ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸಂತ ಸೇವಾಲಾಲರ 286ನೇ ಜಯಂತಿಯನ್ನು ನಾವು ಆಚರಿಸುತ್ತಿರುವ ಈ ಸಂದರ್ಭದಲ್ಲೂ ಬಂಜಾರ ಸಮುದಾಯ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಜೀವನಕ್ಕಾಗಿ ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಬಂಜಾರ ನೌಕರರ ಸಂಘದ ಅದ್ಯಕ್ಷ ಶಾಂತರಾಜು ಲಮಾಣಿ ಹೇಳಿದರು.ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 286ನೇ ಸಂತ ಶ್ರೀ ಸೇವಾಲಾಲ್ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಂತ ಸೇವಾಲಾಲರು ವಿದ್ಯೆ, ಪ್ರಾಣಿ ಸಾಕಾಣಿಕೆ ಭವಿಷ್ಯದಲ್ಲಿ ಬರುವ ದಿನಗಳ ಕುರಿತು ಮುಂಚೆಯೇ ಅರಿವು ಮೂಡಿಸುವಲ್ಲಿ ಜಾಗೃತಿ ಮೂಡಿಸಿದ್ದರು. ಮದ್ಯಪಾನ, ಧೂಮಪಾನದ ವ್ಯಸನದಿಂದ ಹೊರಬರಬೇಕು, ಹೆಣ್ಣ ಮಕ್ಕಳ ಗೌರವ ಕಾಪಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂಬ ಸಂದೇಶ ಸಾರಿದ್ದಾರೆ ಎಂದರು.
ಸಮಾಜದ ಮುಖಂಡರು ಕೂಲಿಗಾಗಿ ವಲಸೆ ತೆರಳುತ್ತಿದ್ದ ವೇಳೆ ಹಾವು ಕಚ್ಚಿ ಕೂಲಿಕಾರರ ಮಕ್ಕಳು ಸಾವಿಗೀಡಾಗಿರುವ ಅನೇಕ ಪ್ರಕರಣಗಳಿದ್ದು ಇತ್ತೀಚೆಗೆ ಕೊಳ್ಳೇಗಾಲ ತಾಲೂಕಿನಲ್ಲಿ ಪುಟ್ಟ ಮಗು ಸಾವಿಗೀಡಾಗಿದೆ. ವಿಷದ ಬೀಜ ಸೇವಿಸಿ ಕೆಲ ಮಕ್ಕಳು ಅಸ್ವಸ್ಥರಾದ ಪ್ರಕರಣವಿದ್ದು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಸಂಬಂಧ ಗಮನಹರಿಸಿ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸುವಂತಾಗಬೇಕು ಎಂದರು.ಬಂಜಾರರು ಸೌಮ್ಯ ಸ್ವಭಾವಿಗಳು: ತಾಪಂ ಇಒ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಮಾತನಾಡಿ, ಬಂಜಾರ ಸಮಾಜ ಶ್ರಮಿಜೀವಿಗಳು, ಸೌಮ್ಯವಾದಿಗಳು, ತಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಾಯಕ ಜೀವಿಗಳು, ಸೇವಾಲಾಲ್ ಜಯಂತಿ ಆಚರಣೆ ಈ ಸಂದರ್ಭದಲ್ಲಿ ಸಂತರ ತತ್ವಾದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು, ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಶೈಕ್ಷಣಿಕ ಪ್ರಗತಿಗೆ ಸ್ಪಂದಿಸಬೇಕು ಎಂದರು. ಬಂಜಾರ ಭಾಷೆಗೆ ಸಂವಿಧಾನ ಮಾನ್ಯತೆ ಅಗತ್ಯ: ಕುಮಾರನಾಯ್ಕ
ರಾಮಪುರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಕುಮಾರನಾಯ್ಕ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಬಂಜಾರ ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ ಸಿಗಬೇಕಾಗಿದೆ ಎಂದು ಪ್ರತಿಪಾದಿಸಿದರು. ಸೇವಾಲಾಲರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗೋಣ. ಸರ್ಕಾರಗಳು ಬಂಜಾರರ ತಾಂಡಾಗಳ ಪ್ರಗತಿಗೆ ಸ್ಪಂದಿಸುವಂತಾಗಬೇಕು ಎಂದರು. ಈ ವೇಳೆ ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ರಾಜೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ನಟರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವರಾಜು, ಡಾ.ಉಮಾಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿವಲೀಲಾ, ಅಬಕಾರಿ ಉಪನೀರಿಕ್ಷಕ ಸಿದ್ದಯ್ಯ, ಕಂದಾಯ ಇಲಾಖೆ ಶಿರೆಸ್ತೇದಾರ್ ಕೃಪಾಕಾರ್, ಲಂಬಾಣಿ ಜನಾಂಗದ ನಾಗರಾಜು ಮಹದೇವು.ಕೆ, ಗುರುಸ್ವಾಮಿ, ತುಳಿಸಿಯನ್, ಪ್ರಮಿಳಾಬಾಯಿ, ಮುನಿಯನಾಯ್ಕ, ರಾಜಿಲಿಬಾಯಿ, ಮಹದೇವ ಇನ್ನಿತರರಿದ್ದರು.