ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ

| Published : Dec 04 2024, 12:34 AM IST

ಸಾರಾಂಶ

ಬೀದಿಬದಿ ವ್ಯಾಪಾರಿಗಳಿಗೆ ಶಾಸಕ ಬೇಳೂರು ಸಾಲಪತ್ರ ವಿತರಿಸಿದರು

ಕನ್ನಡಪ್ರಭ ವಾರ್ತೆ ಸಾಗರ

ಬಡತನ ನಿರ್ಮೂಲನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದರೆ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ 1.22 ಕೋಟಿ ಕುಟುಂಬ ಸ್ವಾಭಿಮಾನದ ಬದುಕು ನಡೆಸಲು ಮುನ್ನುಡಿ ಬರೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಮತ್ತು ನಗರಸಭೆ ವತಿಯಿಂದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಸಾಲಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿ ಅವರ ಬದುಕು ಹಸನಾಗಬೇಕು ಎಂದು ಹೇಳಿದರು.

ಬೀದಿಬದಿ ವ್ಯಾಪಾರಿಗಳು ತಮ್ಮ ಉದ್ಯಮವನ್ನು ಹಂತಹಂತವಾಗಿ ಅಭಿವೃದ್ದಿಪಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದಲ್ಲಿ ಉನ್ನತ ಹುದ್ದೆಗೆ ಹೋಗುವಂತೆ ವೇದಿಕೆ ರೂಪಿಸಿಕೊಡಬೇಕು. ಬೀದಿಬದಿ ವ್ಯಾಪಾರಿಗಳಿಗೆ ಕನಿಷ್ಟ ₹10 ಲಕ್ಷ ವಿಮಾ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಇಲಾಖೆ ಚಿಂತನೆ ನಡೆಸಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲು ಸೂಚನೆ ನೀಡಿದ್ದಾಗ್ಯೂ ಕೆಲವು ಬ್ಯಾಂಕುಗಳು ಅನಗತ್ಯವಾಗಿ ಅಲೆದಾಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಹಿಸುವುದಿಲ್ಲ. ಬೀದಿಬದಿ ವ್ಯಾಪಾರಿಗಳಿಗೆ ಪಟ್ಟಣದ 4 ದಿಕ್ಕುಗಳಲ್ಲಿ ಸುಸಜ್ಜಿತ ಫುಡ್‌ಕೋರ್ಟ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಪಡೆದ ಸಾಲವನ್ನು ನಿಗಧಿತ ಸಮಯದೊಳಗೆ ತೀರಿಸುವ ಮೂಲಕ ಹೆಚ್ಚಿನ ಸಾಲ ಪಡೆಯಲು ಗಮನ ಹರಿಸಬೇಕು. ಸುಮಾರು ₹95ಲಕ್ಷ ವೆಚ್ಚದಲ್ಲಿ ಫುಡ್‌ಕೋರ್ಟ್ ನಿರ್ಮಾಣ ಮಾಡಲು ಹಣ ಮೀಸಲಿಡಲಾಗಿದೆ. ಪ್ರಥಮ ಹಂತದಲ್ಲಿ 70 ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಈ ವೇಳೆ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಲಲಿತಮ್ಮ, ಉಮೇಶ್, ಸೈಯದ್ ಜಾಕೀರ್, ಹಮೀದ್, ರವಿ ಲಿಂಗನಮಕ್ಕಿ, ಕೆನರಾಬ್ಯಾಂಕ್‌ನ ಶ್ರೀಕಾಂತ್, ಜಿಲ್ಲಾ ಸ್ವನಿಧಿ ಕಾರ್ಯಕ್ರಮಾಧಿಕಾರಿ ಸುರೇಶ್, ಕಾರ್ಮಿಕ ಇಲಾಖೆ ಶಿಲ್ಪ, ಸಮನ್ವಯ ಕಾಶಿ, ಭವ್ಯ ಕೃಷ್ಣಮೂರ್ತಿ, ಹಮೀದ್ ಖಾನ್ ಇನ್ನಿತರರು ಹಾಜರಿದ್ದರು.