ಸಾರಾಂಶ
ಮುಂಡಗೋಡ: ಹಬ್ಬದ ಕಾರ್ಯಕ್ರಮಗಳು ಸಂಭ್ರಮವಾಗಬೇಕು ವಿನಃ ಸೂತಕವಾಗಬಾರದು. ಸಮಾಜದ ಹಿತದೃಷ್ಟಿ ಇಟ್ಟುಕೊಂಡು ಹಬ್ಬವನ್ನು ಆಚರಿಸಬೇಕು. ಯಾವುದೇ ಅನಾಹುತಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ತಾಪಂ ಇಒ ಟಿ.ವೈ. ದಾಸನಕೊಪ್ಪ ಹೇಳಿದರು.
ಪಟ್ಟಣದ ಆಯೋಜಿಸಲಾದ ಗಣೇಶ ಚತುರ್ಥಿ ಪೂರ್ವಭಾವಿ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ನಾವು ಮಾಡುವ ಸಂಭ್ರಮ ಎಲ್ಲರು ಖುಷಿಪಡುವಂತಾಗಿರಬೇಕು. ಬೇರೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ತಾಲೂಕಿನ ಗ್ರಾಮೀಣ ಭಾಗದ ಗಣೇಶ ವಿಸರ್ಜನಾ ಸ್ಥಳಗಳಲ್ಲಿ ಸಚ್ಚತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಪ್ರತಿ ಪಿಡಿಒಗಳಿಗೆ ಸೂಚನೆ ನೀಡಲಾಗುವುದು. ಸಂಬಂಧಿಸಿದ ಇಲಾಖೆ ಕಚೇರಿಗಳಿಂದ ಅನುಮತಿ ಪಡೆದು ಪಡೆದುಕೊಳ್ಳಬೇಕು. ಮುಂಡಗೋಡ ಠಾಣೆ ಸಿಪಿಐ ರಂಗನಾಥ ನೀಲಮ್ಮನವರ ಮಾತನಾಡಿ, ಪ್ರತಿಯೊಬ್ಬರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಹಬ್ಬವನ್ನು ಶಾಂತಿ ಸೌಹಾರ್ದದಿಂದ ಆಚರಿಸಬೇಕು. ರಾಸಾಯನಿಕ ಬಣ್ಣ ಬಳಸದ ಪರಿಸರ ಪೂರಕ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಬೇಕು. ಯಾವುದೇ ರೀತಿ ಪ್ರಚೋದನಾತ್ಮಕ ಚಿತ್ರಗಳನ್ನು ಅಳವಡಿಸಬಾರದು. ಅವಗಡಗಳು ನಡೆಯದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು. ಏನೇ ಅಹಿತಕರ ಘಟನೆ ನಡೆದರೂ ಅದಕ್ಕೆ ಸಮಿತಿಯವರೇ ಹೊಣೆಯಾಗುತ್ತಾರೆ. ಹಾಗಾಗಿ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವುದು ಸೂಕ್ತ. ಡಿಜೆ ಬದಲಾಗಿ ಬ್ಯಾಂಡ್, ಚೆಂಡೆ ವಾದ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ವಾದ್ಯ ಮೇಳಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಣ್ಣು ಹಂಪಲು ವಿತರಣೆ ಸೇರಿದಂತೆ ಬಡವರಿಗೆ ನೆರವಾಗುವಂತಹ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು. ವಿಸರ್ಜನಾ ಮೆರವಣಿಗೆಯನ್ನು ಮಧ್ಯರಾತ್ರಿ ಬೆಳಗಾಗುವರೆಗೆ ಹೋಗದೆ ಬೇಗ ವಿಸರ್ಜನೆ ಕಾರ್ಯ ಮುಗಿವುದರೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ಪಿ.ಎಸ್.ಐ ಪರಶುರಾಮ ಮಿರ್ಜಗಿ, ಉಪ ತಹಸೀಲ್ದಾರ ಜಿ.ಬಿ ಭಟ್, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಎ.ಎಸ್.ಐ ಶಂಕರ ರಾಥೋಡ, ಹೆಸ್ಕಾಂ, ಅಗ್ನಿಶಾಮಕ ದಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜದ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.