ಸಾರಾಂಶ
ಹಾವೇರಿ: ಶಿಕ್ಷಣ ನೀತಿಯು ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಸಾಧನವಾಗಬೇಕು. ಶೈಕ್ಷಣಿಕ ಸಮಾನತೆಯೇ ಶಿಕ್ಷಣ ನೀತಿಯ ಆದ್ಯತೆಯಾಗಬೇಕು. ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆಯು ಸರ್ಕಾರದ ಗ್ಯಾರಂಟಿಗಳ ಪಟ್ಟಿಗೆ ಸೇರಬೇಕು ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ತಿಳಿಸಿದರು.ತಾಲೂಕಿನ ಹೊಂಬರಡಿ ಗ್ರಾಮದಲ್ಲಿ ಗಾಂಧಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು ಘಟಕ 2 ವಾರ್ಷಿಕ ವಿಶೇಷ ಶಿಬಿರದಲ್ಲಿ ಸಮಕಾಲಿನ ಶಿಕ್ಷಣ ಅವಕಾಶಗಳು ಮತ್ತು ಸವಾಲುಗಳು ಕುರಿತು ಮಾತನಾಡಿದರು.ಗುಣಮಟ್ಟದ ಸಾರ್ವತ್ರಿಕ ಶಿಕ್ಷಣ ಜವಾಬ್ದಾರಿಯುತ ನಾಗರಿಕರ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ನಿಜವಾದ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ರಾಜಕಾರಣ, ಒಂದರ ಹುಟ್ಟುಗುಣ ಕಾರಣವಾಗುತ್ತದೆ. ಆರ್ಥಿಕ ಬೆಳವಣಿಗೆಗೆ ಸಂಪತ್ತಿನ ಅಭಿವೃದ್ಧಿಗಳನ್ನು ಮಾತ್ರ ಸಮಾಜದ ಪ್ರಗತಿಯ ಮಾನದಂಡಗಳನ್ನಾಗಿ ಗುರುತಿಸದೆ, ಮಾನವೀಯ ಮೌಲ್ಯಗಳನ್ನು ಹೊಂದಿದ ಹೃದಯವಂತ ನಾಗರಿಕರನ್ನು ಸೃಷ್ಟಿಸುವ ಶಿಕ್ಷಣ ಕ್ಷೇತ್ರದ ಸ್ವರೂಪವನ್ನು ಅಭಿವೃದ್ಧಿಯ ಮಾನದಂಡವಾಗಿ ಪರಿಗಣಿಸಬೇಕಿದೆ. ಒಂದು ದೇಶದ ಶೈಕ್ಷಣಿಕ ಕ್ಷೇತ್ರದ ಸ್ಥಿತಿಗತಿಯ ಮೇಲೆ ಅದರ ಭವಿಷ್ಯ ನಿಂತಿದೆ. ಶಿಕ್ಷಣದ ಗುಣಮಟ್ಟ ಕುಸಿತವೇ ರಾಷ್ಟ್ರವೊಂದರ ನೈಜ ಕುಸಿತ. ದೇಶದ ಬಡತನಕ್ಕೆ ಮದ್ದು ಎಂದರೆ ಶಿಕ್ಷಣ ಮತ್ತು ದುಡಿಮೆ ಎಂದರು. ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಸಿ.ಎಸ್. ಕುಮಾರ್ ಮಾತನಾಡಿ, ನಮ್ಮ ಯುವ ಜನಾಂಗದ ಮನಸ್ಥಿತಿ ಬದಲಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಮೂಢನಂಬಿಕೆ, ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು. ರಾಷ್ಟ್ರೀಯ ಸೇವಾ ಯೋಜನೆ ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಗರಸಭೆ ಸದಸ್ಯ ಬಸವರಾಜ್ ಬೆಳವಡಿ ಮಾತನಾಡಿ, ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿವೆ. ವಿದ್ಯಾವಂತ ಯುವಕರು ಕೃಷಿಗೆ ಮುಂದಾಗಬೇಕು ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮನಗೌಡ ಬೇವಿನಮರದ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ರತಿಭಾ ಅನ್ವೇಷಣೆ ಶಿಷ್ಯವೇತನಕ್ಕೆ ಆಯ್ಕೆಯಾಗಿರುವ ನಿಂಗನಗೌಡ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಮಾದೇವಪ್ಪ ಬಿಷ್ಟಕನವರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಎಣ್ಣೆ, ಶರಣಬಸನಗೌಡ ಚನ್ನಗೌಡ್ರ, ಸುಭಾಷ್ ಗುತ್ತಣ್ಣನವರ, ಗುದ್ಲೆಪ್ಪ ಶಿವನಗೌಡ್ರ, ಗೋಪಾಲಗೌಡ, ಡಾ. ಉಮಾ ತಿಪ್ಪನಗೌಡ್ರ, ರಾಜು, ಸಂತೋಷ್, ಶಿಬಿರಾಧಿಕಾರಿಗಳಾದ ಶಂಕರ ಹಂಗನಕಟ್ಟಿ, ಮಲ್ಲಿಕಾರ್ಜುನ ಜಿ.ಎಂ. ಇತರರು ಇದ್ದರು. ರಂಜಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದಾನೇಶ್ವರಿ ಸ್ವಾಗತಿಸಿದರು. ಶ್ರೀಪಾದ್ ವರದಿ ವಾಚನೆ ಮಾಡಿದರು. ಅಕ್ಷತಾ ನಿರೂಪಿಸಿದರು. ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮೇ 5, 6ರಂದು ಕ್ರೀಡಾಪಟುಗಳ ಆಯ್ಕೆಹಾವೇರಿ: ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯ ಉತ್ಕೃಷ್ಟತಾ ಕೇಂದ್ರಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಮೇ 5 ಮತ್ತು 6ರಂದು ಬೆಂಗಳೂರು ನಗರದ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರದಲ್ಲಿ ಜರುಗಲಿದೆ.
ಕ್ರೀಡಾಪಟುಗಳು 2025ರ ಜು. 1ಕ್ಕೆ 15 ವರ್ಷ ಮೇಲ್ಪಟ್ಟವರಾಗಿದ್ದು, 21 ವರ್ಷ ವರ್ಷದೊಳಗಿರಬೇಕು. ಪ್ರಸಕ್ತ 2024- 25ನೇ ಸಾಲಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡಿದ ಹಾಗೂ ಶೈಕ್ಷಣಿಕ ವರ್ಷ 2025- 26ನೇ ಸಾಲಿನ ಪ್ರಥಮ ಪದವಿಪೂರ್ವ ಕೋರ್ಸ್ ಪ್ರವೇಶಕ್ಕೆ ಅರ್ಹರಾಗಿರಬೇಕು.ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ದೂ. 08375- 232443 ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.