ಹಾಲಿನ ಪ್ರೋತ್ಸಾಹಧನದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಲಿ: ತೋಟಪ್ಪ ಕುರಡಗಿ

| Published : Jun 30 2024, 12:46 AM IST

ಹಾಲಿನ ಪ್ರೋತ್ಸಾಹಧನದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಲಿ: ತೋಟಪ್ಪ ಕುರಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಪ್ರೋತ್ಸಾಹಧನ ಬಿಡುಗಡೆ, ಬೆಲೆ ಏರಿಕೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಗದಗದಲ್ಲಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಕಳೆದ ಬಜೆಟ್‌ನಲ್ಲಿ ಹಾಲಿನ ಪ್ರೋತ್ಸಾಹಧನಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಪಶುಪಾಲನಾ ಇಲಾಖೆ ಇತರ ಖರ್ಚು-ವೆಚ್ಚಗಳಿಗೆ ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರಡಗಿ ಆಗ್ರಹಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ಪ್ರೋತ್ಸಾಹಧನ ಬಿಡುಗಡೆ, ಬೆಲೆ ಏರಿಕೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬಾಕಿ ಉಳಿದಿರುವ 8 ತಿಂಗಳ ಹಣವನ್ನು ಯಾವಾಗ ಕೊಡುತ್ತಾರೆ ಎಂದು ರೈತರು ಪ್ರಶ್ನಿಸಿದರೆ, ಹಾಲು ಒಕ್ಕೂಟದ ಅಧಿಕಾರಿಗಳು ಸಹಕಾರಿ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಸಹಕಾರ ಇಲಾಖೆಯವರು ಆರ್ಥಿಕ ಇಲಾಖೆ ಮೇಲೆ ಬೊಟ್ಟು ಮಾಡುತ್ತಾರೆ. ಈ ಗೊಂದಲದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ವಕ್ಕರ, ಅಶೋಕ ಕರೂರ ಮಾತನಾಡಿ, ಹಾಲಿನ ಪ್ರೋತ್ಸಾಹಧನವೂ ಇಲ್ಲ. ಬರ ಪರಿಹಾರದ ಹಣವೂ ಇಲ್ಲ. ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಭೂ ಸಿರಿ ಯೋಜನೆ ಸ್ಥಗಿತಗೊಳಿಸಲಾಗಿದೆ. ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಲಾಗಿದೆ. ದುಪ್ಪಟ್ಟು ಹಣ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ನೀಡುವಂತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಮುದ್ರಾಂಕ ದರ ಏರಿಸಿದೆ. ಆಸ್ತಿ ನೋಂದಣಿ ಶೇ. 30ರಷ್ಟು ಹೆಚ್ಚಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಯಾಕೆ ಪ್ರಾರಂಭಿಸಿಲ್ಲ? 824 ರೈತರ ಆತ್ಮಹತ್ಯೆಗೆ ಕಾರಣಗಳೇನು? ಮತ್ತು ರೈತರಿಗೆ ಅತ್ಯಂತ ನಿಕಟವಾಗಿರುವ ಇಲಾಖೆ ಕಂದಾಯ ಇಲಾಖೆ, ಆ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ಬಿಜೆಪಿ 40 ಪರ್ಸೆಂಟ್‌ ಸರ್ಕಾರ ಎಂದಿದ್ದ ಕಾಂಗ್ರೆಸ್ ಈಗ ಅದೇ ಆರೋಪ ಎದುರಿಸುತ್ತಿದೆ. ನ್ಯಾ. ನಾಗಮೊಹನ್‌ದಾಸ್ ಆಯೋಗ ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಬೆಲೆ ಏರಿಕೆಯನ್ನು ಬಳುವಳಿಯಾಗಿ ಕೊಟ್ಟ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಸೇರಿದಂತೆ ಪಶು ಆಹಾರಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ₹500 ಹೆಚ್ಚಿಸಿದೆ. ಹಾಲಿನ ದರವನ್ನು ₹4ರಷ್ಟು ಏರಿಸಿ ಆ ಹಣವನ್ನು ರೈತರಿಗೆ ತಲುಪಿಸಲಾಗುವುದು ಎಂದು ಹೇಳಿಕೆ ಕೊಟ್ಟು, ಏಕೆ ರೈತರಿಗೆ ತಲುಪಿಸಿಲ್ಲ? ಮತ್ತೆ ಈಗ ಅದೇ ಕಾರಣವನ್ನು ನೀಡಿ ₹2 ಹೆಚ್ಚಿಸಲಾಗಿದೆ. ಒಟ್ಟು ಈ ₹6ಗಳನ್ನು ಯಾವಾಗ ರೈತರಿಗೆ ನೀಡುತ್ತೀರಾ? ಇಷ್ಟೆಲ್ಲ ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗಳಿದ್ದು, ಇಂತಹ ಸರ್ಕಾರ ಅಧಿಕಾರದಲ್ಲಿರಬಾರದು. ರಾಜ್ಯಪಾಲರು ಈ ಕುರಿತು ಕ್ರಮ ಕೈಗೊಂಡು ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಶ್ರೀಪತಿ ಉಡುಪಿ, ಬಿ.ಎಸ್. ಚಿಂಚಲಿ, ಅಶೋಕ ಸಂಕಣ್ಣವರ, ಸಿದ್ದಪ್ಪ ಈರಗಾರ, ಶಂಕರ ಕರಿಬಿಷ್ಠಿ, ಫಕೀರೇಶ ರಟ್ಟಿಹಳ್ಳಿ, ಶಿವಪ್ಪ ಮುಳ್ಳಾಳ, ಪ್ರಭು ಕಲ್ಲಬಂಡಿ, ಗುರುಶಾಂತಗೌಡ ಮರಿಗೌಡ್ರ, ಸಂತೋಷ ಅಕ್ಕಿ, ಮಹೇಶ ಶಿರಹಟ್ಟಿ, ಸುಧೀರ ಕಾಟಿಗರ, ಗಂಗಾಧರ ಹಬೀಬ, ದೇವಪ್ಪ ಗೊಟೂರ, ವಿಶ್ವನಾಥ ಟೆಂಗಿನಕಾಯಿ, ಸುರೇಶ ಮರಳಪ್ಪನವರ, ಸುರೇಶ ಚಿತ್ತರಗಿ, ಸಿದ್ರಾಮೇಶ ಹಿರೇಮಠ, ಮುತ್ತಣ್ಣ ಮೂಲಿಮನಿ, ವಿಜಯ ಕುರ್ತಕೋಟಿ, ಶಾಂತಯ್ಯ ಮುತ್ತನಪೆಂಡಿಮಠ, ಇರ್ಷಾದ ಮಾನ್ವಿ, ಚನ್ನಮ್ಮ ಹುಳಕಣ್ಣವರ, ವಿಶ್ವನಾಥ ಶಿರಿಗಣ್ಣವರ, ರವಿ ಸಿದ್ಲಿಂಗ, ಕಮಲಾಕ್ಷಿ ಅಂಗಡಿ, ಶಿವಾಜಿ ಚವ್ಹಾಣ ಹಾಗೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.