ಸಾರಾಂಶ
ಗದಗ: ಕಾಂಗ್ರೆಸ್ ಶಾಸಕ, ಸಚಿವರು ಜಾತಿ ಜನಗಣತಿ ವಿಷಯದಲ್ಲಿ ಸಮಾಜದ ಹಿತ ಕಾಯುವತ್ತ ಗಮನಹರಿಸಬೇಕು ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗರ ವಿರೋಧಿ ನೀತಿಯನ್ನು ನಿರಂತರವಾಗಿ ಅನುಸರಿಸುತ್ತಲೇ ಬಂದಿದೆ. ಜಾತಿ ಜನಗಣತಿ ವಿಷಯದಲ್ಲಿಯೂ ಅದನ್ನು ಮುಂದುವರಿಸಿದೆ ಎಂದು ಆರೋಪಿಸಿದರು.ನಾವು ಯಾವುದೇ ಹಿಂದುಳಿದ ಸಮುದಾಯಗಳ ವಿರೋಧಿಗಳಲ್ಲ, ಅವರಿಗೆ ಸಿಗಬೇಕಾದದ್ದು ಸಂವಿಧಾನ ಬದ್ಧವಾಗಿ ಸಿಗಲಿ, ನಮಗೆ ಸಿಗಬೇಕಾದದ್ದು ನಮಗೂ ಸಿಗಲಿ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರ ಹಾಗೂ ಅವರ ಕುರ್ಚಿ ಅಲ್ಲಾಡುವ ಸಂದರ್ಭಗಳಲ್ಲಿ ಈ ರೀತಿಯ ವಿಷಯಗಳನ್ನು ಮುನ್ನೆಲೆಗೆ ತಂದು ರಾಜ್ಯದ ಜನರ ಗಮನವನ್ನು ಬೇರೆ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಸದ್ಯ ಜಾತಿ ಜನಗಣತಿ ವಿಷಯವೂ ಕೂಡ ಅದರ ಒಂದು ಭಾಗವಾಗಿದೆ. ಈಗಾಗಲೇ ವೀರಶೈವ ಮಹಾಸಭಾ, ಒಕ್ಕಲಿಗರ ಪ್ರಮುಖ ನಾಯಕರು ಜಾತಿ ಜನಗಣತಿ ವಿಷಯವನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಮುಖ್ಯಮಂತ್ರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕಾಗಿ ನಾನು ಕಾಂಗ್ರೆಸ್ಸಿನಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಶಾಸಕರು, ಸಚಿವರಲ್ಲಿ ವಿನಂತಿ ಮಾಡುತ್ತೇನೆ, ನಿಮ್ಮ ಕುರ್ಚಿ ಆಸೆಗಾಗಿ ಸಮಾಜದ ಹಿತ ಬಲಿ ಕೊಡಬೇಡಿ ಎಂದರು.
ಎಲ್ಲ ಶಾಸಕರು ಪೇಪರ್ ಟೈಗರ್: ರಾಜ್ಯದಲ್ಲಿ ಚುನಾಯಿತರಾಗಿರುವ ಎಲ್ಲ ಶಾಸಕರು ಪೇಪರ್ ಟೈಗರ್‌ಗಳಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅನುದಾನವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಕೇವಲ ನೇಮಕವಾಗಿರುವ ಸಮಿತಿಗಳಲ್ಲಿ ಸಹಿ ಮಾಡುವುದೊಂದೇ ಕೆಲಸವಾಗಿದೆ. ಹಾಗಾಗಿ ನನ್ನನ್ನು ಸೇರಿದಂತೆ, ಶಾಸಕರು ಪೇಪರ್ ಟೈಗರ್‌ಗಳಾಗಿದ್ದಾರೆ ಎಂದು ಸಿ.ಸಿ. ಪಾಟೀಲ ಹೇಳಿದರು.32 ಸಾವಿರ ಕೋಟಿ ಬಾಕಿ: ರಾಜ್ಯದಲ್ಲಿ ಬಿಬಿಎಂಪಿಯನ್ನು ಹೊರತುಪಡಿಸಿದಂತೆ ಇನ್ನುಳಿದ ಗುತ್ತಿಗೆದಾರರಿಗೆ ₹32 ಸಾವಿರ ಕೋಟಿಗೂ ಅಧಿಕ ಬಾಕಿ ಹಣವನ್ನು ಸರ್ಕಾರ ನೀಡಬೇಕಾಗಿದೆ. ಈ ವಿಷಯದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಪೂರ್ಣಗೊಂಡರೂ ಹಿಂದಿನ ಸರ್ಕಾರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಹಣ ನೀಡಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದರೆ ಸರ್ಕಾರಕ್ಕೆ ಸಂದಾಯವಾಗುವ ತೆರಿಗೆ ಹಣ ಎಲ್ಲಿ ಹೋಗಿದೆ? ಎಂದು ಪ್ರಶ್ನಿಸಿದರು.
ಸಂವಿಧಾನ ವಿರೋಧಿ ಸರ್ಕಾರ: ಕಾಂಗ್ರೆಸ್ಸಿನವರು ಕೈಯಲ್ಲಿ ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡು ಪದೇ ಪದೇ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ ಅಧಿಕಾರ ನಡೆಸುವ ವೇಳೆಯಲ್ಲಿ ಮಾತ್ರ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದ್ದಾರೆ. ಸಿಟಿ ರವಿ ಪ್ರಕರಣ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಅಂದು ಮಾಧ್ಯಮಗಳು ಸಿಟಿ ರವಿ ಅವರನ್ನು ಫಾಲೋ ಮಾಡದೆ ಇದ್ದಲ್ಲಿ ಸಿಟಿ ರವಿ ಅವರಿಗೆ ಏನಾಗುತ್ತಿತ್ತು? ಈ ರೀತಿ ಅಪರಾಧ ಮಾಡಿದ ಅಧಿಕಾರಿಗಳ ಮೇಲೆ ಇನ್ನೂ ಕ್ರಮವಾಗಿಲ್ಲ. ಗೃಹ ಸಚಿವರು ಭದ್ರತೆಗಾಗಿ ಅವರನ್ನು ಬೇರೆಡೆ ಸುತ್ತಾಡಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮ ಪೊಲೀಸರಿಗೆ ಶಾಸಕರಿಗೆ ಭದ್ರತೆ ನೀಡುವಷ್ಟು ಶಕ್ತಿ ಇಲ್ಲವೇ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ, ಅನಿಲ ಅಬ್ಬಿಗೇರಿ, ಶಿವರಾಜಗೌಡ ಹಿರೇಮನಿಪಾಟೀಲ, ಶ್ರೀಪತಿ ಉಡುಪಿ, ವಸಂತ ಮೇಟಿ, ಮಹೇಶ ದಾಸರ ಹಾಜರಿದ್ದರು.