ಶೌಚಾಲಯವೂ ಪವಿತ್ರ ಎನ್ನುವ ಭಾವನೆ ಬೆಳೆಯಲಿ: ಡಾ.ಪ್ರಕಾಶ ಭಟ್

| Published : Jan 07 2025, 12:34 AM IST

ಶೌಚಾಲಯವೂ ಪವಿತ್ರ ಎನ್ನುವ ಭಾವನೆ ಬೆಳೆಯಲಿ: ಡಾ.ಪ್ರಕಾಶ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಮನೆಗೂ ವೈಯಕ್ತಿಕ ಶೌಚಾಲಯ ಹೊಂದುವ ಜೊತೆಗೆ ಅವುಗಳನ್ನು ಕಡ್ಡಾಯವಾಗಿ ಬಳಸುವುದನ್ನು ರೂಢಿಸಿಕೊಳ್ಳಿ. ಇದರಿಂದ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿಮ್ಮದಾಗುತ್ತದೆ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಆರೋಗ್ಯಕರ ಬದುಕಿಗೆ, ಸ್ವಚ್ಛ ಪರಿಸರಕ್ಕೆ ಶೌಚಾಲಯವೂ ಪವಿತ್ರ ಎನ್ನುವ ಭಾವನೆ ಗಟ್ಟಿಗೊಳ್ಳಬೇಕು ಎಂದು ಗ್ರಾಮಾಭಿವೃದ್ಧಿ ಚಿಂತಕ, ಪರಿಸರವಾದಿ ಡಾ.ಪ್ರಕಾಶ ಭಟ್ ಅಭಿಪ್ರಾಯಪಟ್ಟರು.

ತಾಲೂಕಿನ ಹಂಗರಗಿ ಗ್ರಾಮದಲ್ಲಿ ಭಾನುವಾರ ಗ್ರಾಮ ಫೆಲೋಶಿಪ್ ಮತ್ತು ಗ್ರಾಮಾಭಿವೃದ್ಧಿ ಸಮಿತಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಆತ್ಮಶುದ್ಧಿಗೆ ದೇವಾಲಯ ಹೇಗೆ ಪವಿತ್ರವೋ ಹಾಗೆಯೇ ದೇಹಶುದ್ಧಿ, ಆರೋಗ್ಯ ವೃದ್ಧಿಗೆ ಶೌಚಾಲಯವೂ ಅಷ್ಟೇ ಪವಿತ್ರ. ಪ್ರತಿ ಮನೆಗೂ ವೈಯಕ್ತಿಕ ಶೌಚಾಲಯ ಹೊಂದುವ ಜೊತೆಗೆ ಅವುಗಳನ್ನು ಕಡ್ಡಾಯವಾಗಿ ಬಳಸುವುದನ್ನು ರೂಢಿಸಿಕೊಳ್ಳಿ. ಇದರಿಂದ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.

ಶಿಕ್ಷಣ ತಜ್ಞ, ವಿಶ್ರಾಂತ ಬಿಇಒ ಬಸವರಾಜ ಶಿವಪುರ ಮಾತನಾಡಿ, ನಮ್ಮೆಲ್ಲರ ಏಳ್ಗೆಗೆ ಶಿಕ್ಷಣವೇ ಮೂಲಮಂತ್ರ. ಮಕ್ಕಳಲ್ಲಿ ಹೆಣ್ಣು-ಗಂಡು ಭೇದ ಎನಿಸದೇ ಶಕ್ತ್ಯಾನುಸಾರ ಶಿಕ್ಷಣ ಕೊಡಿಸಿ. ಶಿಕ್ಷಣದಿಂದ ಮಾತ್ರ ಗ್ರಾಮ, ದೇಶದ ಅಭಿವೃದ್ಧಿ ಎಂದರು.

ನನ್ನ ಊರು ನನ್ನ ದೇವಾಲಯ ಎನ್ನುವ ಭಾವನೆ ಮೂಡಿದರೆ ಗ್ರಾಮಗಳು ತನ್ನಿಂದ ತಾನೇ ಸ್ವಚ್ಛ, ಸುಂದರ, ಸೌಹಾರ್ದತೆ ತವರು ಆಗುತ್ತವೆ. ಬಾಲ್ಯದಲ್ಲೇ ಮಕ್ಕಳಲ್ಲಿ ಈ ತತ್ವವನ್ನು ಮನದಟ್ಟು ಮಾಡಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು. ಪ್ರಾಸ್ತಾವಿಕ ಮಾತನಾಡಿದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಎಲ್ಲ ಅಗತ್ಯತೆಗಳಿಗೂ ಗ್ರಾಮ ಪಂಚಾಯಿತಿ ಮತ್ತು ಸರ್ಕಾರದ ಅವಲಂಬನೆ ಬೇಡ. ನಮ್ಮ ಮನೆ, ಊರು ಸ್ವಚ್ಛವಾಗಿ ಇಟ್ಟುಕೊಳ್ಳಲು ಶ್ರಮದಾನ, ಸೇವಾ ಮನೋಭಾವ, ಸಂಘಟಿತ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯಬೇಕು. ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆ ನೂರಾರು ವಿದ್ಯಾರ್ಥಿಗಳು ನೈರ್ಮಲೀಕರಣದ ಘೋಷಣೆ ಕೂಗುತ್ತಾ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು. ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕರು, ಆರೋಗ್ಯ, ಆಶಾ ಕಾರ್ಯಕರ್ತೆಯರು, ಯುವಕ ಮಂಡಳಿ ಸದಸ್ಯರು, ಗ್ರಾಮದ ಗಣ್ಯರು ಈ ಜಾಥಾದಲ್ಲಿ ಭಾಗವಹಿಸಿದ್ದರು.

ಬಾದಾಮಿ ತಾಪಂ ಮಾಜಿ ಅಧ್ಯಕ್ಷ ಪ್ರಮೋದ ಕವಡಿಮಟ್ಟಿ ಸ್ವಾಗತಿಸಿದರು. ಗ್ರಾಪಂ ಮಾಜಿ ಸದಸ್ಯ ಪ್ರಕಾಶ ಮೇಟಿ ವಂದಿಸಿದರು. ಮಲ್ಲಪ್ಪ ಕುರಿ, ಫಕ್ಕೀರಪ್ಪ ಉಗಲವಾಟ, ಹನುಮಂತ ಬಿಳೇಕಲ್ಲ, ರಾಚಯ್ಯ ಕಾರಿಕಂಟಿ, ಮಲ್ಲಿಕಾರ್ಜುನ ಹಲಕುರ್ಕಿ, ದಾಳಪ್ಪ ದೊಡ್ಡಮನಿ, ಸಂಗಮ ಮುತ್ತಪ್ಪ, ಶ್ರೀಧರ್ ಮೇಟಿ, ತಿಪ್ಪವ್ವ ದೊಡ್ಡಮನಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು