ಸಾರಾಂಶ
ರಸ್ತೆ ಅಗಲೀಕರಣ ಜೊತೆ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಆಗ್ರಹಿಸಿ ಅಹಿಂದ ಚಳವಳಿ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಸ್ತೆ ಅಗಲೀಕರಣ ಹಾಗೂ ಒತ್ತುವರಿಯಾಗಿರುವ ರಾಜ ಕಾಲುವೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಅಹಿಂದ ಚಳುವಳಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ವೆಂಕಟೇಶ್ ಗೆ ಮನವಿ ಸಲ್ಲಿಸಲಾಯಿತು.ಚಳ್ಳಕೆರೆ ಟೋಲ್‍ಗೇಟ್‍ನಿಂದ ಜೆಎಂಐಟಿ ವೃತ್ತದವರೆಗೆ ರಸ್ತೆ ಅಗಲೀಕರಣಗೊಳಿಸುವ ಸಂಬಂಧ ಅನೇಕ ಸಭೆಗಳು ನಡೆದಿರುವುದನ್ನು ಬಿಟ್ಟರೆ ರಸ್ತೆ ಅಗಲೀಕರಣ ಮಾತ್ರ ಇನ್ನು ಆಗಿಲ್ಲ. ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಕೋಟೆ ರಸ್ತೆ ಕಿಷ್ಕಿಂದೆಯಾಗಿದ್ದು ವಾಹನಗಳ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ ಶೀಘ್ರವೇ ರಸ್ತೆ ಅಗಲೀಕರಣವಾಗಬೇಕು.
ನಗರದ ಬಹುತೇಕ ಕಡೆ ರಾಜಕಾಲುವೆಗಳು ಒತ್ತುವರಿಯಾಗಿರುವುದರಿಂದ ಮಳೆ ನೀರು ಹರಿದು ಹೋಗದೆ ರಸ್ತೆಗೆ ನುಗ್ಗುತ್ತದೆ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಐತಿಹಾಸಿಕ ಚಿತ್ರದುರ್ಗ ಕೋಟೆ, ಮುರುಘಾಮಠ, ಚಂದ್ರವಳ್ಳಿ, ಆಡುಮಲ್ಲೇಶ್ವರ ವೀಕ್ಷಣೆಗೆ ಹೊರಗಿನಿಂದ ಪ್ರವಾಸಿಗರು ಬರುವುದುಂಟು. ಆದರೆ ರಸ್ತೆ ಮಾತ್ರ ಇನ್ನೂ ಓಬಿರಾಯನ ಕಾಲದಂತಿದೆ. ಪಾದಚಾರಿಗಳಿಗೆ ಫುಟ್‍ಪಾತ್ ಇಲ್ಲ. ಇರುವ ರಸ್ತೆಯಲ್ಲಿಯೇ ವಾಹನಗಳ ನಿಲುಗಡೆಯಾಗುತ್ತಿರುವುದರಿಂದ ಸಂಚಾರ ದಟ್ಟಣೆ ಜಾಸ್ತಿಯಾಗುತ್ತಿದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ರಸ್ತೆ ಅಗಲೀಕರಣಕ್ಕೆ ಹೆಚ್ಚಿನ ಗಮನ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಶಪಿಸುತ್ತಾರೆ ಎಂದು ಅಹಿಂದ ಚಳುವಳಿ ಜಿಲ್ಲಾಧಿಕಾರಿ ಅವರಿಗೆ ಒತ್ತಾಯಿಸಿತು.ಅಹಿಂದ ಚಳುವಳಿ ಜಿಲ್ಲಾ ಮುಖ್ಯ ಸಂಚಾಲಕ ಟಿ.ಕೆಂಚಪ್ಪ, ಸಹ ಸಂಚಾಲಕ ಸತ್ಯಪ್ಪ ಮಲ್ಲಾಪುರ, ಸಂಚಾಲಕ ಅನಂತಕುಮಾರ್, ಲೇಖಕ ಹೆಚ್.ಆನಂದಕುಮಾರ್, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ರಾಜಪ್ಪ, ಕುಬೇಂದ್ರನಾಯ್ಕ, ಮಹಿಳಾಧ್ಯಕ್ಷೆ ಜ್ಯೋತಿಲಕ್ಷ್ಮಿ, ವಿನೋದಮ್ಮ ಇದ್ದರು.