ಸಾರಾಂಶ
- ಕೇಂದ್ರ ಸರ್ಕಾರ ವಿರುದ್ಧ ಭವಿಷ್ಯ ನಿಧಿ ಕಚೇರಿ ಎದುರು ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪಿಂಚಣಿದಾರರು ತಮ್ಮ ನ್ಯಾಯಯುತ ಪಿಂಚಣಿ ಹಕ್ಕಿಗಾಗಿ ರಾಷ್ಟ್ರೀಯ ಆಂದೋಲನಾ ಸಮಿತಿ, ಇಪಿಎಸ್ 95 ನಿವೃತ್ತಿ ಪಿಂಚಣಿದಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಿದರು.ನಗರದ ಕೆಬಿ ಬಡಾವಣೆ ಭವಿಷ್ಯ ನಿಧಿ ಕಚೇರಿ ಎದುರು ಉಭಯ ಸಂಘಟನೆಗಳ ನೇತೃತ್ವದಲ್ಲಿ ಘೋಷಣೆಗಳನ್ನು ಕೂಗಿದ ಪಿಂಚಣಿದಾರರು, ಕಚೇರಿ ಮುಖ್ಯಸ್ಥರ ಮುಖಾಂತರ ಕೇಂದ್ರ ಕಚೇರಿಗೆ ಮನವಿ ಅರ್ಪಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಮರುಳಸಿದ್ದಯ್ಯ, ಪಿಂಚಣಿದಾರರ ನ್ಯಾಯಯುತ ಪಿಂಚಣಿ ಹಕ್ಕಿಗಾಗಿ ಹೋರಾಟ ಆರಂಭಿಸಿ, ದಶಕಗಳೇ ಕಳೆದಿವೆ. ಆದರೆ, ಇದುವರೆಗೂ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಿಲ್ಲ. ಇದು ಅತ್ಯಂತ ನೋವಿನ ಮತ್ತು ಶೋಚನೀಯ ಸಂಗತಿ ಎಂದರು.ಕನಿಷ್ಠ ಪಿಂಚಣಿ ₹7500, ಡಿಎ, ವೈದ್ಯಕೀಯ ಸೌಲಭ್ಯ, ವಿಧವೆಯರಿಗೆ ಪೂರ್ಣವೇತನ, ಪಿಂಚಣಿ ವಂಚಿತರಿಗೆ ಕನಿಷ್ಠ ಪಿಂಚಣಿ ₹5 ಸಾವಿರ ಹೀಗೆ ಅನೇಕ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದೇಶಾದ್ಯಂತ 1700 ಕಂಪನಿಗಳ ಲಕ್ಷಾಂತರ ನಿವೃತ್ತ ನೌಕರರು ತಮ್ಮ ಸಂಧ್ಯಾಕಾಲದ ಜೀವನಕ್ಕೆ ಹೋರಾಟ ನಡೆಸಬೇಕಾಗಿದೆ. ಇದರಲ್ಲಿ ಸರ್ಕಾರಿ, ಖಾಸಗಿ ಸ್ವಾಮ್ಯದ ಕಾರ್ಖಾನೆಗಳೂ ಸೇರಿವೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಕಾರ್ಮಿಕ ಸಚಿವ ಮನ್ಸೂಕ್ ಮಾಂಡೋವಿ ಹಾಗೂ ಭವಿಷ್ಯ ನಿಧಿ ಇಲಾಖೆ ಮುಖ್ಯ ಆಯುಕ್ತರಿಗೆ ಮನವಿ ನೀಡುವ ಮೂಲಕ ಮತ್ತೆ ನಮ್ಮ ಹೋರಾಟ ಮುಂದವರಿಸಿದ್ದೇವೆ. ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆಗಳು ನಮ್ಮ ಸಮಸ್ಯೆಗಳನ್ನು ಪರಿಹರಿಸಿ, ಆದಷ್ಟು ಬೇಗನೆ ಬೇಡಿಕೆಗಳನ್ನು ಈಡೇರಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ, ಇಳಿವಯಸ್ಸಿನ, ಸಂಧ್ಯಾ ಕಾಲದ ಜೀವನದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾದ ವಯೋವೃದ್ಧ ಪಿಂಚಣಿದಾರರು, ಅನಾರೋಗ್ಯಪೀಡಿತ ಪಿಂಚಣಿದಾರರು, ಅಸಹಾಯಕರಾದ ಪಿಂಚಣಿದಾರರು ಬೀದಿಗಿಳಿದು ಹೋರಾಟ ನಡೆಸಿ, ನಮ್ಮ ಹಕ್ಕಿಗಾಗಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಮರುಳಸಿದ್ದಪ್ಪ ಎಚ್ಚರಿಸಿದರು.ಸಂಘದ ಮಂಜುನಾಥ, ಎಂ.ಶಾಂತಪ್ಪ, ಗಂಗಾಧರ, ಚನ್ನಬಸಯ್ಯ, ಮಲ್ಲಿಕಾರ್ಜುನ ತಂಗಡಗಿ, ದತ್ತಪ್ಪ ಶೆಟ್ಟರ್ ಇತರರು ಇದ್ದರು.
- - -ಕೋಟ್ ಜೀವನದ ಅಂತ್ಯಕಾಲದಲ್ಲಿ ಪಿಂಚಣಿ ಇತರೆ ಸೌಲಭ್ಯಕ್ಕಾಗಿ ಭವಿಷ್ಯ ನಿಧಿ ಕಚೇರಿ ಎದುರು ಮಳೆ, ಬಿಸಿಲು, ಚಳಿಯನ್ನೂ ಲೆಕ್ಕಿಸದೇ ಹೋರಾಟ ಮಾಡಬೇಕಾಗಿದೆ. ಹೋರಾಟದ ಫಲ ಮಾತ್ರ ಮರೀಚಿಕೆಯಾಗಿದೆ. ದುರಾದೃಷ್ಟವೋ, ಏನೋ ಅಮಾಯಕ ಜೀವಗಳು ಇಳಿವಯಸ್ಸಿನಲ್ಲಿ ನೆಲೆ ಕಾಣದೇ ಕಮರಿಹೋಗಿವೆ
- ಕೆ.ಎಂ. ಮರುಳಸಿದ್ದಯ್ಯ, ಜಿಲ್ಲಾಧ್ಯಕ್ಷ- - -
-30ಕೆಡಿವಿಜಿ1:ದಾವಣಗೆರೆ ಭವಿಷ್ಯ ನಿಧಿ ಕಚೇರಿ ಎದುರು ಸೋಮವಾರ ಪಿಂಚಣಿದಾರರು ತಮ್ಮ ನ್ಯಾಯಯುತ ಪಿಂಚಣಿ ಹಕ್ಕಿಗಾಗಿ ರಾಷ್ಟ್ರೀಯ ಆಂದೋಲನಾ ಸಮಿತಿ, ಇಪಿಎಸ್ 95 ನಿವೃತ್ತಿ ಪಿಂಚಣಿದಾರರ ಸಂಘ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.