ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ನೆರವಾಗಲಿ: ನ್ಯಾಯಾಧೀಶ ನಟರಾಜು

| Published : Oct 28 2024, 12:56 AM IST

ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ನೆರವಾಗಲಿ: ನ್ಯಾಯಾಧೀಶ ನಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಲ್ಲದೆ ದೇಶವಿಲ್ಲ, ಇಂದು ಸಂಕಷ್ಟದಲ್ಲಿರುವ ರೈತ ಬಳಗವನ್ನು ಉಳಿಸಬೇಕು, ಆವರಲ್ಲಿ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ರೈತರ ವಿಚಾರದಲ್ಲಿ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಅವರಿಗೆ ಅನುಕೂಲವಾಗುವ ಎಲ್ಲ ರೀತಿಯ ಸಹಾಯ ಮಾಡಲು ಅಧಿಕಾರಿಗಳು ಕಾಳಜಿ ವಹಿಸಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ರೈತರು ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಇಂದು ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳನ್ನು ಗುರುತಿಸಿ ನಿವಾರಣೆ ಮಾಡಿ ರೈತರನ್ನು ಬಲವರ್ಧನೆ ಮಾಡುವ ಕೆಲಸ ಸರ್ಕಾರದಿಂದ ಅತ್ಯಗತ್ಯವಾಗಿ ಆಗಬೇಕಾಗಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಆರ್.ನಟರಾಜು ಹೇಳಿದರು.

ತಾಲೂಕಿನ ಊರ್ಡಿಗೆರೆ ಬಳಿ ದೇವರಾಯನದುರ್ಗದಲ್ಲಿ ಕರ್ನಾಟಕ ಪ್ರಗತಿಪರ ರೈತರು ಹಾಗೂ ದೇವರಾಯನದುರ್ಗ ಜೀವ- ವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ರೈತರಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಜೊತೆಗೆ ರೈತ, ಪರಿಸರ ರಕ್ಷಣೆಯ ಕಾಳಜಿಯ ಸಂಘ- ಸಂಸ್ಥೆಗಳು ರೈತರ ನೆರವಿಗೆ ಬರಬೇಕು, ಅವರ ಸಮಸ್ಯೆ ನಿವಾರಣೆಗೆ ಕೈ ಜೋಡಿಸಬೇಕು, ಈ ನಿಟ್ಟಿನಲ್ಲಿ ಈ ಸಮಿತಿಯ ಆಶಯ ಆದರ್ಶವಾಗಿದೆ ಎಂದು ಹೇಳಿದರು.

ಯಾವುದೇ ಉದ್ಯೋಗದಲ್ಲಿರುವವರಿಗೆ ದಿನದ ಎಂಟು ಗಂಟೆ ದುಡಿದರೆ ಕನಿಷ್ಠ ಸಂಬಳವಿರುತ್ತದೆ. ಆದರೆ ದಿನವಿಡೀ ದುಡಿಯುವ ರೈತನಿಗೆ ನಿರ್ದಿಷ್ಟ ಆದಾಯ ಇರುವುದಿಲ್ಲ, ಉತ್ತಿ, ಬಿತ್ತಿ, ಬೆಳೆದು ತೆಗೆದ ಫಸಲಿಗೆ ಉತ್ತಮ ಬೆಲೆ ಸಿಕ್ಕರೆ ರೈತರ ಶ್ರಮ ಸಾರ್ಥಕವಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ವ್ಯವಸಾಯ ಲಾಭದಾಯಕವಾಗಿಲ್ಲ, ಹೀಗಾಗಿ ಈಗಿನ ಯುವಕರು ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ ಎಂದರು.

ರೈತರಿಗೆ ಬಿತ್ತನೆ ಬೀಜ, ನೀರು, ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿದರೆ ರೈತರು ಉಳಿಯಲು ಸಾಧ್ಯ. ಈ ಬಗ್ಗೆ ಸರ್ಕಾರ ಗಮನಹರಿಸಿ ವ್ಯವಸಾಯ ರೈತರಿಗೆ ಲಾಭದಾಯಕವಾಗುವ ರೀತಿಯ ಕಾರ್ಯಕ್ರಮ ರೂಪಿಸಬೇಕು ಹಾಗೂ ಸರ್ಕಾರಿ ಇಲಾಖೆಗಳು ರೈತರ ಬಗ್ಗೆ ಕಾಳಜಿಯಿಂದ ಅವರಿಗೆ ನೆರವಾಗಬೇಕು ಎಂದು ನ್ಯಾಯಾಧೀಶರು ಸಲಹೆ ಮಾಡಿದರು.

ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ಪರಿಸರ ಸಂರಕ್ಷಣೆ, ರೈತರ ಧ್ವನಿಯಾಗಿ ನಿಂತಿರುವ ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯಕ್ ಅವರು ಸಂಘಟಿಸಿರುವ ಸಮಿತಿಯ ಕಾರ್ಯ ಯಶಸ್ವಿಯಾಗಲಿ, ಇವರಿಗೆ ರೈತರ ಸಂಪೂರ್ಣ ಬೆಂಬಲ ದೊರೆಯುತ್ತದೆ. ರೈತರು ಹಾಗೂ ಪರಿಸರ ರಕ್ಷಣೆಯ ಸಮಿತಿಯ ಕಾರ್ಯದಲ್ಲಿ ತಾವೂ ಬೆಂಬಲವಾಗಿರುವುದಾಗಿ ಹೇಳಿದರು.

ಪ್ರಕೃತಿ ನೀಡಿರುವ ಅರಣ್ಯ ಸಂಪತ್ತನ್ನು ನಾವು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕು. ಅರಣ್ಯವಿದ್ದರೆ ಮಳೆ, ಬೆಳೆ ಸಾಧ್ಯ. ಮನುಷ್ಯರಂತೆ ಪ್ರಾಣಿಪಕ್ಷಿಗಳೂ ಬದುಕಲು ಅರಣ್ಯವನ್ನು ರಕ್ಷಿಸಬೇಕು, ಎಲ್ಲಾ ಜೀವವೈವಿಧ್ಯತೆಗಳನ್ನು ಉಳಿಸಿಕೊಂಡು ನಾವೂ ಉಳಿಯಬೇಕು. ಆಗಲೇ ಪ್ರಕೃತಿಯ ಸಮತೋಲನ ಸಾಧ್ಯ ಎಂದರು.

ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ರೈತರಿಲ್ಲದೆ ದೇಶವಿಲ್ಲ, ಇಂದು ಸಂಕಷ್ಟದಲ್ಲಿರುವ ರೈತ ಬಳಗವನ್ನು ಉಳಿಸಬೇಕು, ಆವರಲ್ಲಿ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ರೈತರ ವಿಚಾರದಲ್ಲಿ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಅವರಿಗೆ ಅನುಕೂಲವಾಗುವ ಎಲ್ಲ ರೀತಿಯ ಸಹಾಯ ಮಾಡಲು ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಹೇಳಿದರು.

ಚುನಾಯಿತ ಪ್ರತಿನಿಧಿಗಳು ಮೊದಲು ತಮ್ಮ ಕ್ಷೇತ್ರದ ಬಡವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಬೇಕು. ರೈತರಿಗೆ ಮೋಸ ಆಗುವುದನ್ನು ತಡೆಯಲು ಪ್ರಯತ್ನಿಸಬೇಕು, ಅವರ ಕೃಷಿ ಚಟುವಟಿಕೆಗೆ ಅಗತ್ಯ ಸಹಾಯ ಮಾಡಲು ಮುಂದಾಗಬೇಕು ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ರೈತರು ಹಾಗೂ ಪರಿಸರ ರಕ್ಷಣೆಗೆ ಸಂಘ- ಸಂಸ್ಥೆಗಳು ಮುಂದೆ ಬರಬೇಕು. ಪರಿಸರ ನಾಶವಾಗದಂತೆ ತಡೆಯಬೇಕು. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅಪರೂಪದ ವನ್ಯಜೀವಿಗಳಿವೆ. ಅವುಗಳ ರಕ್ಷಣೆ ಆಗಬೇಕು ಎಂದರು.

ಕರ್ನಾಟಕ ಪ್ರಗತಿಪರ ರೈತರು ಹಾಗೂ ದೇವರಾಯನದುರ್ಗ ಜೀವ-ವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ಸಂಸ್ಥಾಪಕರೂ ಆದ ಹೈಕೋರ್ಟ್ ವಕೀಲ ಎಲ್. ರಮೇಶ್ ನಾಯಕ್ ಮಾತನಾಡಿ, ಗ್ರಾಮಗಳ ಸಮಸ್ಯೆಯನ್ನು ಗ್ರಾಮ ಮಟ್ಟದಲ್ಲೇ ಬಗೆಹರಿಸಿಕೊಳ್ಳುವ ಪ್ರಯತ್ನಗಳಾಗಬೇಕು. ಟ್ರಾನ್ಸ್ಫಾರ್ಮರ್ ಅಳವಡಿಕೆಯಂತಹ ಕೆಲಸಗಳಿಗೂ ರೈತರು ನಗರದ ಕಚೇರಿಗೆ ಅಲೆಯುವುದು ತಪ್ಪಬೇಕು, ಅಧಿಕಾರಿಗಳು ರೈತರ ಕೆಲಸ- ಕಾರ್ಯಗಳನ್ನು ವಿಳಂಬ ಮಾಡದೇ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಸಮಿತಿ ರೈತರಿಗೆ ಬೆಂಬಲವಾಗಿ ನಿಂತಿದೆ ಎಂದು ಹೇಳಿದರು.

ಹೈಕೋರ್ಟ್ ನ ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್ ಆರ್.ಸುಬ್ರಹ್ಮಣ್ಯ, ಬಿಜೆಪಿ ಮುಖಂಡ ಲಕ್ಷ್ಮೀಶ, ಸಮಿತಿ ಅಧ್ಯಕ್ಷ ಬಂಡಿಹಳ್ಳಿ ರವೀಂದ್ರಕುಮಾರ್, ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿ, ಪುಟ್ಟರಾಜು ಮೊದಲಾದವರು ಭಾಗವಹಿಸಿದ್ದರು.