ಕಾಯಕದ ಅರಿವು ಮೂಡಿಸುವ ಕಾರ್ಯ ಸರ್ಕಾರ ಮಾಡಲಿ: ಮಾಜಿ ಸಚಿವ ಎಸ್.ಎಸ್. ಪಾಟೀಲ

| Published : Feb 12 2024, 01:32 AM IST

ಕಾಯಕದ ಅರಿವು ಮೂಡಿಸುವ ಕಾರ್ಯ ಸರ್ಕಾರ ಮಾಡಲಿ: ಮಾಜಿ ಸಚಿವ ಎಸ್.ಎಸ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಗಳು ಜನರಿಗೆ ಪುಕ್ಕಟೆ ಸೌಲಭ್ಯಗಳ ರುಚಿ ತೋರಿಸದೇ ಕಾಯಕದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಾವೇರಿ

ಸರ್ಕಾರಗಳು ಜನರಿಗೆ ಪುಕ್ಕಟೆ ಸೌಲಭ್ಯಗಳ ರುಚಿ ತೋರಿಸದೇ ಕಾಯಕದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಸ್ಥಳೀಯ ಉದಯ ನಗರದ ಶ್ರೀ ಭಕ್ತಿ ಭಂಡಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಕಚುಸಾಪ ಜಿಲ್ಲಾ ಘಟಕ, ಶಾಲಾ ಆಡಳಿತ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಶಾಲಾ ಗ್ರಂಥಾಲಯಕ್ಕೆ ಸಾಹಿತ್ಯ ಪುಸ್ತಕಗಳ ದಾನ, ಸಾಮರಸ್ಯ ಕವಿಗೋಷ್ಠಿ ಹಾಗೂ ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಗೌರವಿಸಿದ ರಾಜ್ಯ ಸರ್ಕಾರ ಬಸವ ತತ್ವದ ಕಾಯಕ ನಿಷ್ಠೆಯನ್ನು ಕಡೆಗಣಿಸಬಾರದು. ಮಕ್ಕಳಿಗೆ ಚುಟುಕು ಹಾಗೂ ವಚನ ಸಾಹಿತ್ಯ ಅರಿವು ಮೂಡಿಸುವ ಕಾರ್ಯವನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದ್ದು, ಅದರ ನಾಯಕತ್ವ ವಹಿಸಿದ ಕೃಷ್ಣಮೂರ್ತಿ ಕುಲಕರ್ಣಿ ಅವರಿಗೆ ಅಖಂಡ ಧಾರವಾಡ ಜಿಲ್ಲಾ ಸಾಹಿತ್ಯ ಮಿತ್ರರು, ಕಚುಸಾಪ ಜಿಲ್ಲಾ ಘಟಕ ಮತ್ತು ಭಕ್ತಿ ಭಂಡಾರಿ ಶಾಲೆಯವರು ಅಭಿನಂದನಾ ಕಾರ್ಯಕ್ರಮ ರೂಪಿಸಿದ್ದು ಸ್ವಾಗತಾರ್ಹ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಕಚುಸಾಪ ರಾಜ್ಯದ ಕೊಳಗೇರಿ ಕನ್ನಡ ಶಾಲೆಗಳು, ಕಾರಾಗೃಹಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಡುಗೆ ನೀಡುವ ಮಹತ್ತರ ಯೋಜನೆ ಹಾಕಿಕೊಂಡಿದ್ದು, ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕ ಶಾಲೆಗಳಿಗೆ ವಿತರಿಸಲಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಶಾಲಾ ಸಮಿತಿ ಅಧ್ಯಕ್ಷ ಆನಂದಗೌಡ ಪಾಟೀಲ, ಕಚುಸಾಪ ಜಿಲ್ಲಾಧ್ಯಕ್ಷ ವಿರೂಪಾಕ್ಷ ಲಮಾಣಿ, ಬಿಜೆಪಿ ಯುವ ಮುಖಂಡ ಸುರೇಶ ಹೊಸಮನಿ, ಬೆಂಗಳೂರು ಗ್ರಾಮಾಂತರ ಘಟಕ ಅಧ್ಯಕ್ಷ ಶ್ರೀಕಾಂತ ಕೆ.ವಿ. ಮುಖ್ಯ ಶಿಕ್ಷಕ ಸಿ.ಎಂ. ಸಣ್ಣೀರಪ್ಪನವರ ಮಾತನಾಡಿದರು.

ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸೋಮರೆಡ್ಡಿ ಹಳ್ಳೆಪ್ಪನವರ ಸ್ವಾಗತಿಸಿದರು. ಅಖಂಡ ಧಾರವಾಡ ಜಿಲ್ಲಾಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ ನಿರೂಪಿಸಿದರು. ಶಿಕ್ಷಕ ವೈ.ಎಫ್. ಲಿಂಗನಗೌಡ್ರ ವಂದಿಸಿದರು.

ಸಾಮರಸ್ಯ ಕವಿಗೋಷ್ಠಿ:

ಸಾವಿರ ವಚನಗಳ ಸರದಾರ ಶೇಖರಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮರಸ್ಯ ಕವಿಗೋಷ್ಠಿಯಲ್ಲಿ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಆಶಯ ಭಾಷಣ ಮಾಡಿದರು. ವಿಕಾಸ ಹಿರೇಮಠ ಅತಿಥಿಗಳಾಗಿದ್ದರು. ಇಪ್ಪತ್ತಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಹಾನಗಲ್ಲ ಘಟಕದ ಅಧ್ಯಕ್ಷ ರವಿರಾಜ ತಿರುಮಲೆ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಗೌರಿಮಠದ ಶ್ರೀ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ, ಪತ್ರಕರ್ತ ಸಿದ್ದು ಆರ್.ಜಿ. ಅವರನ್ನು ಸನ್ಮಾನಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪಾಲಕರು, ಧಾರವಾಡದ ಅನಿಲ ಅಂಗಡಿ ಪಾಲ್ಗೊಂಡಿದ್ದರು. ಹನುಮಂತಪ್ಪ ಲಮಾಣಿ, ಎ.ಎ. ಮುಲ್ಲಾ, ಚಿತ್ರಾ ಬೇವಿರಮರದ, ಲಕ್ಷ್ಮೀ ಕನಕೆ, ನವ್ಯಾ ಜಂಗಿನಮಠ ಮುಂತಾದವರು ಇದ್ದರು.