ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಸರ್ಕಾರ ಬಜೆಟ್ ಮಂಡನೆಯ ಸಿದ್ಧತೆಯಲ್ಲಿದ್ದು, ವಿಜಯಪುರ ಜಿಲ್ಲೆಯಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕಿರುವ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಬೇಕಾದ ಸೌಲಭ್ಯಗಳು ಹಾಗೂ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸಬೇಕು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಜಿಲ್ಲೆಯ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಶಾಸಕರೆಲ್ಲ ಸೇರಿ ಜಿಲ್ಲೆಯ ಸಮಸ್ಯೆಗಳ ಕುರಿತು ಸಭೆ ಮಾಡಿ ಜಿಲ್ಲೆಗೆ ಬೇಕಾದ ಅನುಕೂಲ ತರಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಡಿಯುವ ನೀರು ಪೂರೈಕೆದಾರರಾದ ಗುತ್ತಿಗೆದಾರರಿಗೆ ಸಂಪೂರ್ಣ ಬಿಲ್ ಪಾವತಿ ಆಗಿಲ್ಲ. ಜಿಲ್ಲೆಯಯಲ್ಲಿರುವ ಸಾಕಷ್ಟು ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಮೇಲಿಂದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅವರ ಬೆಳವಣಿಗೆ ಸಹಿಸಲಾಗದೆ ಯತ್ನಾಳ ಹೀಗೆ ಮಾತನಾಡುತ್ತಿದ್ದು, ಯತ್ನಾಳರ ವರ್ತನೆ ಖಂಡಿಸುತ್ತೇನೆ. ನಾನು ಸಿಎಂ ಆಗುತ್ತೇನೆ ಎಂದು ಯತ್ನಾಳ ಹೇಳುತ್ತಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸಿಎಂ ಆಗಲು ಬೇಕಾದ ಮಾರ್ಗಗಳನ್ನು ಅನುಸರಿಸಬೇಕು. ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗುವ ಮೂಲಕ ಸಿಎಂ ಸ್ಥಾನದ ಹತ್ತಿರಕ್ಕೆ ಹೋಗಿದ್ದಾರೆ. ಹಾಗಾಗಿ ಅವರ ಹೆಸರು ಕೆಡಿಸಲು ಹತ್ತು ಬಾರಿ ಸುಳ್ಳು ಹೇಳಿದರೂ ಪ್ರಯೋಜನವಿಲ್ಲ, ಜನರು ಅದನ್ನು ನಂಬುವುದಿಲ್ಲ ಎಂದರು.ಬಿ.ವೈ.ವಿಜಯೇಂದ್ರ ಅವರಿಗೆ ಯಡಿಯೂರಪ್ಪರ ಮಗ ಎಂದು ರಾಜ್ಯಾಧ್ಯಕ್ಷರಾಗಲು ಅವಕಾಶ ಕೊಟ್ಟಿಲ್ಲ. ಅವರು ಪಕ್ಷದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿ ರಾಜ್ಯಾಧ್ಯಕ್ಷರಾಗಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ 18 ಸೀಟುಗಳನ್ನು ಗೆಲ್ಲಲು ವಿಜಯೇಂದ್ರ ಪಾತ್ರ ಬಹಳವಿದೆ. ಕಾಂಗ್ರೆಸ್ ಸರ್ಕಾರ ಮಾಡಿರುವ ವಾಲ್ಮಿಕಿ ಹಗರಣ ಬಯಲು, ಮುಡಾ ಹೋರಾಟ, ಅತಿವೃಷ್ಠಿಯಾದಾಗ ಪರಿಹಾರದ ಹಣಕ್ಕಾಗಿ ತಂಡ ರಚಿಸಿ ಹೋರಾಟ ಮಾಡಿದ್ದು ಎಲ್ಲವೂ ವಿಜಯೇಂದ್ರ ಮಾಡಿದ್ದಾರೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ನೆರಳಿನಲ್ಲಿ ಬೆಳೆದ ಯತ್ನಾಳರು, ಈಗ ಸಂದರ್ಭಾನುಸಾರವಾಗಿ ಮಾತನಾಡುವುದು ಸರಿಯಲ್ಲ. ಅದು ಅವರ ವ್ಯಕ್ತಿತ್ವಕ್ಕೆ ತಕ್ಕದಲ್ಲ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಬಡವರಿಗೆ ಕೊಟ್ಟಿದ್ದಾರೆ. ಅದರಲ್ಲಿ ಭಾಗ್ಯಲಕ್ಷ್ಮಿ ಬಾಂಡ್, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ಸಂಧ್ಯಾ ಸುರಕ್ಷಾ ಯೋಜನೆ, ಹೈನುಗಾರಿಕೆಗೆ ಉತ್ತೇಜನ ನೀಡುವುದು ಸೇರಿದಂತೆ ಹಲವು ನಿಗಮಗಳನ್ನು ಸ್ಥಾಪಿಸಿ, ಹಲವು ಯೋಜನೆಗಳಿಗೆ ವಿಶೇಷ ಅನುದಾನವನ್ನು ಕೊಟ್ಟಿದ್ದಾರೆ. ಜಾತ್ಯಾತೀತವಾಗಿ ಎಲ್ಲರನ್ನು ಸಮನಾಗಿ ಕಂಡು, ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಿದವರು ಯಡಿಯೂರಪ್ಪನವರು. ಅಂತಹವರ ಬಗ್ಗೆ ಯತ್ನಾಳರು ಮಾತ್ರವಲ್ಲ, ಯಾವುದೇ ಪಕ್ಷದಲ್ಲಿರುವ ಯಾವುದೇ ರಾಜಕಾರಣಿಯೂ ಕೂಡ ವೈಯಕ್ತಿಕವಾಗಿ ಹೋಗಿ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, ಚಿದಾನಂದ ಚಲವಾದಿ, ವಿಜಯ ಜೋಶಿ ಇದ್ದರು.
ಯತ್ನಾಳರು ಎಲ್ಲರ ಬಗ್ಗೆ ವಾಗ್ದಾಳಿ ನಡೆಸಿ ತಪ್ಪು ಮಾಡಿದ್ದಾರೆ. ಈಗ ವಾಪಸ್ ಪಕ್ಷಕ್ಕೆ ಸೇರಬೇಕೆಂದು ಯತ್ನಿಸುತ್ತಿದ್ದಾರೆ. ಆದರೆ ಹೈಕಮಾಂಡ್ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಪಕ್ಷದಿಂದ ಉಚ್ಛಾಟನೆಯಾದರೂ ಪಕ್ಷದವರ ಬಗ್ಗೆ ಯತ್ನಾಳರು ಏಕೆ ಮಾತನಾಡುತ್ತಾರೆ?. ಇನ್ನು ಉಚ್ಚಾಟಿತ ಶಾಸಕ ಯತ್ನಾಳರೊಂದಿಗೆ ಸದಾಕಾಲ ಇರುವ ಪಕ್ಷದ ಪಾಲಿಕೆ ಸದಸ್ಯರು ಬಿ.ವೈ.ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ಬಗ್ಗೆ ಯತ್ನಾಳರು ಮಾತನಾಡುವಾಗ ಪಕ್ಕದಲ್ಲಿ ಕುಳಿತು ಹಲ್ಲು ಕಿಸಿಯುವುದು ಬಿಡಬೇಕು. ಇನ್ನುಮುಂದೆ ಹಾಗೇನಾದರೂ ಆದರೆ ಹೈಕಮಾಂಡ್‌ಗೆ ತಿಳಿಸಿ, ಅವರಿಗೆ ನೋಟಿಸ್ ಕೊಟ್ಟು ಅಂತಹ ಪಾಲಿಕೆ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.- ಗುರುಲಿಂಗಪ್ಪ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ