ಸಾರಾಂಶ
ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಷ್ಟಗಿ
ರೈತರು ಸಾವಯವ ಕೃಷಿ ಮಾಡಲು ಮುಂದಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ಕೃಷಿ ಇಲಾಖೆಯ ಕಾರ್ಯಾಲಯದ ಆವರಣದಲ್ಲಿ ನಡೆದ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಹಾಗೂ ಬೀಜೋಪಚಾರದ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆಯ ಬೀಜ ವಿತರಿಸಿ ಮಾತನಾಡಿದರು. ರೈತರು ಹೆಚ್ಚಿನ ಆದಾಯಕ್ಕಾಗಿ ಬೇಕು ಮತ್ತು ಬೇಡವಾದ ರಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸುವ ಮೂಲಕ ವಿಷಪೂರಿತ ಆಹಾರ ಬೆಳೆಯುತ್ತಿದ್ದು, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡುವುದರೊಂದಿಗೆ ಸಾವಯುವ ಕೃಷಿಯತ್ತ ಒಲವು ತೋರಿಸಬೇಕು ಎಂದರು.
ಕೃಷಿ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳ ಸಲಹೆ ಪಡೆದುಕೊಂಡು ಕೃಷಿ ಮಾಡಬೇಕು. ಅಂದಾಗ ಮಾತ್ರ ಲಾಭದಾಯಕ ಕೃಷಿ ಮಾಡಲು ಉತ್ತಮವಾದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಖರೀದಿಸಿದ ಸಾಮಗ್ರಿಗಳನ್ನು ಅನ್ಯರಿಗೆ ಕೊಡದೆ ತಾವುಗಳು ಬಳಕೆಯನ್ನು ಮಾಡಿಕೊಳ್ಳಬೇಕು ಎಂದರು.ಕೃಷಿ ಇಲಾಖೆಯ ಉಪನಿರ್ದೇಶಕ ಸಹದೇವ ಮಾತನಾಡಿ, ಇಲಾಖೆಯ ವತಿಯಿಂದ ರೈತರಿಗೆ ಅವಶ್ಯಕವಿರುವಂತಹ ಹಿಂಗಾರು ಹಂಗಾಮಿನ ಕಡಲೆ, ಜೋಳದ ಬೀಜಗಳನ್ನು ಕೊಡುತ್ತಿದ್ದು. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಮುಂದಾಗಬೇಕು. ನಮ್ಮ ಇಲಾಖೆಯ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದಾಗಿ ಹಾಗೂ ಈಗ ಆನಲೈನ್ ವ್ಯವಸ್ಥೆಯ ಮೂಲಕ ನಾವು ಬೀಜಗಳನ್ನು ಕೊಡಬೇಕಾಗಿದ್ದು, ಸ್ವಲ್ಪ ತಡವಾಗುತ್ತದೆ ರೈತರು ಸಹಕರಿಸಬೇಕು ಎಂದರು.
ರೈತರು ನೇರವಾಗಿ ಬೀಜ ಬಿತ್ತನೆ ಮಾಡದೆ ಬೀಜೋಪಚಾರವನ್ನು ಮಾಡುವ ಮೂಲಕ ಬಿತ್ತನೆ ಮಾಡಬೇಕು. ಕಾಲಕಾಲಕ್ಕೆ ಮಣ್ಣು ಪರೀಕ್ಷೆಯನ್ನು ಮಾಡಿಸಬೇಕು. ಮಣ್ಣನ್ನು ಫಲವತ್ತತೆಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರದ ಪ್ರಾದ್ಯಾಪಕ ವಾಮನಮೂರ್ತಿ ಪುರೋಹಿತ ಮಾತನಾಡಿ, ರೈತಾಪಿ ಜನರು ವೈಜ್ಞಾನಿಕವಾಗಿ ಕೃಷಿಯನ್ನು ಮಾಡಲು ಮುಂದಾಗಿ ಉತ್ತಮವಾದ ಬೆಳೆ ಬೆಳೆಯಬೇಕು. ಅಧಿಕಾರಿಗಳ ಸಹಕಾರದೊಂದಿಗೆ ಉತ್ತಮ ಆದಾಯ ಗಳಿಸುವ ನಿಟ್ಟಿನಲ್ಲಿ ಕೃಷಿ ಕೆಲಸಗಳನ್ನು ಮಾಡಬೇಕು ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ರೈತರಿಗೆ ಕಡಲೆ ಹಾಗೂ ಜೋಳದ ಬಿತ್ತನೆಯ ಬೀಜಗಳನ್ನು ವಿತರಣೆ ಮಾಡುವುದರ ಜೊತೆಗೆ ರೈತರ ಕೃಷಿ ಕೆಲಸಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಸಹಿತ ಫಲಾನಭವಿಗಳಿಗೆ ವಿತರಣೆ ಮಾಡಿದರು.ಈ ಸಂದರ್ಭ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಮೀರ ಅಲಿ, ತಾಂತ್ರಿಕ ಸಿಬ್ಬಂದಿ ರಾಜಶೇಖರಗೌಡ ಪಾಟೀಲ, ರೈತ ಸಂಘದ ಮುಖಂಡ ನಜೀರಸಾಬ ಮೂಲಿಮನಿ ಸೇರಿದಂತೆ ಅನೇಕ ರೈತರು, ಇಲಾಖೆ ಸಿಬ್ಬಂದಿ ಇದ್ದರು.
ಸಬ್ಸಿಡಿಗಾಗಿ ಆಗ್ರಹ:
ಎಸ್ಟಿ ಅನುದಾನದಲ್ಲಿ ಕೃಷಿ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದ್ದು, ಅದಕ್ಕೆ ಬರಬೇಕಾಗಿರುವ ಸಬ್ಸಿಡಿಯ ಹಣವನ್ನು ಇಲ್ಲಿಯವರೆಗೂ ಸಂದಾಯ ಮಾಡಿರುವುದಿಲ್ಲ. ಕೂಡಲೆ ಸಬ್ಸಿಡಿ ಹಣ ಸಂದಾಯ ಮಾಡುವಂತೆ ಶಾಸಕರಿಗೆ ತಾಲೂಕಿನ ರೈತರೊಬ್ಬರು ಒತ್ತಾಯಿಸಿದರು. ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.