ಮುಳುಗಡೆ ಸಂತ್ರಸ್ತರ ಪರ ಹೋರಾಟ ಚುರುಕಾಗಲಿ: ಎಸ್.ಟಿ.ಪಾಟೀಲ

| Published : Nov 11 2024, 11:47 PM IST

ಸಾರಾಂಶ

ಮುಳಗಡೆ ಸಂತ್ರಸ್ತರ ಸಮಸ್ಯೆಗಳು, ಸಲಹೆ ಸೂಚನೆಗಳು ಮತ್ತು ಮುಂದಿನ ಹೋರಾಟದ ರೂಪುರೇಷಗಳ ಸಿದ್ಧಪಡಿಸುವ ಪೂರ್ವಸಿದ್ಧತಾ ಸಭೆಯಲ್ಲಿ ಹಿರಿಯರಾದ ಎಸ್.ಟಿ.ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಆಲಮಟ್ಟಿ ಜಲಾಶಯ ಎತ್ತರ 524.526 ಮೀಟರ್‌ ವಾಗುವುದರಿಂದ ಆಗುವ ಸಾಧಕ ಬಾಧಕ ಮತ್ತು ಸರ್ಕಾರ ಈ ಯೋಜನೆಯ ಕುರಿತಾಗಿ ಕೈಗೊಂಡು ನೀತಿ ನಿಯಮಗಳು ಸಂತ್ರಸ್ತರ ಪಾಲಿಗೆ ಹಾನಿಯುಂಟು ಮಾಡುತ್ತಿದೆ. ಕೂಡಲೇ ಸರ್ಕಾರವನ್ನು ಎಚ್ಚರಿಸಲು ಮುಳುಗಡೆ ಸಂತ್ರಸ್ತರು ಹೋರಾಟದ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಮುಳುಗಡೆ ಸಂತ್ರಸ್ತರ ಪರ ಹೋರಾಟಗಾರರು, ಹಿರಿಯರಾದ ಎಸ್.ಟಿ.ಪಾಟೀಲ ತಿಳಿಸಿದರು.

ತಾಲೂಕಿನ ಕೊರ್ತಿ ಪುಕೆಯಲ್ಲಿನ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಕರೆಯಲಾಗಿದ್ದ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು, ಸಲಹೆ ಸೂಚನೆಗಳು ಮತ್ತು ಮುಂದಿನ ಹೋರಾಟದ ರೂಪುರೇಷಗಳ ಸಿದ್ಧಪಡಿಸುವ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಆಲಮಟ್ಟಿ ಜಲಾಶಯದ ಹಿನ್ನಿರಿನಿಂದ ಕಳೆದ 20 ವರ್ಷಗಳ ಹಿಂದೆ ಕೈಗೊಂಡಿದ್ದ ಸಂತ್ರಸ್ತರ ಹೋರಾಟದ ದಾರಿಯಲ್ಲಿ ಈ ಬಾರಿಯೂ ಹೋರಾಟವಾದರೆ ಮಾತ್ರ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ. ಕೇವಲ ನಾಲ್ಕಾರು ಜನರು ಸೇರಿಕೊಂಡು ಹೋರಾಟ ಮಾಡುತ್ತೇವೆ ಎಂದಾದರೆ ಇನ್ನು ಮುಂದಿನ 10 ವರ್ಷ ಕಳೆದರು ಯಾವುದೇ ನ್ಯಾಯ ಸಿಗುವುದಿಲ್ಲ. ಅದಕ್ಕಾಗಿ ಈಗಾಗಲೇ ಸಂತ್ರಸ್ತರು ನೀಡಿರುವ ಸಲಹೆಯಂತೆ ಬರುವ ಮೂರು ದಿನಗಳಲ್ಲಿ ತಾಲೂಕಿನ 20 ಹಳ್ಳಿಗಳಲ್ಲಿ ಮುಳುಗಡೆ ಹೋರಾಟ ಸಮಿತಿ ಕನಿಷ್ಠ 20 ಸದಸ್ಯರ ಗ್ರಾಮ ಘಟಕಗಳನ್ನು ಆರಂಭ ಮಾಡಿ ತಾಲೂಕು ಘಟಕಕ್ಕೆ ವರದಿ ನೀಡಬೇಕು. ಹೀಗೆ ಮಾಡಿದಾಗ ಮಾತ್ರ ಎಲ್ಲರಿಗೂ ಹೋರಾಟದ ರೂಪುರೇಷಗಳ ಕುರಿತಾಗಿ ಸಂದೇಶ ನೀಡಿ ಎಲ್ಲರನ್ನು ಕರೆದುಕೊಂಡು ಬೃಹತ್‌ ಪ್ರಮಾಣದ ಹೋರಾಟ ಮಾಡುವ ಯೋಜನೆ ಹಾಕಿಕೊಳ್ಳಬಹುವುದು ಎಂದರು.

ಈಗಾಗಲೇ ಕೋರ್ಟ್‌ನಲ್ಲಿ ತೀರ್ಪಾದ ಪ್ರಕರಣಗಳಿಗೆ ಸರ್ಕಾರ ಪರಿಹಾರ ಸಂದಾಯ ಮಾಡಬೇಕು. ಆಲಮಟ್ಟಿ ಜಲಾಶಯ ಎತ್ತರ 522 ಮೀಟರ್ ಆಗುವುದೋ ಅಥವಾ 524 ಮೀಟರ ಎತ್ತರ ಆಗುವುದೋ ಎಂಬ ಗೊಂದಲ ಹೋಗಬೇಕು. ಈಗಾಗಲೇ ಹೊರಡಿಸಿರುವ ಅಸೂಚನೆ ಪೂರ್ಣಗೊಳಿಸಬೇಕು ಎನ್ನುವ ವಿಚಾರಗಳ ಹೋರಾಟದೊಂದಿಗೆ 524.256 ಮೀಟರ್ ವ್ಯಾಪ್ತಿಯಲ್ಲಿ ಮುಳಗಡೆಯಾಗುವ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು, ಈಗಿರುವ ಅತಂತ್ರ ಸ್ಥಿತಿ ಹೊಗಲಾಡಿಸಬೇಕು ಎಂಬ ನಿರ್ಣಯದೊಂದಿಗೆ ಸಂತ್ರಸ್ಥರು ಮುಂದೆ ಸಾಗಬೇಕಿದೆ ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರು ಮುಂದೆ ಬರಬೇಕು ಎಂದರು.

ಸಭೆಯಲ್ಲಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಅದ್ರಶ್ಯಪ್ಪ ದೇಸಾಯಿ ಮಾತನಾಡಿ, ಈಗಾಗಲೇ ಕಳೆದ ಹಲವು ವರ್ಷಗಳ ಹಿಂದೆ ಸಂತ್ರಸ್ತರು ಮತ್ತು ಮಾನ್ಯ ಶಾಸಕ ಜೆ.ಟಿ.ಪಾಟೀಲ, ಹಿರಿಯರಾದ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಸಂತ್ರಸ್ತರ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬರುವಂತಹ ಹೋರಾಟ ಮಾಡಿದ್ದೇವೆ. ಸದ್ಯ ನಮಗೆಲ್ಲರಿಗೂ ನ್ಯಾಯ ಸಂಪೂರ್ಣವಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಹೋರಾಟದ ರೂಪರೇಷ ಮಾಡಿಕೊಂಡು ಸರ್ಕಾರದ ಗಮನಕ್ಕೆ ತಂದು ಸದ್ಯ ಇರುವ ಸಮಸ್ಯೆಗಳ ಪರಿಹಾರಕ್ಕೆ ಎಂತಹ ತ್ಯಾಗವಾದರು ಮಾಡಲು ಸಿದ್ಧರಾಗಬೇಕಿದೆ. ನ.17ರಂದು ಬಾಗಲಕೋಟೆಗೆ ಸಿಎಂ ಸಿದ್ದರಾಮಯ್ಯನವರು ಆಗಮಿಸಲಿದ್ದು ಜಿಲ್ಲೆಯ ಎಲ್ಲ ಶಾಸಕ, ಸಚಿವರೊಂದಿಗೆ ಅವರ ಸಮಯ ಪಡೆದುಕೊಂಡು ನಮ್ಮ ಸಮಸ್ಯೆಗಳನ್ನು ಅಹವಾಲು ನೀಡಿ ಅವುಗಳನ್ನು ಬಗೆಹರಿಸುವಂತೆ ಒತ್ತಾಯ ಮಾಡುವ ಯೋಜನೆ ಹಾಕಿದ್ದೇವೆ. ಬರುವ ಅಧಿವೇಶನದಲ್ಲಿ ಸಂದರ್ಭದಲ್ಲಿ ಕೃಷ್ಣಾ ಮೆಲ್ದಂಡೆ ಯೋಜನೆ ಸಂಪೂರ್ಣ ಯಶಸ್ವಿಯಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವವರಿಗೂ ನಾವು ಬದ್ಧರಾಗಿ ಪಕ್ಷಾತೀತವಾಗಿ ಎಲ್ಲ ಸಂಘಟನೆಗಳನ್ನು ಜತೆಗೆ ಸೇರಿಸಿಕೊಂಡು ಹೋರಾಟ ಮಾಡುವ ಗುರಿಯೊಂದಿಗೆ ಸಾಗಬೇಕು ಎಂದರು.

ಈ ಸಂದರ್ಭದಲ್ಲಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಪ್ರಕಾಶ ಅಂತರಗೊಂಡ, ಎಂ.ಎಲ್.ಕೆಂಪಲಿಂಗಣ್ಣವರ, ಎಂ.ಎಸ.ಕಾಳಗಿ, ಜಿ.ಆರ್ ಪಾಟೀಲ, ಕಿರಣ ಬಾಳಾಗೋಳ, ಸಿದ್ದು ಗಿರಗಾಂವಿ, ಎಚ್.ಬಿ.ಸೊನ್ನದ, ಸುರೇಂದ್ರ ನಾಯಿಕ, ವಿರುಪಾಕ್ಷಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.