ಸಾರಾಂಶ
ಮಕ್ಕಳ ಜೊತೆಗಿದ್ದಾಗ ಮಕ್ಕಳಂತಿರುವ ದೊಡ್ಡ ಗುಣವನ್ನು ಬೆಳೆಸಿಕೊಳ್ಳಬೇಕು.
ಹೊಸಪೇಟೆ: ಹಿರಿಯ ನಾಗರಿಕರು ಮಕ್ಕಳು ಮತ್ತು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳಿಗೆ ಹಿರಿಯರೇ ಅತ್ಯುತ್ತಮ ಮಾರ್ಗದರ್ಶಕರು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ತ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಿರಿಯರಾದವರು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಜೊತೆಗಿದ್ದಾಗ ಮಕ್ಕಳಂತಿರುವ ದೊಡ್ಡ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಮಕ್ಕಳಿರಲಿ, ಮೊಮ್ಮಕ್ಕಳಿರಲಿ ಯಾರಾದರೂ ಸಿಡಿಮಿಡಿಗೊಂಡಾಗ ಆ ವೇಳೆ ಹಿರಿಯರು ಮೌನ ವಹಿಸಬೇಕು. ಮಾತಿಗೆ ಮಾತು ಬೆಳೆಸಬಾರದು. ಶಾಂತರಾಗಿದ್ದು, ವಾತಾವರಣ ತಿಳಿಯಾದಾಗ ಕಿರಿಯರಿಗೆ ತಿಳಿ ಹೇಳಬೇಕು. ಕುಟುಂಬ ನಡೆಸುವ ಮಹತ್ವದ ಜವಾಬ್ದಾರಿಯ ಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಬೇಕು. ಏನಾದರೂ ಅವಘಡಗಳಾದಾಗ ಅದನ್ನು ಎದುರಿಸಿ ಬಾಳಲು ಅವರಿಗೆ ಧೈರ್ಯ ಹೇಳಬೇಕು ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಈ ಹಿಂದೆ ಹಿರಿಯ ನಾಗರಿಕರು ಬಹುತೇಕ ತಮ್ಮ ಸಮಯವನ್ನು ಮನೆಯಲ್ಲಿ ಮಕ್ಕಳ ಜೊತೆಗೆ ಕಳೆಯುತ್ತಿದ್ದರು. ಈಗ ಈ ವಾತಾವರಣ ಕಾಣುತ್ತಿಲ್ಲ. ಹಿರಿಯರಾದವರು ಆಸ್ತಿ, ಹಣದ ಬೆನ್ನು ಹತ್ತಿ ಹೋಗಬಾರದು. ಭ್ರಮೆಗಳಿಂದ ಹೊರಬರಬೇಕು. ಚಿಂತೆಗಳನ್ನು ಕೈಬಿಡಬೇಕು ಎಂದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಹಿರಿಯ ನಾಗರಿಕರಿಗೆ ಪುರುಷರ ವಿಭಾಗದಲ್ಲಿ ನಡಿಗೆ ಸ್ಪರ್ಧೆ, ಮಹಿಳೆಯರಿಗೆ ಮ್ಯೂಜಿಕಲ್ ಚೇರ್, ಪುರುಷ ಹಾಗೂ ಮಹಿಳೆಯರಿಗೆ ಗಾಯನ ಮತ್ತು ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಅವಿನಾಶ ಎಸ್. ಗೋಟಖಂಡಿ, ಹರಪನಹಳ್ಳಿಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ಹೊಸಪೇಟೆ ನಿವೃತ್ತ ನೌಕರ ಸಂಘದ ಅಧ್ಯಕ್ಷ ರಾಮಪ್ಪ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))