ಸರ್ಕಾರ ರೈತರ ಸಂಕಷ್ಟ ಆಲಿಸಲಿ

| Published : Sep 24 2025, 01:01 AM IST

ಸಾರಾಂಶ

ತಾಲೂಕಿನಲ್ಲಿ ಬೆಳೆವಿಮೆಯಲ್ಲಿ ರೈತರಿಗೆ ಸಿಗಬೇಕಾದ ಬೆಳೆವಿಮೆ ಪರಿಹಾರದಲ್ಲಿ ದಲ್ಲಾಳಿಗಳ ಹಾವಳಿಯಿಂದ ಹಾನಿಗೊಳಗಾದ ನೈಜ ರೈತರಿಗೆ ಬೆಳೆವಿಮೆ ಪರಿಹಾರ ದೊರಕದೇ ಅನ್ಯಾಯ ಮಾಡಲಾಗುತ್ತಿದೆ. ತಾಲೂಕಿನ ಶಾಸಕರು ಇಲ್ಲಿಯ ವರೆಗೂ ಸದನದಲ್ಲಿ ರೈತರ ಪರ ಧ್ವನಿ ಎತ್ತಲು ವಿಫಲವಾಗಿದ್ದಾರೆ.

ಕುಕನೂರ: ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ತಾಲೂಕಿನಲ್ಲಿ ಬೆಳೆ ವಿಮೆಯಲ್ಲಿ ಆಗುತ್ತಿರುವ ಅನ್ಯಾಯ, ಬೆಂಬಲ ಬೆಲೆ ನೀತಿ ಖಂಡಿಸಿ, ಎಪಿಎಂಸಿಯಲ್ಲಿ ಟೆಂಡರ್ ಕರೆಯುವುದು ಹಾಗೂ ಬೆಳೆ ಪರಿಹಾರ ನೀಡಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಮಂಗಳವಾರ ನೂರಾರು ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ದೇವಪ್ಪ ಸೋಬಾನದ್ ಮಾತನಾಡಿ, ಪ್ರತಿವರ್ಷ ಸರ್ಕಾರ ಮುಂಗಾರಿನಲ್ಲಿ ರೈತರು ಹೆಸರು ಬೆಳೆ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಸರ್ಕಾರ ಕಟಾವು ಆರಂಭಕ್ಕೂ ಮೊದಲು ಬೆಂಬಲ ಬೆಲೆ ಕೇಂದ್ರವನ್ನು ಪ್ರಾರಂಭಿಸಬೇಕಿತ್ತು. ಆದರೆ, ಎಲ್ಲ ರೈತರು ಬೆಳೆಗಳನ್ನು ವರ್ತಕರಿಗೆ ನೀಡಿದ ಬಳಿಕ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಬೆಳೆವಿಮೆಯಲ್ಲಿ ರೈತರಿಗೆ ಸಿಗಬೇಕಾದ ಬೆಳೆವಿಮೆ ಪರಿಹಾರದಲ್ಲಿ ದಲ್ಲಾಳಿಗಳ ಹಾವಳಿಯಿಂದ ಹಾನಿಗೊಳಗಾದ ನೈಜ ರೈತರಿಗೆ ಬೆಳೆವಿಮೆ ಪರಿಹಾರ ದೊರಕದೇ ಅನ್ಯಾಯ ಮಾಡಲಾಗುತ್ತಿದೆ. ತಾಲೂಕಿನ ಶಾಸಕರು ಇಲ್ಲಿಯ ವರೆಗೂ ಸದನದಲ್ಲಿ ರೈತರ ಪರ ಧ್ವನಿ ಎತ್ತಲು ವಿಫಲವಾಗಿದ್ದಾರೆ. ಇವರು ಕಳೆದ 40 ವರ್ಷಗಳಿಂದ ರೈತರಿಗಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ರೈತ ಸಂಫದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ ಮಾತನಾಡಿ, ಎಪಿಎಂಸಿಯಲ್ಲಿ ಎಲ್ಲ ವರ್ತಕರು ವ್ಯಾಪಾರ ಮಾಡಬೇಕು. ಮಾಡದೆ ಇರುವಂತಹ ವರ್ತಕರ ಲೈಸನ್ಸ್ ರದ್ದು ಮಾಡಬೇಕು. ಎಪಿಎಂಸಿ ಅಧಿಕಾರಿಗಳು ಕಡ್ಡಾಯವಾಗಿ ಟೆಂಡರ್ ಪ್ರಕ್ರಿಯನ್ನು ಪ್ರಾರಂಭಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಪಿಎಂಸಿಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ಎಪಿಎಂಸಿಯ ಕಾರ್ಯದರ್ಶಿ ಗುರುಸ್ವಾಮಿ ಗುಡಿ, ಗ್ರೇಡ್-2 ತಹಸೀಲ್ದಾರ್ ಮುರುಳಿಧರ್ ಕುಲಕರ್ಣಿ ಮತ್ತು ಪಿಎಸ್‌ಐ ಟಿ. ಗುರುರಾಜ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಕೋಳಿಪೇಟೆ ರಾಘವಾನಂದ ಅವಧೂತ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ವೃತ್ತದ ಮೂಲಕ ಹಾದು ವೀರಭದ್ರಪ್ಪ ವೃತ್ತಕ್ಕೆ ಆಗಮಿಸಿ ಬಳಿಕ ಅಲ್ಲಿ ಕೆಲಕಾಲ ಪ್ರತಿಭಟಿಸಲಾಯಿತು.

ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವಜೀರಸಾಬ್ ತಳಕಲ್ಲ, ರೈತ ಮುಖಂಡರಾದ ಮಲ್ಲಪ್ಪ ಚಳಮರದ್, ಯಲ್ಲಪ್ಪ ಕಲಾಲ್, ಶರಣಪ್ಪ, ನಗರ ಘಟಕದ ಅಧ್ಯಕ್ಷ ಶಿವು ಭಂಗಿ, ಹನುಮಪ್ಪ ಮರಡಿ, ಕಳಕಪ್ಪ, ಗಂಗಮ್ಮ ಹುಡೇದ್, ಶರಣಪ್ಪ ಚಂಡೂರು, ಶರಣಪ್ಪ ಯತ್ನಟ್ಟಿ, ಗವಿಸಿದ್ದಪ್ಪ ಜಿಜಿನ್, ಈಶಪ್ಪ ಸಬರದ್, ಉಮೇಶ ಬೆದವಟ್ಟಿ, ಬಸವರಾಜ ದಿವಟರ, ಬಸವರಾಜ ಸಬರದ್, ಹನುಮಪ್ಪ ಗೊರ್ಲೆಕೊಪ್ಪ, ಈರಪ್ಪ ಕುಡ್ಲೂರ, ಬಸವರಾಜ ಈಬೇರಿ, ಕಾಶೀಮಅಲಿ ಸಂಗಡಿ, ಬಸಪ್ಪ ಲಾಳಗೊಂಡರ್, ಮಲ್ಲಪ್ಪ ಹೂಗಾರ, ಗವಿಸಿದ್ದಪ್ಪ ತಳಬಾಳ ಸೇರಿದಂತೆ ರೈತ ಸಂಘದ ಸದಸ್ಯರು ಇದ್ದರು.