ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಲಿ: ಈಶ್ವರಪ್ಪ

| Published : Dec 13 2024, 12:45 AM IST

ಸಾರಾಂಶ

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠೀ ಚಾರ್ಜ್‌ ಖಂಡನೆ । ಕೇರಳ ಮುಸ್ಲಿಂರಿಗಾಗಿ ರಾಜ್ಯದ ಹಣ ವಿನಿಯೋಗ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಹೋರಾಟದ ವೇಳೆ ಲಾಟಿಚಾರ್ಜ್ ಮಾಡಿದ ಘಟನೆಯಲ್ಲಿ ಪೊಲೀಸ್‌ ಇಲಾಖೆಯ ವೈಫಲ್ಯ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಲಾಠಿ ಚಾರ್ಜ್‌ ನಡೆಸಿದ್ದಕ್ಕಾಗಿ ಸರ್ಕಾರವು ತಕ್ಷಣವೇ ರಾಜ್ಯದ ಕ್ಷಮೆ ಕೋರಬೇಕು. ಪ್ರತಿಭಟನೆ ನಡೆಸಿದವರ ಮೇಲಿನ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಹೋರಾಟವನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. 15-20 ದಿನಗಳ ಮೊದಲೇ ಗೊತ್ತಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸದೆ, ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿದೆ ಎಂದು ಆರೋಪಿಸಿದರು.

ಯಾವುದೇ ಸಮಾಜ ಸರ್ಕಾರದ ಮುಂದೆ ಬೇಡಿಕೆ ಇಡುವುದು ಸ್ವಾಭಾವಿಕ. ಆದರೆ ಪ್ರತಿಭಟನೆಯನ್ನು ನಡೆಯದಂತೆ ಮಾಡಲು ಲಾಠಿ ಚಾರ್ಜ್‌ ಮಾಡಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುವುದು ಖಂಡನೀಯ. ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡುತ್ತಿರುವುದೇ ತಪ್ಪು ಎಂಬ ಭಾವನೆ ಈ ಸರ್ಕಾರ ತರುತ್ತಿರುವುದು ಸರಿಯಲ್ಲ. ಸಿಎಂ, ಡಿಸಿಎಂ, ಗೃಹ ಮಂತ್ರಿಗಳು ಮೊದಲೇ ಇವರ ಬೇಡಿಕೆಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಬಹುದಿತ್ತು ಎಂದು ಹೇಳಿದರು.

ಪ್ರತಿಭಟನೆ ಆಯೋಜನೆಗೆ ಮೊದಲೇ ಆಯೋಜಕರು ಲಕ್ಷಾಂತರ ಜನ ಟ್ಯಾಕ್ಟರ್ ನಲ್ಲಿ ಮೆರವಣಿಗೆ ಬರುವುದಾಗಿ ಹೇಳಿದ್ದರು. ಆದರೆ ಪೊಲೀಸ್‌ ಇಲಾಖೆ ಇದಕ್ಕೆ ಯಾವುದೇ ಪೂರ್ವಭಾವಿ ತಯಾರಿ ನಡೆಸಿರಲಿಲ್ಲ ಎಂದು ದೂರಿದರು.

ಸರ್ಕಾರ ತಕ್ಷಣವೇ ಲಾಠಿ ಚಾರ್ಜ್‌ ನಡೆಸಿದ್ದಕ್ಕಾಗಿ ರಾಜ್ಯದ ಕ್ಷಮೆ ಕೋರಬೇಕು. ಪ್ರತಿಭಟನೆ ನಡೆಸಿದವರ ಮೇಲಿನ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಪಡಿಸಿದರು.

ಸೋನಿಯಾ, ರಾಹುಲ್‌ ಗಾಂಧಿ ತೃಪ್ತಿಗಾಗಿ ಕೇರಳದಲ್ಲಿ ಮನೆ ನಿರ್ಮಾಣ:

ಕೇರಳದ ವೈನಾಡುವಿನಲ್ಲಿ ಸಿಎಂ ಸಿದ್ದರಾಮಯ್ಯ ಮನೆ ಕಟ್ಟಿಸಿ ಕೊಡುವ ವಿಚಾರ ಹೊಸದೇನಲ್ಲ. ಬೇರೆ ರಾಜ್ಯಕ್ಕೆ ಮುಸಲ್ಮಾನರಿಗೆ ಕಟ್ಟಿಸುವುದು ಭಿಕ್ಷೆ ಎಂತಲೂ ಅಲ್ಲ. ಕರುಣೆ ಕೂಡ ಅಲ್ಲ. ಇದೆಲ್ಲವೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ತೃಪ್ತಿಪಡಿಸಲು ಹಾಗೂ ಪ್ರಿಯಾಂಕಾ ಗಾಂಧಿ ಗೆದ್ದಿರುವುದರಿಂದ ಅಲ್ಲಿ ಹೋಗಿ ಮನೆ ಕಟ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.

ಶಿವಮೊಗ್ಗದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಸಾಕಷ್ಟು ಮನೆಗಳು ಬಿದ್ದು ಹೋಗಿವೆ. ಇವುಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಇಲ್ಲಿ ಮನೆ ಕಟ್ಟಿಸಲು ಹಣ ಇಲ್ಲ ಎನ್ನುವ ಸರ್ಕಾರವು ಅಲ್ಲಿ ಹೋಗಿ ಮನೆ ಕಟ್ಟಲು ಎಲ್ಲಿಂದ ಹಣ ತರುತ್ತದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮಳೆಯ ಹಾನಿಯಿಂದ ಸಾಕಷ್ಟು ಮನೆಗಳು ಬಿದ್ದಿದೆ. ಆ ಸಂತ್ರಸ್ಥರನ್ನು ಮುಖ್ಯಮಂತ್ರಿಗಳಾಗಲೀ, ಉಪ ಮುಖ್ಯಮಂತ್ರಿಗಳಾಗಲೀ ಇದುವರೆಗೆ ಮಾತನಾಡಿಸಿಯೇ ಇಲ್ಲ. ಕೇವಲ ರಾಹುಲ್‌ ಗಾಂಧಿಯವರನ್ನು ತೃಪ್ತಿ ಪಡೆಸುವ ಏಕೈಕ ಕಾರಣಕ್ಕೆ ಕೇರಳದ ಮುಸ್ಲಿಂರಿಗಾಗಿ ರಾಜ್ಯದ ಹಣ ವಿನಿಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು.