ಸಾರಾಂಶ
ನವಲಗುಂದ: ಇಂದಿನ ಯುವಸಮೂಹ ಆಂಗ್ಲ ಮಾಧ್ಯಮಕ್ಕೆ ಜೋತು ಬಿದ್ದಿರುವುದು ನೋವಿನ ಸಂಗತಿ. ಈ ಕುರಿತು ಕನ್ನಡದ ಮನಸ್ಸುಗಳು ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಕಸಾಪ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಚಿದಾನಂದ ಮನ್ಸೂರ ಹೇಳಿದರು.
ಭಾನುವಾರ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 4ರಲ್ಲಿ ನಡೆದ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡ ಶಾಲೆಗಳು ಉಳಿಯಬೇಕು. ಗಡಿ ಪ್ರದೇಶದಲ್ಲಿ ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಇಂದು ಕೃಷಿ ಪದ್ಧತಿ ಬಹಳಷ್ಟು ಬದಲಾವಣೆಯಾಗಿದೆ. ಇದನ್ನು ರೈತಕುಲ ಅನ್ವಯಿಸಿಕೊಳ್ಳಬೇಕು. ರೈತನ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಾಗಿದೆ. ದೇಶಕ್ಕಾಗಿ ನಾವು ವೈಯಕ್ತಿಕ ಕೊಡುಗೆ ನೀಡಬೇಕಾಗಿದೆ. ಕೃಷಿಯಲ್ಲಿ ಸ್ವಾವಯವ ಹಾಗೂ ಕೈಗೆ ಎಟುಕುವಂತಹ ಯಂತ್ರೋಪಕರಣಗಳನ್ನು ತಾವೇ ತಯಾರಿಸಿಕೊಳ್ಳುವ ಬೋಧನೆ ಅಥವಾ ತರಬೇತಿ ಕೇಂದ್ರಗಳನ್ನು ನೀಡಬೇಕಾಗಿದೆ ಎಂದರು.
ರಾಜ್ಯದ ಗಡಿ ವಿವಾದಗಳನ್ನು ಬಿಟ್ಟು ಪರಸ್ಪರ ಸ್ನೇಹ ಬಾಂಧವ್ಯದಿಂದ ಇರಬೇಕು. ನಮ್ಮ ಭಾಷೆ ನಮಗೆ ಮುಖ್ಯವೋ ಹಾಗೆ ಪರ ರಾಜ್ಯದ ಭಾಷೆಯು ಮುಖ್ಯ ನಮ್ಮಲ್ಲಿ ಬಂದಾಗ ಅವರು ಕನ್ನಡ ಮಾತನಾಡಲಿ. ಅವರಲ್ಲಿಗೆ ಹೋದಾಗ ನಾವು ಅವರ ಭಾಷೆ ಮಾತನಾಡುವ ಮುಖಾಂತರ ಸೌಹಾರ್ದತೆ ಹೊಂದಬೇಕೆ ಹೊರತು ಅನ್ಯರಂತೆ ವರ್ತನೆ ಮಾಡುವುದು ಸರಿಯಲ್ಲ. ನಾವೆಲ್ಲ ಭಾರತಾಂಬೆಯ ಮಕ್ಕಳು ನಾವೆಲ್ಲರೂ ಒಂದೇ. ಆದರೆ, ನಮ್ಮ ಭಾಷೆ, ಜಲ, ನೆಲಕ್ಕೆ ಏನಾದರೂ ಧಕ್ಕೆಯಾದರೆ ಸಹಿಸುವ ಮಾತೇ ಇಲ್ಲ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದರು.ನಮ್ಮ ಕನ್ನಡ ಪರಂಪರೆ ಬಹು ಶ್ರೇಷ್ಠವಾದುದು. ಈ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು ಈ ನೆಲ, ಜಲ ಬಹಳ ಪವಿತ್ರವಾದುದು. ಇದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಹೆಗಲಿಗಿದೆ. ಸಾಹಿತ್ಯ ಸಮ್ಮೇಳನ ನಾಡನ್ನು ಕಟ್ಟಲು ಒಂದು ಶ್ರೇಷ್ಠ ವೇದಿಕೆ. ಇಂತಹ ಸಮ್ಮೇಳನಗಳು ಗ್ರಾಮೀಣ ಪ್ರದೇಶದಲ್ಲಿ ಜರುಗಿಸಬೇಕು.
ಸಮ್ಮೇಳನ ಉದ್ಘಾಟಿಸಿದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಪಟ್ಟಣದಲ್ಲಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಹಾಜರಿರಬೇಕು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಶಿಕ್ಷಕರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ಕಸಾಪ ಸದಸ್ಯರನ್ನಾಗಿ ಮಾಡಿ ಎಲ್ಲರೂ ಈ ಕನ್ನಡದ ಹಬ್ಬಕ್ಕೆ ಭಾಗಿಯಾಗುವಂತೆ ಆದೇಶ ಹೊರಡಿಸಿ ಎಂದು ಸಂಘದ ಸದಸ್ಯರಿಗೆ ತಾಕೀತು ಮಾಡಿದರು.ಕನ್ನಡ ಸಾಹಿತ್ಯ ಇರುವಂಥವರನ್ನು, ಪುಟ್‌ಪಾತ್ ವ್ಯಾಪಾರಿಗಳನ್ನು, ಯುವಕರನ್ನು ಹಾಗೂ ಇನ್ನಿತರೆ ವಿವಿಧ ಸಂಘಟನೆಗಳ ಮತ್ತು ಸಮಾಜ ಸೇವಕರನ್ನು ಕಸಾಪಗೆ ಸೇರಿಸಿ, ರಾಜಕಾರಿಣಿಗಳನ್ನು ಕಸಾಪ ಸದಸ್ಯರನ್ನಾಗಿ ಮಾಡಿಕೊಳ್ಳಬೇಡಿ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರಿಗೆ ಆದ್ಯತೆ ನೀಡಿ. ಇಂದಿನ ಯುಗದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಒಳ್ಳೆಯ ಪ್ರತಿಭಾವಂತ ಮಕ್ಕಳು ಬೆಳಕಿಗೆ ಬರುತ್ತಾರೆ. ಈ ಕುರಿತು ಪಾಲಕರು ಜಾಗೃತಿ ಹೊಂದಬೇಕು ಎಂದರು.
ಇದಕ್ಕೂ ಮೊದಲು ಬೆಳಗ್ಗೆ ಭಾರತಾಂಬೆಯ ರಾಷ್ಟ್ರಧ್ವಜವನ್ನು ಕಾರ್ಯಾಧ್ಯಕ್ಷ ದೇವೇಂದ್ರಪ್ಪ ಹಳ್ಳದ, ಕರ್ನಾಟಕ ಭುವನೇಶ್ವರಿಯ ಕನ್ನಡ ಧ್ವಜವನ್ನು ಲಿಂಗರಾಜ ಅಂಗಡಿ ಹಾಗೂ ಕಸಾಪ ಧ್ವಜವನ್ನು ಸಿದ್ದಲಿಂಗಯ್ಯ ಹಿರೇಮಠ ನೆರವೇರಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ವಾಧ್ಯಕ್ಷ ಡಾ. ಚಿದಾನಂದ ಮನ್ಸೂರ ಅವರ ಮೆರವಣಿಗೆ ನಡೆಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪಾಲ್ಗೊಂಡರು. ನಂತರ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ಗವಿಮಠದ ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸಿದ್ದರು. ಎ.ಬಿ. ಕೊಪ್ಪದ, ಶ್ರೀನಿವಾಸ ಅಮಾತ್ಯೆನ್ನವರ, ಅಂದಾನಿಗೌಡ ದೊಡ್ಡಮೇಟಿ, ಶಾಂತವ್ವ ಗುಜ್ಜಳ, ಸುಭಾಸಚಂದ್ರಗೌಡ ಪಾಟೀಲ, ಬಾಪುಗೌಡ ಪಾಟೀಲ, ಮಾಂತೇಶ ಭೋವಿ, ಜೀವನ ಪವಾರ, ಮಂಜು ಜಾಧವ, ಮಂಜುಳಾ ಜಾಧವ ಸೇರಿದಂತೆ ಹಲವರಿದ್ದರು.