೆಂಗಳೂರು, ಗೋವಾ ಮತ್ತಿತರ ಕಡೆ ಅಲೆದಾಡುತ್ತಿದ್ದಾರೆ. ನಮ್ಮಲ್ಲಿಯ ಯುವ ಪ್ರತಿಭೆಯನ್ನು ಉಳಿಸಿಕೊಳ್ಳಬೇಕಾಗಿದೆ. ಯುವ ಜನತೆಯ ಕೈಗಳಿಗೆ ಉದ್ಯೋಗ ನೀಡುವ ಕೈಗಾರಿಕೆಗಳು ಬರಬೇಕಾಗಿದೆ. ಜಿಲ್ಲೆಯ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸುವ ಅಗತ್ಯತೆ ಇದೆ.

ಅರಣ್ಯ ಭೂಮಿ ಅತಿಕ್ರಮಣದಾರರು ಬಹುಕಾಲದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅತಿಕ್ರಮಣ ಸಕ್ರಮಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಪಟ್ಟಾ ನೀಡಿ ಇವರ ಹಿತರಕ್ಷಣೆಯ ಕೆಲಸ ಆಗಬೇಕಾಗಿದೆ.

ಜಿಲ್ಲೆಯಲ್ಲಿ ಉನ್ನತ, ಆಧುನಿಕ ಶಿಕ್ಷಣಕ್ಕೆ ಅವಕಾಶ ಇಲ್ಲ. ಶಿಕ್ಷಣಕ್ಕಾಗಿಯೂ ನಮ್ಮಯುವ ಜನತೆ ಬೇರೆ ಬೇರೆ ಕಡೆ ಹೋಗಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿಯೇ ಉನ್ನತ, ಆಧುನಿಕ ಶಿಕ್ಷಣ ಸಂಸ್ಥೆಗಳು ಆಗಬೇಕು.

ಅಂಕೋಲಾದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಶುರುವಾಗಬೇಕಿದೆ. ನಿರಾಶ್ರಿತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಬೇಕಾಗಿದೆ.

ಕೃಷಿ, ತೋಟಗಾರಿಕೆ, ಮೀನುಗಾರಿಕೆಯನ್ನು ಜಿಲ್ಲೆಯ ಬಹುಪಾಲು ಜನತೆ ಅವಲಂಬಿಸಿದ್ದಾರೆ. ಅಡಕೆ ಮರಗಳಿಗೆ ಎಲೆಚುಕ್ಕಿ ರೋಗದಿಂದ ಕೃಷಿಕರು ಕಂಗೆಟ್ಟಿದ್ದಾರೆ. ಹಾಗಾಗಿ ಈ ಕ್ಷೇತ್ರಗಳಿಗೆ ವಿಶೇಷ ಯೋಜನೆ ರೂಪಿಸಿ ಅನ್ನದಾತರು, ಕೃಷಿಕರು, ಮೀನುಗಾರರ ಅಭಿವೃದ್ಧಿಗೆ ಕೊಡುಗೆ ನೀಡಬೇಕಾಗಿದೆ.