ಹಂಪಿಯಲ್ಲಿ ಉತ್ಖನನ ಕಾರ್ಯ ನಿರಂತರವಾಗಿ ನಡೆಯಲಿ: ಜುನಾಯಿ ಹಾನ್

| Published : Jan 23 2024, 01:50 AM IST

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಂಪಿಯ ಪ್ರದೇಶದ ಐತಿಹ್ಯದ ವಿಶೇಷತೆಗಳು ಹಾಗೂ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಸುಸ್ಥಿರ ಪ್ರವಾಸೋದ್ಯಮದ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ಹೊಸಪೇಟೆ: ಯುನೆಸ್ಕೊ ವತಿಯಿಂದ ವಿಶ್ವ ಪ್ರಸಿದ್ಧ ಹಂಪಿಗೆ ದಕ್ಷಿಣ ಕೊರಿಯಾದ ಸಾಂಸ್ಕೃತಿಕ ವಲಯದ ಮುಖ್ಯಸ್ಥೆ ಜುನಾಯಿ ಹಾನ್ ಅವರೊಂದಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು‌ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಂಪಿಯ ಪ್ರದೇಶದ ಐತಿಹ್ಯದ ವಿಶೇಷತೆಗಳು ಹಾಗೂ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಸುಸ್ಥಿರ ಪ್ರವಾಸೋದ್ಯಮದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಸಭೆಯಲ್ಲಿ ಜುನಾಯಿ ಹಾನ್ ಮಾತನಾಡಿ, ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದಿಂದ ಎದುರು ಬಸವಣ್ಣದವರೆಗಿನ ಹಂಪಿ ಬಜಾರ್ ಸಾಲು ಮಂಟಪ‌ಗಳನ್ನು ದುರಸ್ತಿ ಮಾಡಬೇಕು. ಹಂಪಿಗೆ ಬರುವ ಪ್ರವಾಸಿಗರಿಗೆ ಹಂಪಿ ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ. ಇದರಿಂದ ಸಂವಹನಕ್ಕೆ ಕಿರಿಕಿರಿಯಾಗುತ್ತದೆ ಎನ್ನುವ ಅಭಿಪ್ರಾಯವಿದ್ದು ಈ ನಿಟ್ಟಿನಲ್ಲಿ ಆಯಾ ಕಡೆಗಳಲ್ಲಿ ಮೊಬೈಲ್ ಟವರ್ ಅಳವಡಿಸುವುದರ ಬಗ್ಗೆಯೂ ತಿಳಿಸಿದರು.

ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ ಸಹಕಾರದೊಂದಿಗೆ ಹಂಪಿಯ ಗೈಡ್ಸ್, ಟ್ಯಾಕ್ಸಿ ಮತ್ತು ಹೋಟೆಲ್ ಸೇರಿದಂತೆ ಪ್ರವಾಸೋದ್ಯಮ ವಲಯದಲ್ಲಿದ್ದವರಿಗೆ ಒಂದು ವಿಶೇಷ ಕಾರ್ಯಾಗಾರ ಏರ್ಪಡಿಸುವ ಯೋಜನೆಯಿದ್ದು, ಇದಕ್ಕೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಮಯ ನಿಗದಿಪಡಿಸಿ ಸಹಕಾರ ನೀಡಬೇಕು ಎಂದರು.ಉತ್ಖನನ ಆಗಲಿ: ಹಂಪಿಯ ಇತಿಹಾಸವು ವಿಶಿಷ್ಟ ಹಾಗೂ ವಿಶಾಲತೆಯಿಂದ ಕೂಡಿದೆ. ಈ ಬಗ್ಗೆ ಅಧ್ಯಯನಗಳು ಆಗಬೇಕಿದೆ. ಹೊಸ ಹೊಸ ಉತ್ಖನನ ಕಾರ್ಯ ನಿರಂತರವಾಗಿ ನಡೆಯಬೇಕು. ಜತೆಗೆ ಸಂಶೋಧನೆಗಳು ನಡೆಯಬೇಕು ಎಂದರು.

ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ: ಹಂಪಿ ಪ್ರದೇಶದಲ್ಲಿ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಾಗೂ ಜನಸ್ನೇಹಿ ಸೈಕಲ್ ಟೂರಿಸಂಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧಪಡಿಸುತ್ತಿರುವ ಸೈಕಲ್ ಟೂರಿಸಂನ ಪ್ಲಾನ್ ಮತ್ತು ರೂಟ್ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸೈಕಲ್ ಮೂಲಕ ಎಲ್ಲರೂ ಹಂಪಿಯನ್ನು ನೋಡುವ ಪ್ರಾಜೆಕ್ಟ್ ನೋಡಿ ಜಿಲ್ಲಾಡಳಿತದ ಕ್ರಮದ ಬಗ್ಗೆ ಜುನಾಯಿ ಹಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಂಪಿ ಪ್ರಾಧಿಕಾರದ ಆಯುಕ್ತ ಎನ್. ಮಹಮದ್ ಅಲಿ ಅಕ್ರಮ್ ಶಾ, ಪುರಾತತ್ವ ಇಲಾಖೆಯ ಅಧೀಕ್ಷಕ ನಿಹಿಲ್ ದಾಸ್, ಪುರಾತತ್ವ ಇಲಾಖೆಯ ಉಪನಿರ್ದೇಶಕ ತೇಜಸ್ವಿ, ಪ್ರವಾಸೋದ್ಯಮ ಇಲಾಖೆಯ ಶಿವಲಿಂಗಪ್ಪ ಮತ್ತಿತರರಿದ್ದರು.