ಸಾರಾಂಶ
ಸರ್ಕಾರ ಹೊಸ ಸುತ್ತೋಲೆ ಹೊರಡಿಸಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ನಾಡಗೀತೆಯನ್ನು ಕೇವಲ ಸರ್ಕಾರಿ, ಅನುದಾನಿತ ಶಾಲೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಕಡ್ಡಾಯವಾಗಿ ಹಾಡಬೇಕೆಂದು ಸರ್ಕಾರ ಈಚೆಗೆ ಹೊಸ ಸುತ್ತೋಲೆ ಹೊರಡಿಸಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಬುಧವಾರ ಇಲ್ಲಿನ ವಿದ್ಯಾನಗರದ ಬಿವಿಬಿ ಎದುರು ಪ್ರತಿಭಟನೆ ನಡೆಸಿದರು.
ರಾಷ್ಟ್ರಕವಿ ಕುವೆಂಪು ರಚಿತ ಹಾಗೂ ರಾಜ್ಯದ ಅಧಿಕೃತ ನಾಡಗೀತೆಯಾದ "ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ " ಎಂಬುದು ನಾಡಿನ ವೈದ್ಯ ಪರಂಪರೆ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಈ ಹಿಂದೆ ಎಲ್ಲ ಅಧಿಕೃತ ಶಾಲೆಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಚಟುವಟಿಕೆಗಳು ಪ್ರಾರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ, ಇತ್ತೀಚಿನ ಸುತ್ತೋಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಎನ್ನುವ ಪದವನ್ನು ಕೈಬಿಟ್ಟು ಕೇವಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ನಾಡಗೀತೆ ಹಾಡಬೇಕೆಂದು ತಿದ್ದುಪಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.ಕನ್ನಡಿಗರು ಹುಟ್ಟು ಸ್ವಾಭಿಮಾನಿಗಳು ಎನ್ನುವುದನ್ನು ಸರ್ಕಾರವು ಮರೆತಂತಿದೆ. ಕನ್ನಡ ನಾಡು-ನುಡಿಯ, ನೆಲ-ಜಲದ ಸಾಹಿತ್ಯ-ಸಂಸ್ಕೃತಿಯ ಹೆಮ್ಮೆಯನ್ನು ಪ್ರತಿಯೊಬ್ಬ ಕನ್ನಡಿಗರು ರೋಮಾಂಚನಗೊಳ್ಳವಂತೆ ಕುವೆಂಪು ಅವರು ನಾಡಗೀತೆ ರಚಿಸಿದ್ದಾರೆ. ಸರ್ಕಾರದ ಹೊಸ ಸುತ್ತೋಲೆಯಿಂದಾಗಿ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನ ಅಂತಃಕರಣ ಕಲುಕಿದಂತಾಗಿದೆ. ನಮ್ಮ ನಾಡಿನ ಮಕ್ಕಳಲ್ಲಿ ತಾಯ್ನಾಡಿನ ಅಭಿಮಾನವನ್ನು ಜಾಗೃತಿಗೊಳಿಸುತ್ತಿದ್ದ ಏಕೈಕ ಮಾರ್ಗವನ್ನು ಸರ್ಕಾರ ತೊಡೆದು ಹಾಕಿದೆ ಎಂದು ದೂರಿದರು.
ಕೂಡಲೇ ಸರ್ಕಾರ ನಾಡಗೀತೆ ಬಗ್ಗೆ ಹೊರಡಿಸಿದ ಹೊಸ ಸುತ್ತೋಲೆಯನ್ನು ರದ್ದುಪಡಿಸಿ, ಮೊದಲಿನಂತೆಯೇ ಎಲ್ಲರೂ ಕಡ್ಡಾಯವಾಗಿ ನಾಡಗೀತೆಯನ್ನು ಹಾಡುವಂತೆ ಆದೇಶ ಹೊರಡಿಸಬೇಕು. ಒಂದು ವೇಳೆ ಸರ್ಕಾರ ತನ್ನ ನಿರ್ಧಾರ ಬದಲಿಸದೆ ಹೋದಲ್ಲಿ ಎಬಿವಿಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ಸಾಮೂಹಿಕ ನಾಡಗೀತೆ:
ಎಬಿವಿಬಿ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿವಿಬಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಭಟನೆಯ ವೇಳೆ ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು ಎಲ್ಲರೂ ಸಾಮೂಹಿಕವಾಗಿ ಹಾಡುವ ಮೂಲಕ ಗಮನ ಸೆಳೆದರು.