ಸರ್ಕಾರ ಕಾಂತರಾಜ್ ವರದಿಯ ಅಂಗೀಕಾರಕ್ಕೆ ಮುಂದಾಗಲಿ

| Published : Dec 14 2024, 12:45 AM IST

ಸಾರಾಂಶ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇನ್ನು ಆರು ತಿಂಗಳಲ್ಲಿ ಕಾಂತರಾಜ್ ವರದಿಯ ಅಂಗೀಕಾರ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿವರೆಗೂ ಯಾವುದೇ ಅಂಗೀಕಾರ ಆಗಿಲ್ಲ. ಕೆಲವರು ಈ ವರದಿಯನ್ನು ಅವೈಜ್ಞಾನಿಕ ಎಂದು ಗುರುತರವಾದ ಆಪಾದನೆ ಮಾಡುತ್ತಿದ್ದಾರೆ. ಈ ವರದಿಯನ್ನು ಸಂಪುಟದಲ್ಲಿ ಮಂಡಿಸಿ ಚರ್ಚಿಸಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಜಾರಿಗೆ ತರಬೇಕು ಎಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್ ಸರ್ಕಾರವನ್ನು ಒತಾಯಿಸಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇನ್ನು ಆರು ತಿಂಗಳಲ್ಲಿ ಕಾಂತರಾಜ್ ವರದಿಯ ಅಂಗೀಕಾರ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿವರೆಗೂ ಯಾವುದೇ ಅಂಗೀಕಾರ ಆಗಿಲ್ಲ. ಕೆಲವರು ಈ ವರದಿಯನ್ನು ಅವೈಜ್ಞಾನಿಕ ಎಂದು ಗುರುತರವಾದ ಆಪಾದನೆ ಮಾಡುತ್ತಿದ್ದಾರೆ. ಈ ವರದಿಯನ್ನು ಸಂಪುಟದಲ್ಲಿ ಮಂಡಿಸಿ ಚರ್ಚಿಸಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಜಾರಿಗೆ ತರಬೇಕು ಎಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್ ಸರ್ಕಾರವನ್ನು ಒತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರದಿಗಾಗಿ167 ಕೋಟಿ ರು. ವೆಚ್ಚದಲ್ಲಿ 63 ಸಾವಿರ ಸಿಬ್ಬಂದಿ ನಿರಂತರ ಮನೆ ಮನೆಗೆ ಹೋಗಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಕೊಟ್ಟ ಮಾತಿನಂತೆ ಜಾರಿ ಮಾಡಬೇಕಿತ್ತು. ಆದರೆ ಉಪಚುನಾವಣೆ ಬಂದ ಕಾರಣ ಅದು ಆಗಲಿಲ್ಲ. ಈಗಲಾದರೂ ಕಾಂತರಾಜ್ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಿದ್ದರಾಮಯ್ಯರಂತಹವರಿಂದ ಮಾತ್ರ ಸಾಧ್ಯ. ಈ ವರದಿಯಿಂದ 197 ಹಿಂದುಳಿದ ಜಾತಿಗಳಿಗೆ ನ್ಯಾಯ ಸಿಗುತ್ತದೆ. ದಮನಿತ ಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಮತ್ತು ಸಾಮಾಜಿಕ ನ್ಯಾಯದ ಪರ ಇರುವ ಮುಖ್ಯಮಂತ್ರಿಗಳು ವರದಿಯನ್ನು ಒಪ್ಪಿ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸಿ ರಾಜ್ಯದಲ್ಲಿ ಜಾರಿಗೊಳಿಸುತ್ತೇವೆಂದು ವಾಗ್ದಾನ ನೀಡಿತ್ತು ಎನ್ನುವುದನ್ನು ಮರೆಯಬಾರದು ಎಂದರು.

ರಾಜ್ಯದಲ್ಲಿ ಪ್ರಬಲ ಜಾತಿಗಳಿಂದ 2ಎ ಗೆ ಸೇರಿಸಬೇಕೆಂದು ಹೋರಾಟ ಮಾಡಲಾಗುತ್ತಿದೆ. ಇದು ರಕ್ತ ಕ್ರಾಂತಿಗೆ, ಜಾತಿ-ಜಾತಿಗಳ ಮಧ್ಯೆ ಹೋರಾಟಕ್ಕೆ ಕಾರಣವಾಗಬಹುದು. 2ಎ ಮೀಸಲಾತಿಯ ಹೋರಾಟಗಾರರಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಸವಣ್ಣರವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ ಸನ್ಮಾನಿಸಿದ್ದರು. ಆದರೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದೇ ಇರುವುದಕ್ಕೆ ಸಿದ್ದರಾಮಯ್ಯರವರು ಲಿಂಗಾಯಿತ ವಿರೋಧಿ ಎಂದು ಆಪಾದನೆ ಮಾಡುತ್ತಿದ್ದಾರೆ. ಆದರೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಅಡಿಯಲ್ಲಿ ಬರಲಿಕ್ಕೆ ನಾವು ಬಿಡುವುದಿಲ್ಲ. ಈ ಬಗ್ಗೆ ಒಕ್ಕೂಟ ಉಗ್ರವಾದ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.

ಚಳಿಗಾಲದ ಅಧಿವೇಶನವು ಮುಗಿಯುವದರೊಳಗೆ ಸಂಪುಟ ಸಭೆಯನ್ನು ನಡೆಸಿ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಲು ತೀರ್ಮಾನಿಸಬೇಕು. ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಇತ್ತೀಚಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಗೆ ಸೇರಲು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದು, ಯಾವುದೇ ಕಾರಣಕ್ಕೂ ಮುಂದುವರೆದ ಜಾತಿಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು. ಒಂದು ವೇಳೆ ಮುಂದುವರೆದ ಜಾತಿಗಳು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಗೆ ಸೇರಿದ್ದೇ ಆದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಯಲ್ಲಿರುವ ಸುಮಾರು 102 ಹಿಂದುಳಿದ, ಅತಿ ಹಿಂದುಳಿದ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದರು.

ಶೋಷಿತ ಸಮುದಾಯಗಳ ಬಗ್ಗೆ ರಾಜ್ಯ ಸರ್ಕಾರವು ಯಾವ ನಿಲುವನ್ನು ಹೊಂದಿದೆ ಎಂಬುದರ ಬಗ್ಗೆ ಶೀಘ್ರವೇ ರಾಜ್ಯ ಸರ್ಕಾರವು ಸ್ಪಷ್ಟವಾಗಿ ತಿಳಿಸಬೇಕು. ಇಲ್ಲವಾದಲ್ಲಿ ಡಿ.18 ರಂದು ಬೆಳಗಾವಿ ಚಲೋ ಮತ್ತು ವಿಧಾನಸೌಧ ಮುಂಭಾಗದಲ್ಲಿ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಹೆಚ್.ಮಂಜಪ್ಪ, ಸಂಚಾಲಕರಾದ ಡಿ.ದುರುಗೇಶ್, ಸಾಧಿಕ್‍ವುಲ್ಲಾ ಇದ್ದರು.