ಅರ್ಹ ಫಲಾನುಭವಿಗಳು ಸಾಮಾಜಿಕ ಭದ್ರತೆ ಯೋಜನೆಯಿಂದ ವಂಚಿತರಾಗದಿರಲಿ

| Published : Oct 28 2025, 12:03 AM IST

ಅರ್ಹ ಫಲಾನುಭವಿಗಳು ಸಾಮಾಜಿಕ ಭದ್ರತೆ ಯೋಜನೆಯಿಂದ ವಂಚಿತರಾಗದಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ತಾಲೂಕಿನ ಶ್ರೀರಾಂಪುರ ನಾಡಕಚೇರಿ ಆವರಣದಲ್ಲಿ ಸೋಮವಾರ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ನೀಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸರ್ಕಾರದ ಸಾಮಾಜಿಕ ಭದ್ರತೆಯ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಹೇಳಿದರು.

ತಾಲೂಕಿನ ಶ್ರೀರಾಂಪುರದ ನಾಡಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ ತಾಲೂಕು ಆಡಳಿತ ಹಾಗೂ ನಾಡಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀರಾಂಪುರ ಹೋಬಳಿಯಲ್ಲಿ ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳ ಮೂಲಕ 10,740 ಅರ್ಹ ಫಲಾನುಭವಿಗಳು ಒಟ್ಟು 1,13,33,200 ರು. ಹಣವನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಇದಲ್ಲದೆ ಯಾವುದೇ ಅರ್ಹ ಫಲಾನುಭವಿಗೆ ಸರ್ಕಾರದ ಯೋಜನೆ ತಲುಪುತ್ತಿಲ್ಲದಿದ್ದರೆ ಇಲ್ಲಿ ತಮ್ಮ ನೊಂದಣಿ ಮಾಡಿಕೊಂಡು ಯೋಜನೆಯ ಅನುಕೂಲ ಪಡೆದುಕೊಳ್ಳುವಂತೆ ಕರೆ ನೀಡಿದರು.

ಕೆಲವು ಸಂದರ್ಭಗಳಲ್ಲಿ ಯೋಜನೆಯ ಅನುಕೂಲ ಪಡೆಯುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ನೀಡುವುದು ಅಪರಾಧ ಇದರಿಂದ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.

ಹಿರಿಯ ನಾಗರಿಕರನ್ನು ತಮ್ಮ ಮಕ್ಕಳು ಪೋಷಿಸದಿದ್ದರೆ ಅಂತಹ ಮಕ್ಕಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಒಂದು ವೇಳೆ ತಮ್ಮ ಆಸ್ತಿಗಳನ್ನು ತಮ್ಮ ಮಕ್ಕಳಿಗೆ ದಾನ ಬರೆದು ಕೊಟ್ಟಿದ್ದರೂ ಕೂಡ ಅವುಗಳನ್ನ ವಾಪಸ್ ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಅವಕಾಶಗಳು ಇವೆ ಇದಕ್ಕೆ ಗ್ರಾಮ ಪಂಚಾಯತಿ ನಾಡಕಚೇರಿ ತಾಲೂಕು ಆಡಳಿತ ಹೀಗೆ ವಿವಿಧ ಸ್ಥರಗಳಲ್ಲಿ ಸಮಿತಿಗಳಿದ್ದು ಅವುಗಳ ಮೂಲಕ ನೆರವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎರಡು ಲಕ್ಷ ಪಹಣಿಗಳು ತಿದ್ದುಪಡಿಯಲ್ಲಿ ಇವೆ. ಅಜ್ಜ ಮುತ್ತಜ್ಜನ ಹೆಸರಿನಲ್ಲಿಯೇ ಇನ್ನೂ ಅನೇಕ ಜಮೀನುಗಳಿವೆ. ಇದರಿಂದ ಅನೇಕ ಸರ್ಕಾರದ ಯೋಜನೆಗಳನ್ನು ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ವಾರಸುದಾರರು ತಮ್ಮ ವಂಶವೃಕ್ಷದ ಸೂಕ್ತ ದಾಖಲೆಗಳನ್ನು ನೀಡಿ ತಮ್ಮ ಹೆಸರಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಅವಕಾಶವಿದ್ದು ಅದರ ಅನುಕೂಲ ಪಡೆದುಕೊಳ್ಳುವಂತೆ ಕರೆ ನೀಡಿದರು.

ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಅನರ್ಹರು ಸರ್ಕಾರದ ಯೋಜನೆ ಪಡೆದರೆ ಅಧಿಕಾರಿ ಹಾಗೂ ಫಲಾನುಭವಿಗಳು ಇಬ್ಬರು ತಪ್ಪಿತಸ್ಥರು ಹೀಗಾಗಿ ಫಲಾನುಭವಿಗಳು ತಮ್ಮ ಅರ್ಹತೆಯ ಸೂಕ್ತ ದಾಖಲೆಗಳನ್ನು ನೀಡಿ ಯೋಜನೆಯ. ಅನುಕೂಲಗಳನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ. ಸಂಧ್ಯಾ ಸುರಕ್ಷಾ ಯೋಜನೆ ಇಂದಿರಾಗಾಂಧಿ ವೃದ್ಯಾಪ್ಯ ವೇತನ, ನಿರ್ಗತಿಕ ವಿಧವಾ ವೇತನ ಅಂಗವಿಕಲರ ವೇತನ ಮೈತ್ರಿ ಯೋಜನೆಯ ಫಲಾನುಭವಿಗಳ ಕುಂದುಕೊರತೆಗಳ ಅಹವಾಲು ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶ್ವೇತಾ ರಂಗಸ್ವಾಮಿ, ಸದಸ್ಯರಾದ ನೇತ್ರಾವತಿ, ವಿಶ್ವನಾಥ್, ಅಂಜನ್ ಕುಮಾರ್, ಆಜ್ಗರ್, ಉಪ ತಹಸೀಲ್ದಾರ್ ದಿಲೀಪ್ ಕುಮಾರ್, ಕಂದಾಯ ನಿರೀಕ್ಷಕ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ಎಸ್.ಸಿ.ರಮೇಶ್, ಅಂಚೆ ಕಚೇರಿ ನಿರೀಕ್ಷಕ ಕಲ್ಲೇಶ್ ಲಾಡ್, ಪಿಡಿಒ ರಂಗಸ್ವಾಮಿ, ವಿಕಲಚೇತನರ ಇಲಾಖೆ ಫಯಾಜ್ ಸೇರಿದಂತೆ ಫಲಾನುಭವಿಗಳು ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.